
ಶಿರಸಿ: ‘ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರದ ಅರಣ್ಯ ವ್ಯಾಪ್ತಿಯ ಹಳ್ಳಿಗಳಲ್ಲಿನ ವಿದ್ಯುತ್ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲು ಇಂಧನ ಸಚಿವರಲ್ಲಿ ₹75 ಕೋಟಿಗೆ ವಿಶೇಷ ಮನವಿ ಸಲ್ಲಿಸಿದ್ದು, ಹಂತ ಹಂತವಾಗಿ ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ’ ಎಂದು ಶಾಸಕ ಭೀಮಣ್ಣ ನಾಯ್ಕ ತಿಳಿಸಿದರು.
ತಾಲ್ಲೂಕಿನ ಹುಲೇಕಲ್‌ನಲ್ಲಿ ಶನಿವಾರ ಅವರು ರೈತ ಸಂಪರ್ಕ ಕೇಂದ್ರದ ₹20 ಲಕ್ಷ ವೆಚ್ಚದ ನೂತನ ಗೋದಾಮನ್ನು ಉದ್ಘಾಟಿಸಿ ಹಾಗೂ ₹1.99 ಕೋಟಿ ವೆಚ್ಚದ ಹೆಸ್ಕಾಂ ಶಾಖಾ ಕಚೇರಿ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
‘ಕ್ಷೇತ್ರದಲ್ಲಿ ಅರಣ್ಯ ಭಾಗದಲ್ಲಿ ಇರುವ ಹಳ್ಳಿಗಳ ಸಂಖ್ಯೆ ಹೆಚ್ಚಿದ್ದು, ಗಾಳಿ-ಮಳೆಯಿಂದ ಹಲವು ಸಮಸ್ಯೆ ಎದುರಾಗುತ್ತಿದೆ. ಈ ನಿಟ್ಟಿನಲ್ಲಿ ಅರಣ್ಯದೊಳಗಿನ ವಿದ್ಯುತ್ ಮಾರ್ಗಗಳ ಬದಲಾವಣೆ ಅಗತ್ಯತೆಯಿದೆ. ಹೀಗಾಗಿ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರಿಗೆ ಮನವಿ ಮಾಡಿದ್ದು, ಹೆಚ್ಚಿನ ಅನುದಾನ ಒದಗಿಸುವ ಭರವಸೆ ನೀಡಿದ್ದಾರೆ’ ಎಂದರು.
ಕಾನಸೂರು ಮತ್ತು ಹತ್ತರಗಿ ಭಾಗಗಳಲ್ಲಿ ವಿದ್ಯುತ್ ಉಪಕೇಂದ್ರ ಸ್ಥಾಪನೆಗೆ ಈಗಾಗಲೇ ಕ್ರಮ ವಹಿಸಲಾಗಿದೆ ಎಂದ ಅವರು, ‘ಅಭಿವೃದ್ಧಿ ಕಾರ್ಯಗಳಿಗೆ ಹಣದ ಕೊರತೆಯಿಲ್ಲ. ಅಭಿವೃದ್ಧಿ ಪ್ರಕ್ರಿಯೆ ನಿರಂತರವಾಗಿದ್ದು, ಹಂತ–ಹಂತವಾಗಿ ಎಲ್ಲ ಸೌಲಭ್ಯ ಕಲ್ಪಿಸಲು ಕ್ರಮ ವಹಿಸಲಾಗುವುದು ಎಂದು ಹೇಳಿದರು.
ಕೃಷಿ ಇಲಾಖೆಯ ಸೌಲಭ್ಯಗಳು ರೈತರಿಗೆ ಸಕಾಲದಲ್ಲಿ ತಲುಪುವಂತಾಗಲು ಗೋದಾಮು ಸಹಕಾರಿಯಾಗಲಿದೆ. ಸರ್ಕಾರದ ಗ್ಯಾರಂಟಿ ಯೋಜನೆಗಳು ಜನರ ಆರ್ಥಿಕ ಸಬಲೀಕರಣಕ್ಕೆ ಪೂರಕವಾಗಿ ಸುಲಲಿತವಾಗಿ ನಡೆಯುತ್ತಿವೆ ಎಂದರು.
ಕಾರ್ಯಕ್ರಮದಲ್ಲಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡ, ಹುಲೇಕಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಾಸಿಂ ಇಬ್ರಾಹಿಂ ಸಾಬ್, ಸ್ಥಳೀಯ ಜನಪ್ರತಿನಿಧಿಗಳು, ಹೆಸ್ಕಾಂ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.