ADVERTISEMENT

‘ಪತ್ರಕರ್ತರಿಗೆ ಸೂಕ್ಷ್ಮ ಒಳನೋಟ ಅಗತ್ಯ’

ಪತ್ರಿಕಾ ದಿನಾಚರಣೆಯಲ್ಲಿ ಹಿರಿಯ ಪತ್ರಕರ್ತ ಎಂ.ಕೆ.ಭಾಸ್ಕರ ರಾವ್

​ಪ್ರಜಾವಾಣಿ ವಾರ್ತೆ
Published 1 ಜುಲೈ 2022, 14:01 IST
Last Updated 1 ಜುಲೈ 2022, 14:01 IST
ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನೀಡಲಾಗುವ ಕೆ.ಶ್ಯಾಮರಾವ್ ಪ್ರಶಸ್ತಿಯನ್ನು ಹಿರಿಯ ಪತ್ರಕರ್ತ ಅಶೋಕ ಹಾಸ್ಯಗಾರ ಅವರಿಗೆ ಪ್ರದಾನ ಮಾಡಲಾಯಿತು. ಅವರ ಪತ್ನಿ ಸುನಂದಾ ಜತೆಗಿದ್ದರು.
ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನೀಡಲಾಗುವ ಕೆ.ಶ್ಯಾಮರಾವ್ ಪ್ರಶಸ್ತಿಯನ್ನು ಹಿರಿಯ ಪತ್ರಕರ್ತ ಅಶೋಕ ಹಾಸ್ಯಗಾರ ಅವರಿಗೆ ಪ್ರದಾನ ಮಾಡಲಾಯಿತು. ಅವರ ಪತ್ನಿ ಸುನಂದಾ ಜತೆಗಿದ್ದರು.   

ಶಿರಸಿ: ‘ಸೂಕ್ಷ್ಮ ಒಳನೋಟ, ಕ್ರಿಯಾಶೀಲತೆ ಇರುವ ಪತ್ರಕರ್ತ ಮಾತ್ರ ಪರಿಣಾಮಕಾರಿ ವರದಿ ನೀಡಬಲ್ಲ’ ಎಂದು ಹಿರಿಯ ಪತ್ರಕರ್ತ ಎಂ.ಕೆ.ಭಾಸ್ಕರ ರಾವ್ ಹೇಳಿದರು.

ಇಲ್ಲಿನ ಟಿ.ಎಂ.ಎಸ್. ಸಭಾಂಗಣದಲ್ಲಿ ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಶುಕ್ರವಾರ ಆಯೋಜಿಸಲಾಗಿದ್ದ ಪತ್ರಿಕಾ ದಿನಾಚರಣೆ ಹಾಗೂ ಪತ್ರಕರ್ತ ಅಶೋಕ ಹಾಸ್ಯಗಾರ ಅವರಿಗೆ ಕೆ.ಶ್ಯಾಮರಾವ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಜನರೊಂದಿಗೆ ನಿಕಟವಾಗಿ ಬೆರೆಯುವ ಪತ್ರಿಕೆಗಳು ನಶಿಸುವುದಿಲ್ಲ. ಅಪ್ರಿಯವಾದರೂ ಸತ್ಯ ಸಂಗತಿಯ ಸಮಾಜಕ್ಕೆ ತಿಳಿಸುವ ಕೆಲಸ ಪತ್ರಕರ್ತರು ಮಾಡಿದಾಗ ಮಾತ್ರ ವಿಶ್ವಾಸಾರ್ಹತೆ ಗಳಿಸಲು ಸಾಧ್ಯ’ ಎಂದರು.

ADVERTISEMENT

ಕಾರ್ಯಕ್ರಮ ಉದ್ಘಾಟಿಸಿದ ಟಿ.ಎಂ.ಸುಬ್ಬರಾಯ ಮಾತನಾಡಿ, ‘ಜಿಲ್ಲೆಯ ಪ್ರತಿಭಾವಂತ ಪತ್ರಕರ್ತರಿಗೆ ಪ್ರೋತ್ಸಾಹ ನೀಡಬೇಕು. ಪತ್ರಕರ್ತರು ನಿರ್ಭೀತಿಯಿಂದ ಮತ್ತು ನೇರವಾಗಿ ಬರೆಯುವುದನ್ನು ಕಲಿಯಬೇಕು. ಪತ್ರಕರ್ತರಾದವರು ನೈತಿಕತೆ ಕಳೆದುಕೊಳ್ಳಬಾರದು’ ಎಂದರು.

ಪ್ರಶಸ್ತಿ ಸ್ವೀಕರಿಸಿದ ಅಶೋಕ ಹಾಸ್ಯಗಾರ ಮಾತನಾಡಿ, ‘ಸಮಾಜಕ್ಕೆ ಉಪಯುಕ್ತವಾಗುವ, ಮಾರ್ಗದರ್ಶಿಯಾಗುವ ವರದಿಗಳನ್ನು ಮಾಡಬೇಕು’ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾರ್ಯನಿರತ ಪತ್ರಕರ್ತರಿಗೆ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಸುಬ್ರಾಯ ಭಟ್ ಬಕ್ಕಳ, ‘ಕನ್ನಡ ಪತ್ರಿಕೋದ್ಯಮಕ್ಕೆ ಉತ್ತರ ಕನ್ನಡದವರ ಕೊಡುಗೆ ದೊಡ್ಡದಿದೆ. ಸುವರ್ಣ ಮಹೋತ್ಸವದ ವರ್ಷಾಚರಣೆ ವೇಳೆ ಪತ್ರಿಕೋದ್ಯಮಕ್ಕೆ ಕೊಡುಗೆ ನೀಡಿದ ಜಿಲ್ಲೆಯ ಪತ್ರಕರ್ತರ ಮಾಹಿತಿ ಒಳಗೊಂಡ ಪುಸ್ತಕ ಹೊರತರಲಾಗುವುದು’ ಎಂದರು.

ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಘಟಕದ ಕಾರ್ಯದರ್ಶಿ ನಿಂಗಪ್ಪ ಚಾವಡಿ, ರಾಜ್ಯ ಕಾರ್ಯಕಾರಿಣಿ ಸದಸ್ಯ ಬಸವರಾಜ ಪಾಟೀಲ್, ಪ್ರಧಾನ ಕಾರ್ಯರ್ಶಿ ಸುಮಂಗಲಾ ಹೊನ್ನೆಕೊಪ್ಪ, ಪದಾಧಿಕಾರಿಗಳು ಇದ್ದರು. ನರಸಿಂಹ ಸಾತೊಡ್ಡಿ ಸ್ವಾಗತಿಸಿದರು. ರಾಘವೇಂದ್ರ ಬೆಟ್ಟಕೊಪ್ಪ ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.