ADVERTISEMENT

ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಪ್ರೊ.ಶ್ರೀಪಾದ ಹೆಗಡೆ ಕಣ್ಣಿ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2019, 13:51 IST
Last Updated 8 ಏಪ್ರಿಲ್ 2019, 13:51 IST
ಹೊನ್ನಾವರ ತಾಲ್ಲೂಕು ಒಂಬತ್ತನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾದ ಪ್ರೊ.ಶ್ರೀಪಾದ ಹೆಗಡೆ ಕಣ್ಣಿ ಅವರನ್ನು  ಕ.ಸಾ.ಪ. ಪದಾಧಿಕಾರಿಗಳು ಅಭಿನಂದಿಸಿದರು
ಹೊನ್ನಾವರ ತಾಲ್ಲೂಕು ಒಂಬತ್ತನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾದ ಪ್ರೊ.ಶ್ರೀಪಾದ ಹೆಗಡೆ ಕಣ್ಣಿ ಅವರನ್ನು  ಕ.ಸಾ.ಪ. ಪದಾಧಿಕಾರಿಗಳು ಅಭಿನಂದಿಸಿದರು   

ಹೊನ್ನಾವರ:ತಾಲ್ಲೂಕಿನ ಮೂಡ್ಕಣಿಯಲ್ಲಿ ಮೇ ಮೊದಲ ವಾರದಲ್ಲಿಆಯೋಜಿಸಲು ಉದ್ದೇಶಿಸಲಾಗಿರುವ ತಾಲ್ಲೂಕಿನಒಂಬತ್ತನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಾಹಿತಿ ಪ್ರೊ.ಶ್ರೀಪಾದ ಹೆಗಡೆ ಕಣ್ಣಿ ಆಯ್ಕೆಯಾಗಿದ್ದಾರೆ.

ಪಟ್ಟಣದಲ್ಲಿ ಶುಕ್ರವಾರ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನಆಜೀವ ಸದಸ್ಯರ ಸಭೆಯಲ್ಲಿಅವರನ್ನು ಆಯ್ಕೆ ಮಾಡಲಾಯಿತು.

ಪ್ರೊ.ಶ್ರೀಪಾದ ಹೆಗಡೆ ಕಣ್ಣಿ, ಮಂಜುಸುತ ಜಲವಳ್ಳಿ, ಡಾ.ಸುರೇಶ ನಾಯ್ಕ, ಮಾಧವಿ ಭಂಡಾರಿ ಅವರ ಹೆಸರನ್ನು ಪ್ರಸ್ತಾಪಿಸಲಾಗಿತ್ತು.ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಅರವಿಂದ ಕರ್ಕಿಕೋಡಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಎನ್.ಎಸ್.ಹೆಗಡೆ ಕೆರೆಕೋಣ, ಡಾ.ಎನ್.ಆರ್.ನಾಯಕ, ಕಸಾಪದ ತಾಲೂಕು ಘಟಕದ ಅಧ್ಯಕ್ಷ ನಾಗರಾಜ ಹೆಗಡೆ ಅಪಗಾಲ ಇದ್ದರು.

ADVERTISEMENT

ಪರಿಚಯ:ಶ್ರೀಪಾದ ಹೆಗಡೆ ಕಣ್ಣಿ ಅವರು 1954ರ ಜೂನ್ 6ರಂದು ತಾಲ್ಲೂಕಿನ ಕಣ್ಣಿಮನೆಯಲ್ಲಿ ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ನೀರ್ವತ್ತಿಕೊಡ್ಲು ಹಾಗೂ ಹಡಿನಬಾಳ ಶಾಲೆಯಲ್ಲಿಪಡೆದರು. ಪ್ರೌಢಶಾಲೆಗೆ ಕವಲಕ್ಕಿಯ ಶ್ರೀ ಸುಬ್ರಹ್ಮಣ್ಯ ಸಂಯುಕ್ತ ಪ್ರೌಢಶಾಲೆಗೆ ತೆರಳಿದರು. ಪಿಯು ವ್ಯಾಸಂಗವನ್ನು ಅರೇಅಂಗಡಿಯ ಎಸ್‌ಕೆಪಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ, ಪದವಿಯನ್ನು ಎಸ್‌ಡಿಎಂಕಾಲೇಜಿನಲ್ಲಿ ಹಾಗೂ ಸ್ನಾತಕೋತ್ತರ ಪದವಿಯನ್ನು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲು ಪೂರೈಸಿದರು.

ಅವರು ಕೆಲಕಾಲ ಮುದ್ರಣಾಲಯದಲ್ಲಿ ಉದ್ಯೋಗಿಯಾಗಿಯೂ ಕೆಲಸ ಮಾಡಿದರು. ಕಿಟಲ್ ಕಾಲೇಜಿನಲ್ಲಿ ತಾತ್ಕಾಲಿಕ ಉಪನ್ಯಾಸಕರಾಗಿದ್ದರು.ನಂತರ ಹೊನ್ನಾವರದ ಎಸ್‌ಡಿಎಂ ಪದವಿ ಕಾಲೇಜಿನಲ್ಲಿ 1988ರಿಂದ 2014ರವರೆಗೆ ಕನ್ನಡ ಪ್ರಾಧ್ಯಾಪಕರಾಗಿಕರ್ತವ್ಯ ನಿರ್ವಹಿಸಿನಿವೃತ್ತರಾದರು.

ವಿದ್ಯಾರ್ಥಿದೆಸೆಯಿಂದಲೇ ಸಾಹಿತ್ಯಿಕ ಚಟುವಟಿಕೆಗಳಲ್ಲಿ ಆಸಕ್ತರಾಗಿದ್ದ ಅವರಿಗೆ ಪ್ರಭಾಕರ ಹೆಗಡೆ ಹೈಗುಂದ, ಪ್ರೊ.ಜಿನದೇವ ನಾಯಕ ಮೊದಲಾದವರು ಬರವಣಿಗೆಗೆ ಪ್ರೇರಣೆ ನೀಡಿದರು. ‘ಬೆನ್ನಿಗೆ ಬಿದ್ದವರು’, ‘ಪಂಡಿನ ರಾಮಣ್ಣ’, ‘ಶಾಲೆಯ ಪದಗಳು’, ‘ಗುಡ್ಡದ ನವಿಲು’, ‘ನಡೆದಷ್ಟು ದೂರ’ ಮೊದಲಾದ ಕೃತಿಗಳು ಪ್ರಕಟವಾಗಿದ್ದು, ಇನ್ನೂ ಹಲವು ಕೃತಿಗಳು ಮುದ್ರಣದ ಹಂತದಲ್ಲಿವೆ.

‘ಕಲಾಶೈಲ’ ಎಂಬ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಸಂಸ್ಥೆಯನ್ನು ಅವರು ಸ್ಥಾಪಿಸಿದ್ದಾರೆ. ಕನ್ನಡ ಸಾಹಿತ್ಯದ ವ್ಯಾಪಕ ಓದು, ಅಧ್ಯಯನ, ಅಧ್ಯಾಪನದೊಂದಿಗೆ ಅನೇಕ ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಒಲವು ಮೂಡಿಸಿರುವ ಹೆಗ್ಗಳಿಕೆ ಅವರದ್ದಾಗಿದೆ. ಕಣ್ಣಿ ಅವರ ಮಡದಿ ಜಯಶ್ರೀ ಹೆಗಡೆ ಕಣ್ಣಿ ಕೂಡ ಕವಯತ್ರಿಯಾಗಿ, ಪ್ರಬಂಧಕಾರರಾಗಿ ಹಾಗೂ ರಂಗಭೂಮಿ ಕಲಾವಿದರಾಗಿ ಸಾಂಸ್ಕೃತಿಕ ರಂಗದಲ್ಲಿ ತೊಡಗಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.