ADVERTISEMENT

ಗ್ರಾಮ ಸಮರ: ಮತ ಎಣಿಕೆಗೆ ಪೂರ್ಣಗೊಂಡ ಸಿದ್ಧತೆ

12 ತಾಲ್ಲೂಕು ಕೇಂದ್ರಗಳಲ್ಲಿ ಚುನಾವಣೆಯ ಅಭ್ಯರ್ಥಿಗಳ ಭವಿಷ್ಯ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2020, 14:37 IST
Last Updated 29 ಡಿಸೆಂಬರ್ 2020, 14:37 IST
ಗ್ರಾಮ ಪಂಚಾಯಿತಿ ಚುನಾವಣೆಗೆ ಭಟ್ಕಳ ತಾಲ್ಲೂಕಿನ ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ಸಿದ್ಧತೆ ಮಾಡಿರುವುದು
ಗ್ರಾಮ ಪಂಚಾಯಿತಿ ಚುನಾವಣೆಗೆ ಭಟ್ಕಳ ತಾಲ್ಲೂಕಿನ ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ಸಿದ್ಧತೆ ಮಾಡಿರುವುದು   

ಕಾರವಾರ: ಜಿಲ್ಲೆಯಲ್ಲಿ ಎರಡು ಹಂತಗಳಲ್ಲಿ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯ ಮತ ಎಣಿಕೆಯು ಡಿ. 30ರಂದು ನಡೆಯಲಿದೆ. ಇದಕ್ಕಾಗಿ ಎಲ್ಲ 12 ತಾಲ್ಲೂಕು ಕೇಂದ್ರಗಳಲ್ಲಿ ಸಿದ್ಧತೆ ಪೂರ್ಣಗೊಂಡಿದೆ.

ಕರಾವಳಿಯ ಐದು ತಾಲ್ಲೂಕುಗಳು ಮತ್ತು ಘಟ್ಟದ ಮೇಲಿನ ಭಾಗದ ಏಳು ತಾಲ್ಲೂಕುಗಳ ಗ್ರಾಮ ಪಂಚಾಯಿತಿಗಳಿಗೆ ಅನುಕ್ರಮವಾಗಿ ಡಿ. 22 ಹಾಗೂ ಡಿ. 27ರಂದು ಚುನಾವಣೆ ನಡೆದಿತ್ತು. ಆಯಾ ತಾಲ್ಲೂಕು ಕೇಂದ್ರಗಳಲ್ಲಿ ಸ್ಥಾಪಿಸಲಾಗಿರುವ ಮತ ಎಣಿಕೆ ಕೇಂದ್ರಗಳಿಗೆ ಈಗಾಗಲೇ ಅಗತ್ಯ ಸೌಕರ್ಯಗಳನ್ನು ಒದಗಿಸಲಾಗಿದೆ. 359 ಟೇಬಲ್‌ಗಳಲ್ಲಿ 1,077 ಸಿಬ್ಬಂದಿ ಏಕಕಾಲಕ್ಕೆ ಮತ ಎಣಿಕೆ ಮಾಡಲಿದ್ದಾರೆ. ಮತ ಎಣಿಕೆ ಕೇಂದ್ರಗಳ ಸುತ್ತ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತದಲ್ಲಿರುವ ಬಿಜೆಪಿ ಮುಖಂಡರು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ತಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಗಳೇ ಮೇಲುಗೈ ಸಾಧಿಸುವ ವಿಶ್ವಾಸದಲ್ಲಿದ್ದಾರೆ. ಗ್ರಾಮ ಪಂಚಾಯಿತಿ ಚುನಾವಣೆಯು ಮೇಲಿನ ಹಂತದ ಚುನಾವಣೆಗಳಿಗೆ ಬುನಾದಿ ಎಂಬ ಭಾವನೆಯಿಂದ ಈ ಬಾರಿ ಮುಖಂಡರು ಹಳ್ಳಿ ಹಳ್ಳಿಗಳಲ್ಲಿ ಸಂಚರಿಸಿದ್ದರು. ಈ ವಿಚಾರದಲ್ಲಿ ಕಾಂಗ್ರೆಸ್ ಮುಖಂಡರೂ ಹಿಂದೆಬಿದ್ದಿಲ್ಲ. ಹಲವು ಕಡೆಗಳಲ್ಲಿ ಸಭೆ ನಡೆಸಿ, ಪಕ್ಷ ಬೆಂಬಲಿತ ಅಭ್ಯರ್ಥಿಗಳನ್ನೇ ಗೆಲ್ಲಿಸುವಂತೆ ಮತದಾರರನ್ನು ಕೋರಿದ್ದರು.

ADVERTISEMENT

ಈ ನಡುವೆ, ಮತದಾನದ ಬಳಿಕ ಹಳ್ಳಿಗಳಲ್ಲಿ ಸೋಲು, ಗೆಲುವಿನ ಲೆಕ್ಕಾಚಾರವೂ ಜೋರಾಗಿದೆ. ಪ್ರತಿದಿನ ಭೇಟಿಯಾಗುವ, ಆತ್ಮೀಯರೂ ಕೂಡ ಚುನಾವಣೆಯ ಕಾರಣದಿಂದ ಪ್ರತಿಸ್ಪರ್ಧಿಗಳಾಗಿದ್ದಾರೆ. ಇದು ಪ್ರತಿಷ್ಠೆಯ ಪ್ರಶ್ನೆಯೂ ಆಗಿರುವ ಕಾರಣ ಫಲಿತಾಂಶವು ತೀವ್ರ ಕುತೂಹಲ ಮೂಡಿಸಿದೆ.

ನಿಷೇಧಾಜ್ಞೆ ಜಾರಿ:ಕಾನೂನು ಸುವ್ಯವಸ್ಥೆ ಹಾಗೂ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಮತ ಎಣಿಕೆಯ ಕೇಂದ್ರದ ಸುತ್ತಮುತ್ತ ಡಿ. 30ರಂದು ಬೆಳಿಗ್ಗೆ 7ರಿಂದ 31ರ ಬೆಳಿಗ್ಗೆ 6 ತನಕ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಈ ಅವಧಿಯಲ್ಲಿ ಪೊಲೀಸರ ಅನುಮತಿಯಿಲ್ಲದೇ ವಿಜಯೋತ್ಸವ ಆಚರಣೆ, ಸಾರ್ವಜನಿಕ ಮೆರವಣಿಗೆ, ಸಾರ್ವಜನಿಕ ಹಾಗೂ ರಾಜಕೀಯ ಸಮಾರಂಭಗಳನ್ನು ಆಯೋಜಿಸುವಂತಿಲ್ಲ. ಸಾರ್ವಜನಿಕರು ಗುಂ‍ಪುಗೂಡುವುದು, ಆಯುಧಗಳನ್ನು ಹಿಡಿದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ. ಪಟಾಕಿ ಸಿಡಿಸುವುದು, ಘೋಷಣೆ ಕೂಗುವಂತಿಲ್ಲ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.

ತಾಲ್ಲೂಕು ಕೇಂದ್ರಗಳಲ್ಲಿರುವ ವೈನ್ ಶಾಪ್ ಮತ್ತು ಮದ್ಯದಂಗಡಿಗಳನ್ನು ಡಿ.29ರ ಮಧ್ಯರಾತ್ರಿ 12ರಿಂದ 30ರ ಮಧ್ಯರಾತ್ರಿ 12ರ ತನಕ ಮುಚ್ಚಬೇಕು. ಈ ಅವಧಿಯಲ್ಲಿ ಮದ್ಯ ಸಾಗಣೆ ಮಾಡಬಾರದು ಎಂದು ಅವರು ಸೂಚಿಸಿದ್ದಾರೆ.

–––––

ಚುನಾವಣೆ: ಅಂಕಿ ಅಂಶ

227

ಗ್ರಾಮ ಪಂಚಾಯಿತಿಗಳು

2,662

ಒಟ್ಟು ಸ್ಥಾನಗಳು

184

ಸ್ಥಾನಗಳಿಗೆ ಅವಿರೋಧ ಆಯ್ಕೆ

11

ನಾಮಪತ್ರ ಸಲ್ಲಿಕೆಯಾಗದ ಸ್ಥಾನಗಳು

2,467

ಚುನಾವಣೆ ನಡೆದ ಸ್ಥಾನಗಳು

7,187

ಕಣದಲ್ಲಿರುವ ಅಭ್ಯರ್ಥಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.