ADVERTISEMENT

ಯುವ ಪೀಳಿಗೆಗೆ ಶಿಕ್ಷಣ, ಸಂಸ್ಕಾರ ಅಗತ್ಯ: ಶಾಸಕ ಭೀಮಣ್ಣ

ಶಿರಸಿ ಶೈಕ್ಷಣಿಕ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ: ಶಾಸಕ ಭೀಮಣ್ಣ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2025, 7:36 IST
Last Updated 25 ಡಿಸೆಂಬರ್ 2025, 7:36 IST
ಶಿರಸಿ ಮಾರಿಕಾಂಬಾ ಪ್ರೌಢಶಾಲೆಯಲ್ಲಿ ಬುಧವಾರ ನಡೆದ ಶಿರಸಿ ಶೈಕ್ಷಣಿಕ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವವನ್ನು ಶಾಸಕ ಭೀಮಣ್ಣ ನಾಯ್ಕ ಉದ್ಘಾಟಿಸಿದರು
ಶಿರಸಿ ಮಾರಿಕಾಂಬಾ ಪ್ರೌಢಶಾಲೆಯಲ್ಲಿ ಬುಧವಾರ ನಡೆದ ಶಿರಸಿ ಶೈಕ್ಷಣಿಕ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವವನ್ನು ಶಾಸಕ ಭೀಮಣ್ಣ ನಾಯ್ಕ ಉದ್ಘಾಟಿಸಿದರು   

ಶಿರಸಿ: ‘ಸರ್ಕಾರದಿಂದ ಅನುದಾನ ಪಡೆದು ಕಾಮಗಾರಿ ನಡೆಸುವುದಷ್ಟೇ ಅಭಿವೃದ್ಧಿ ಅಲ್ಲ, ಇದರ ಜತೆ ಯುವ ಪೀಳಿಗೆಗೆ ಶಿಕ್ಷಣ, ಸಂಸ್ಕಾರ ನೀಡಿ ಅವರ ಜೀವನಕ್ಕೆ ಸಾರ್ಥಕತೆ ನೀಡಿದರೆ ಮಾತ್ರ ನಾಡಿನ ಅಭಿವೃದ್ಧಿ ಸಾಧ್ಯ’ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.

ನಗರದ ಮಾರಿಕಾಂಬಾ ಪ್ರೌಢಶಾಲೆಯಲ್ಲಿ ಬುಧವಾರ ನಡೆದ ಶಿರಸಿ ಶೈಕ್ಷಣಿಕ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

‘ಇಂದು ಕೇವಲ ಕಟ್ಟಡ, ರಸ್ತೆ, ಚರಂಡಿ ನಿರ್ಮಿಸಿದರಷ್ಟೇ ಅಭಿವೃದ್ಧಿ ಎಂಬ ಮನಸ್ಥಿತಿಯ ಜನರು ಹೆಚ್ಚಿದ್ದಾರೆ. ಇಂಥ ಅಭಿವೃದ್ಧಿಯಿಂದಷ್ಟೇ ರಾಷ್ಟ್ರ ನಿರ್ಮಾಣ ಅಸಾಧ್ಯ. ಸಮಾಜ ತಳಮಟ್ಟದಿಂದ ಗಟ್ಟಿಗೊಳ್ಳಲು ಯುವ ಪೀಳಿಗೆಗೆ ಕಡ್ಡಾಯ ಶಿಕ್ಷಣ ನೀಡಬೇಕು. ಇದರ ಜತೆ ಸಂಸ್ಕಾರ ಕಲಿಸುವ ಕಾರ್ಯ ಆಗಬೇಕು. ಆಗ ಸಶಕ್ತ ನಾಡು ನಿರ್ಮಾಣ ಸಾಧ್ಯವಾಗುತ್ತದೆ’ ಎಂದು ಹೇಳಿದರು. 

ADVERTISEMENT

‘ಶಿಕ್ಷಣ ಇಲಾಖೆ ಶಿಕ್ಷಣದ ಜತೆ ಶೈಕ್ಷಣೇತರ ಚಟುವಟಿಕೆಗಳಿಗೂ ಆದ್ಯತೆ ನೀಡುತ್ತಿರುವ ಕಾರಣ ಇಂದು ವಿದ್ಯಾರ್ಥಿಗಳು ಸರ್ವತೋಮುಖ ಅಭಿವೃದ್ಧಿ ಕಾಣುತ್ತಿದ್ದಾರೆ. ಶಿಕ್ಷಣ ಇಲಾಖೆ ಇಂದು ಶಿಕ್ಷಕ, ವಿದ್ಯಾರ್ಥಿ ಸ್ನೇಹಿಯಾಗಿದೆ. ಹೀಗಾಗಿ ಅಧಿಕಾರಿಗಳು ಶಿಕ್ಷಣ ನೀಡಿಕೆಯಲ್ಲಿ ತಾರತಮ್ಯ ಮಾಡಬಾರದು. ಪ್ರತಿಭಾ ಕಾರಂಜಿಯಿಂದ ಮಕ್ಕಳಲ್ಲಿನ ಅಂತಃಶಕ್ತಿ ಜಾಗೃತವಾಗುತ್ತದೆ. ಮಕ್ಕಳ ಸಮಗ್ರ ಅಭಿವೃದ್ಧಿಗೆ ಈ ವೇದಿಕ ಸದಾ ಬಲ ನೀಡುತ್ತದೆ’ ಎಂದು ಹೇಳಿದರು. 

ಉಪವಿಭಾಗಾಧಿಕಾರಿ ಕಾವ್ಯರಾಣಿ ಕೆ. ಮಾತನಾಡಿ, ‘ಶಿಕ್ಷಣ ಕಲಿಕೆಯಿಂದ ಮಾತ್ರ  ಸರ್ವತೋಮುಖ ಅಭಿವೃದ್ಧಿ ಸಾಧ್ಯವಿಲ್ಲ. ಆಸಕ್ತ ಕ್ಷೇತ್ರದಲ್ಲಿ ತೊಡಗಿಸಿಕೊಂಡರೆ ಮಾತ್ರ ಎಲ್ಲವೂ ಸಾಧ್ಯ’ ಎಂದರು. 

ತಾಲ್ಲೂಕು ಪಂಚಾಯಿತಿ ಇಒ ಚನ್ನಬಸಪ್ಪ ಹಾವಣಗಿ, ಹುಲೇಕಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಖಾಸಿಂ ಸಾಬ್, ಬಂಡಲ ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವರಾಜ ಮರಾಠೆ, ಗ್ಯಾರಂಟಿ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ ನಾಯ್ಕ, ಸರ್ಕಾರಿ ನೌಕರರ ಸಂಘ ಶಿರಸಿ ಶೈಕ್ಷಣಿಕ ಜಿಲ್ಲಾ ಘಟಕದ ಅಧ್ಯಕ್ಷ ಕಿರಣ ನಾಯ್ಕ, ಪ್ರಮುಖರಾದ ಬಾಲಚಂದ್ರ ನಾಯ್ಕ, ಅಜಯ ನಾಯ್ಕ, ಪ್ರಕಾಶ ತಾರಿಕೊಪ್ಪ, ನಾರಾಯಣ ನಾಯ್ಕ, ಸುರೇಶ ಪಟಗಾರ, ಎಸ್.ಜಿ.ಹೆಗಡೆ, ದಿನೇಶ ನೇತ್ರೇಕರ, ಸವಿತಾ ಭಟ್, ಪ್ರದೀಪ ಕುಲಕರ್ಣಿ ಇತರರಿದ್ದರು. ಬಿಇಒ ನಾಗರಾಜ ನಾಯ್ಕ ಸ್ವಾಗತಿಸಿದರು. ಶಿಕ್ಷಕ ನಾರಾಯಣ ಭಾಗವತ ನಿರೂಪಿಸಿದರು.

ಸಂಗೀತ ನೃತ್ಯ ಧಾರ್ಮಿಕ ಪಠಣ ದೇಶಭಕ್ತಿ ಹಾಗೂ ಕ್ರೀಡಾ ಚಟುವಟಿಕೆಗಳು ಇವೆಲ್ಲವೂ ಮಕ್ಕಳಲ್ಲಿರುವ ಪ್ರತಿಭೆ ಹೊರಗೆ ತೆಗೆದು ವ್ಯಕ್ತಿತ್ವ ರೂಪಿಸಿಕೊಳ್ಳಲು ಸಹಾಯ ಮಾಡುತ್ತವೆ
ಭೀಮಣ್ಣ ನಾಯ್ಕ ಶಾಸಕ

312 ಸ್ಪರ್ಧಿಗಳು

ಶಿರಸಿ ಶೈಕ್ಷಣಿಕ ಜಿಲ್ಲೆಯ 6 ತಾಲ್ಲೂಕುಗಳಿಂದ ಪ್ರತಿಭಾ ಕಾರಂಜಿಯ ವಿವಿಧ ವಿಭಾಗಗಳಲ್ಲಿ 312 ಸ್ಪರ್ಧಿಗಳು ಭಾಗವಹಿಸಿದ್ದರು. ಸಂಗೀತ ನೃತ್ಯ ಛದ್ಮವೇಷ ಏಕಪಾತ್ರಾಭಿನಯ ಧಾರ್ಮಿಕ ಪಠಣ ಕಂಠಪಾಠ ಸೇರಿ ಹಲವು ಸ್ಪರ್ಧೆಗಳು ನೆರೆದವರ ಗಮನ ಸೆಳೆದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.