ADVERTISEMENT

ಭಟ್ಕಳ: ಪ್ರಾಥಮಿಕ ಶಿಕ್ಷಕರ ನೇಮಕಾತಿ ಆದೇಶ ನೀಡುವಂತೆ ಮನವಿ

​ಪ್ರಜಾವಾಣಿ ವಾರ್ತೆ
Published 30 ಮೇ 2023, 12:24 IST
Last Updated 30 ಮೇ 2023, 12:24 IST
ಭಟ್ಕಳದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕ ಆಕಾಂಕ್ಷಿಗಳು ಸಚಿವ ಮಂಕಾಳ ವೈದ್ಯ ಅವರಿಗೆ ಮನವಿ ಸಲ್ಲಿಸಿದರು
ಭಟ್ಕಳದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕ ಆಕಾಂಕ್ಷಿಗಳು ಸಚಿವ ಮಂಕಾಳ ವೈದ್ಯ ಅವರಿಗೆ ಮನವಿ ಸಲ್ಲಿಸಿದರು   

ಭಟ್ಕಳ: ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ಶೀಘ್ರದಲ್ಲಿ ಅಂತಿಮಗೊಳಿಸಿ ನೇಮಕಾತಿ ಆದೇಶ ನೀಡುವಂತೆ ಲಿಖಿತ ಪರೀಕ್ಷೆಯಲ್ಲಿ ಆಯ್ಕೆಯಾದ ಶಿಕ್ಷಕ ಆಕಾಂಕ್ಷಿ ಅಭ್ಯರ್ಥಿಗಳು ಮಂಗಳವಾರ ಮೀನುಗಾರಿಕೆ ಸಚಿವ ಮಂಕಾಳ ವೈದ್ಯ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.

ಪಟ್ಟಣದ ಆಸರಕೇರಿಯಲ್ಲಿ ಸಚಿವರನ್ನು ಭೇಟಿಯಾದ ಅಭ್ಯರ್ಥಿಗಳು ರಾಜ್ಯ ಸರ್ಕಾರ 15 ಸಾವಿರ ಶಿಕ್ಷಕರ ನೇಮಕಾತಿಗಾಗಿ ನಡೆಸಿದ ಲಿಖಿತ ಪರೀಕ್ಷೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ವರ್ಷ ಕಳೆಯುತ್ತಾ ಬಂದರೂ ಇನ್ನೂ ತನಕ ದಾಖಲಾತಿ ಪರಿಶೀಲನೆಗೆ ಕರೆಯಲಿಲ್ಲ. ಹೈದ್ರಾಬಾದ್ ಕರ್ನಾಟಕ ವಲಯದ ಅಭ್ಯರ್ಥಿಗಳು ಮೀಸಲಾತಿ ಕೋರಿ ತಂದಿರುವ ನ್ಯಾಯಾಲಯ ತಡೆಯಾಜ್ಞೆ ನೆಪ ಹೂಡಿ ಸರ್ಕಾರ ವಿನಾಃ ಕಾರಣ ನೇಮಕಾತಿ ವಿಳಂಬ ಮಾಡುತ್ತಿದೆ. ಅದು ಅಲ್ಲದೇ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡಲು 20 ಸಾವಿರ ತಾತ್ಕಾಲಿಕ ಶಿಕ್ಷಕರ ನೇಮಕಾತಿಗೆ ಪ್ರಕಟಣೆ ಹೊರಡಿಸಿದೆ ಎಮದರು.

ಒಂದೊಮ್ಮೆ ತಾತ್ಕಾಲಿಕ ಶಿಕ್ಷಕರು ನೇಮಕವಾದರೆ ಸರ್ಕಾರ ನಮ್ಮ ನೇಮಕಾತಿಯನ್ನು ಇನ್ನಷ್ಟು ದಿನಗಳು ಮುಂದೂಡುವ ಭಯ ನಮಗೆ ಕಾಡುತ್ತಿದೆ. ಸಚಿವರು ಶೀಘ್ರ ನೇಮಕಾತಿಗೆ ಸರ್ಕಾರವನ್ನು ಒತ್ತಾಯಿಸುವಂತೆ ಅವರು ಆಗ್ರಹಿಸಿದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಈ ಬಗ್ಗೆ ಶಿಕ್ಷಣ ಸಚಿವರ ಜೊತೆ ಮಾತನಾಡುವುದಾಗಿ ಭರವಸೆ ನೀಡಿದರು. ಶಿಕ್ಷಕ ಆಕಾಂಕ್ಷಿಗಳಾದ ಸುನೀಲಕುಮಾರ ನಾಯ್ಕ, ಗಣಪತಿ ಸಭಾಹಿತ, ಮಾರುತಿ ನಾಯ್ಕ, ಸ್ವಾತಿ ಶೆಟ್ಟಿ, ಟೆರೆನ್ಸ್‌ ಗೊನ್ಸಾಲ್ವಿಸ್, ಕಾಜಲ ನಾಯ್ಕ, ದೀಪಾ ನಾಯ್ಕ, ಪಲ್ಲವಿ ನಾಯ್ಕ ಮತ್ತು ಅಭಿಲಾಷ ನಾಯ್ಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.