ಕಾರವಾರ: ಮಳೆ ಬಿರುಸುಗೊಂಡರೆ, ಗಾಳಿಯ ವೇಗ ಸ್ವಲ್ಪ ಹೆಚ್ಚಿದರೂ ಜಿಲ್ಲೆಯಲ್ಲಿನ ಹಳ್ಳಿಗಳಲ್ಲಷ್ಟೆ ಅಲ್ಲ, ನಗರ ಪ್ರದೇಶದಲ್ಲೂ ವಿದ್ಯುತ್ ನಿಲುಗಡೆ ಆಗುತ್ತದೆ. ಈ ವರ್ಷವಂತೂ ವಿದ್ಯುತ್ ವ್ಯತ್ಯಯದ ಸಮಸ್ಯೆ ಗಂಭೀರವಾಗಿದೆ.
ಗುಡ್ಡಗಾಡು ಪ್ರದೇಶಗಳೇ ಹೆಚ್ಚಿರುವ ಜಿಲ್ಲೆಯಲ್ಲಿ ಮಳೆಗಾಲದಲ್ಲಿ ಅಡೆತಡೆ ಇಲ್ಲದೆ ವಿದ್ಯುತ್ ಪೂರೈಕೆ ಮಾಡುವುದು ಕಷ್ಟ. ರಾಜ್ಯದ ಒಟ್ಟಾರೆ ವಿದ್ಯುತ್ ಉತ್ಪಾದನೆಯಲ್ಲಿ ಶೇ 24ರಷ್ಟು ಇಲ್ಲಿಯೇ ಉತ್ಪಾದನೆಯಾದರೂ ಜಿಲ್ಲೆಯ ಬಹುಭಾಗ ಮಾತ್ರ ಮಳೆಗಾಲದಲ್ಲಿ ಕತ್ತಲಲ್ಲಿಯೇ ಕಳೆಯಬೇಕಾಗುತ್ತಿದೆ.
ಗ್ರಾಮೀಣ ಪ್ರದೇಶಗಳಲ್ಲಂತೂ ದಿನಕ್ಕೆ ನಿರಂತರ 2–3 ತಾಸು ವಿದ್ಯುತ್ ಇದ್ದರೂ ಹೆಚ್ಚು ಎಂಬಂತ ಸ್ಥಿತಿ ಇದೆ. ಪದೇ ಪದೇ ವಿದ್ಯುತ್ ನಿಲುಗಡೆ ಮಾಡುವುದರಿಂದ ವಿದ್ಯಾರ್ಥಿಗಳ ಓದಿಗೆ ತೊಂದರೆಯಾಗುತ್ತಿದೆ. ಉದ್ದಿಮೆಗಳನ್ನು ನಡೆಸಲೂ ಅಡಚಣೆಯಾಗುತ್ತಿದೆ ಎಂಬುದು ಜನರ ದೂರು.
ಕಾರವಾರ ತಾಲ್ಲೂಕಿನ ಗಡಿಭಾಗದಲ್ಲಿನ ಸೂಳಗೇರಿ, ಬಾಳೆಮನೆ ಗ್ರಾಮಗಳಲ್ಲಿ ವಿದ್ಯುತ್ ನಿಲುಗಡೆಯಾಗಿ ಒಂದೂವರೆ ತಿಂಗಳು ಸಮೀಪಿಸಿದೆ. ವಿದ್ಯುತ್ ಉತ್ಪಾದಿಸುವ ಕೊಡಸಳ್ಳಿ ವಿದ್ಯುದಾಗಾರದಲ್ಲೂ ಜನರೇಟ್ ಬಳಸಿ ಯಂತ್ರೋಪಕರಣಗಳ ನಿರ್ವಹಣೆ ಮಾಡಬೇಕಾದ ಸ್ಥಿತಿ ಉಂಟಾಗಿದೆ.
ಶಿರಸಿ ತಾಲ್ಲೂಕಿನಲ್ಲಿ ಅಗತ್ಯ ಪ್ರಮಾಣದಲ್ಲಿ ವಿದ್ಯುತ್ ಉಪಕೇಂದ್ರಗಳು ಇಲ್ಲದಿರುವುದು ಹಲವು ಗ್ರಾಮಗಳಗೆ ನಿರಂತರ ವಿದ್ಯುತ್ ಸಮಸ್ಯೆಗೆ ಕಾರಣವಾಗುತ್ತಿದೆ. 40 ಕಿ.ಮೀಗೂ ಹೆಚ್ಚು ಅಂತರದ ದೇವನಳ್ಳಿ, ದೇವಿಮನೆಯಂತಹ ಪ್ರದೇಶಗಳಿಗೆ ಶಿರಸಿ ಗ್ರೀಡ್‍ನಿಂದ ವಿದ್ಯುತ್ ಪೂರೈಕೆ ಆಗಬೇಕು. ಹೀಗಾಗಿ, ಮಾರ್ಗ ಮಧ್ಯೆ ವಿದ್ಯುತ್ ತಂತಿಗಳ ಮೇಲೆ ಮರದ ಕೊಂಬೆಗಳು ಮುರಿದು ಬೀಳುವುದು, ಇನ್ಸುಲೇಟರ್ ಪಂಚರ್ ಪ್ರತಿ ದಿನ ಇದ್ದೇ ಇರುತ್ತದೆ ಎನ್ನುತ್ತಾರೆ ಮತ್ತಿಘಟ್ಟದ ಪ್ರಮೋದ ವೈದ್ಯ.
ಅಂಕೋಲಾ ತಾಲ್ಲೂಕಿನ ಹಿಲ್ಲೂರು, ಮಾಣಿಕಾರ, ಕಟೀನ್ಕಲ್, ಕೊಡ್ಲಗದ್ದೆ ಸೇರಿದಂತೆ ಇನ್ನಿತರ ಭಾಗದಲ್ಲಿ ವಿದ್ಯುತ್ ಸರಬರಾಜು ಸಮಸ್ಯೆ ಇದೆ. ಮೊಬೈಲ್ ನೆಟ್‌ವರ್ಕ್ ಕೂಡ ಇದರಿಂದ ಸಿಗದೆ ತೊಂದರೆಯಾಗುತ್ತಿದೆ ಎಂಬುದು ಮೂಲೆಮನೆ ಗ್ರಾಮದ ಗಗನ್ ನಾಯಕ ದೂರು.
ಹಳಿಯಾಳ ತಾಲ್ಲೂಕಿನ ಭಾಗವತಿ ಭಾಗದಲ್ಲಿ ಕಾಡಿನಂಚಿನಲ್ಲಿರುವ ಗ್ರಾಮಗಳೇ ಹೆಚ್ಚು. ಮಳೆಗಾಲದಲ್ಲಿ ಮರ, ಮರದ ಟೊಂಗೆಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದು ಪದೇ ಪದೇ ವಿದ್ಯುತ್ ವ್ಯತ್ಯಯ ಉಂಟಾಗುತ್ತಿದೆ ಎಂಬುದು ಗ್ರಾಮಸ್ಥರ ದೂರು.
ಯಲ್ಲಾಪುರ ತಾಲ್ಲೂಕಿನ ಬಹಳಷ್ಟು ಕಡೆ ತೋಟದ ಮಧ್ಯದಲ್ಲಿ ವಿದ್ಯುತ್ ಮಾರ್ಗವಿದೆ. ಮಲೆಗಾಲದಲ್ಲಿ ಮರ ಮುರಿದು ಬೀಳುವುದು ಹೆಚ್ಚು. ಇದರಿಂದ ಪದೇ ಪದೇ ವಿದ್ಯುತ್ ವ್ಯತ್ಯಯ ಸಹಜವಾಗಿದೆ. ಯಲ್ಲಾಪುರ- ತೇಲಂಗಾರ ಮಾರ್ಗ ಆಗಾಗ ಕೈ ಕೊಡುತ್ತಿದೆ. ಸುಂಕಸಾಳ–ಹೆಗ್ಗಾರಘಟ್ಟದ ಮೂಲಕ ಮಲವಳ್ಳಿಗೆ ವಿದ್ಯುತ್ ಪೂರೈಕೆ ಆದರೆ ಈ ಭಾಗದಲ್ಲಿ ವಿದ್ಯುತ್ ವ್ಯತ್ಯಯ ಸ್ವಲ್ಪಮಟ್ಟಿಗೆ ತಪ್ಪಲಿದೆ ಎನ್ನುತ್ತಾರೆ ಅರುಣ ಮಲವಳ್ಳಿ.
ಮುಂಡಗೋಡ ಪಟ್ಟಣ ವ್ಯಾಪ್ತಿಯಲ್ಲಿ ಆಗಾಗ ವಿದ್ಯುತ್ ಕೈಕೊಡುತ್ತದೆ. ತಾಲ್ಲೂಕಿನ ಕಾತೂರ, ಮಳಗಿ ಭಾಗದಲ್ಲಿ ವಿದ್ಯುತ್ ಕೈಕೊಡುವುದು ಮುಂದುವರೆದಿದೆ. ಮಳೆಗಾಲದಲ್ಲಿ ಗಿಡಮರಗಳು ವಿದ್ಯುತ್ ತಂತಿಯ ಮೇಲೆ ಬಿದ್ದು, ದಿನಗಟ್ಟಲೇ ವಿದ್ಯುತ್ ಕಡಿತವಾಗುತ್ತಿರುವ ಘಟನೆಗಳು ನಡೆದಿವೆ.
ಗೋಕರ್ಣದಲ್ಲಿ ವಿದ್ಯುತ್ ಪರಿವರ್ತಕಗಳು ಹೆಚ್ಚಿನ ಸಮಸ್ಯೆಗೆ ಒಳಗಾಗುತ್ತಿದೆ. ಕುಮಟಾದಿಂದ ಗೋಕರ್ಣಕ್ಕೆ ವಿದ್ಯುತ್ ಸರಬರಾಜಾಗುತ್ತಿರುವ 33 ಕೆ.ವಿ ತಂತಿಯ ಸಮಸ್ಯೆಯಿದೆ. ಪದೇ ಪದೇ ಮರಗಳು ಪರಿವರ್ತಕಗಳ ಮೇಲೆ ಬೀಳುತ್ತಿರುವುದರಿಂದ ವಿದ್ಯುತ್ ವ್ಯತ್ಯಯವಾಗುತ್ತಿದೆ. ಅದನ್ನು ತಿರುಗಿ ಅಳವಡಿಸುವುದೇ ಸವಾಲಿನ ಕೆಲಸವಾಗಿದೆ ಎಂದು ಹೆಸ್ಕಾಂ ಅಧಿಕಾರಿ ಗೋಪಿನಾಥ ರೆಡ್ಡಿ ಹೇಳುತ್ತಾರೆ.
ಹೊನ್ನಾವರ ತಾಲ್ಲೂಕಿನಲ್ಲಿ ಮಳೆಗಾಲ ಆರಂಭವಾಗಿ ಹಲವು ದಿನಗಳ ಬಳಿಕ ಈಚೆಗಷ್ಟೇ ವಿದ್ಯುತ್ ತಂತಿಗಳು ಹಾದು ಹೋಗಿರುವ ಮಾರ್ಗದಲ್ಲಿ ಜಂಗಲ್ ಕಟಿಂಗ್ ಆರಂಭವಾಗಿದ್ದು ಮರ, ಗಿಡಗಳ ಸಾಮೂಹಿಕ ಹನನ ಕಾರ್ಯ ನಡೆದಿದೆ. ಮಹಿಮೆ, ಜನಕಡ್ಕಲ್ ಮೊದಲಾದ ಅರಣ್ಯ ಪ್ರದೇಶಗಳು ವಿದ್ಯುತ್ ವ್ಯತ್ಯಯದಿಂದ ಹೆಚ್ಚು ಬಾಧಿತವಾಗಿದ್ದು ಸಾರ್ವಜನಿಕರು ಹಾಗೂ ಇಲಾಖೆಯ ಸಿಬ್ಬಂದಿ ನಡುವೆ ಆಗಾಗ ಜಟಾಪಟಿ ನಡೆದಿದೆ.
ಕುಮಟಾ ತಾಲ್ಲೂಕಿನ ಹಳ್ಳಿಗಳಲ್ಲಿ ವಿದ್ಯುತ್ ವ್ಯತ್ಯಯದ ಸಮಸ್ಯೆ ಗಂಭೀರವಾಗಿದೆ. ‘ವಿದ್ಯುತ್ ಕಂಬಗಳ ಬಳಿ ಇರುವ ಮರಗಳನ್ನು ಏಕಾಏಕಿ ಕಡಿಯಲು ಅರಣ್ಯ ಇಲಾಖೆ ಅನುಮತಿ ನೀಡುವುದಿಲ್ಲ. ಶಿರಸಿ -ಕುಮಟಾ ನಡುವಿನ ದಟ್ಟ ಕಾಡಿನ ಹತ್ತಾರು ಕಿ.ಮೀ ದೂರ ವಿದ್ಯುತ್ ಲೈನ್ ಹಾದು ಹೋಗಿರುವುದರಿಂದಲೂ ಸಮಸ್ಯೆ ಹೆಚ್ಚು’ ಎಂದು ಹೆಸ್ಕಾಂ ಎ.ಇ.ಇ ರಾಜೇಶ ಮಡಿವಾಳ ಹೇಳಿದರು.
‘ಸಿದ್ದಾಪುರ ತಾಲ್ಲೂಕಿನಲ್ಲಿ ಬಹುಪಾಲು ಗ್ರಾಮಗಳ ಜನರು ಮಳೆಗಾಲ ಬಂದರೆ ವಿದ್ಯುತ್ ಸಂಪರ್ಕ ಕಾಣುವುದೇ ಅಪರೂಪವಾಗುತ್ತಿದೆ. ಸಂಪಖಂಡ, ವಾಜಗೋಡು, ಲಂಬಾಪುರ ಗ್ರಾಮಗಳಲ್ಲಿ ಮಳೆಗಾಲ ಬಂತೆಂದರೆ ಕತ್ತಲಾವರಿಸಿದಂತೆ. ಕಂಬಗಳು ಮುರಿದು ಬಿದ್ದರೆ 3–4 ದಿನ ವಿದ್ಯುತ್ ಸಂಪರ್ಕ ಇಲ್ಲದೇ ಕಳೆಯಬೇಕಾಗುತ್ತದೆ’ ಎಂದು ಸಂಪಖಂಡದ ಜನಾರ್ಧನ ನಾಯ್ಕ ದೂರಿದರು.
ಪೂರಕ ಮಾಹಿತಿ: ರಾಜೇಂದ್ರ ಹೆಗಡೆ, ಸಂತೋಷಕುಮಾರ ಹಬ್ಬು, ಎಂ.ಜಿ.ಹೆಗಡೆ, ಎಂ.ಜಿ.ನಾಯ್ಕ, ರವಿ ಸೂರಿ, ಶಾಂತೇಶ ಬೆನಕನಕೊಪ್ಪ, ಮೋಹನ ನಾಯ್ಕ, ಪ್ರವೀಣಕುಮಾರ ಸುಲಾಖೆ, ಜ್ಞಾನೇಶ್ವರ ದೇಸಾಯಿ, ಸುಜಯ್ ಭಟ್, ವಿಶ್ವೇಶ್ವರ ಗಾಂವ್ಕರ, ಅಜಿತ್ ನಾಯಕ.
ನಿರಂತರ ವಿದ್ಯುತ್ ನಿಲುಗಡೆಯ ಸಮಸ್ಯೆಯಿಂದಾಗಿ ಗ್ರಾಮೀಣ ಪ್ರದೇಶದ ಜನರು ಕಡ್ಡಾಯವಾಗಿ ಚಾರ್ಜಿಂಗ್ ಬ್ಯಾಟರಿ ಚಾಲಿತ ವಿದ್ಯುತ್ ಸೌಲಭ್ಯ ಅಳವಡಿಸಿಕೊಳ್ಳುವ ಸ್ಥಿತಿ ಬಂದಿದೆನಾರಾಯಣ ನಾಯ್ಕ ಬೊಗರಿಬೈಲ್ ಗ್ರಾಮಸ್ಥ
ಬೇಸಿಗೆ ಅವಧಿಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದಿರುವುದರಿಂದ ಮಳೆಗಾಲದಲ್ಲಿ ಸಣ್ಣ ಗಾಳಿಮಳೆಗೂ ಟೊಂಗೆಗಳು ಮುರಿದುಬಿದ್ದು ವಿದ್ಯುತ್ ವ್ಯತ್ಯಯ ಉಂಟಾಗುತ್ತಿದೆಷಣ್ಮುಖ ಮುಂಡಗೋಡ ಸಾಮಾಜಿಕ ಕಾರ್ಯಕರ್ತ
ಜೊಯಿಡಾ–ಕಾರವಾರ ಗಡಿಭಾಗದ ಸೂಳಗೇರಿ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಇಲ್ಲದೆ ಒಂದೂವರೆ ತಿಂಗಳು ಕಳೆದಿದೆ. ಪ್ರತಿ ಮಳೆಗಾಲದಲ್ಲೂ ಇದೇ ಸಮಸ್ಯೆ ಅನುಭವಿಸುತ್ತಿದ್ದೇವೆನಾಗರಾಜ ನಾಯ್ಕ ಸೂಳಗೇರಿ ಗ್ರಾಮಸ್ಥ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.