ADVERTISEMENT

ಶುಲ್ಕ ರಹಿತ ಬ್ಯಾಂಕಿಂಗ್ ಸಮಸ್ಯೆ ಪರಿಹಾರ

ಆರ್.ಬಿ.ಐ ಬ್ಯಾಂಕಿಂಗ್ ಒಂಬುಡ್ಸಮನ್ ಬಾಲು ಕೆಂಚಪ್ಪ ಮಾಹಿತಿ

​ಪ್ರಜಾವಾಣಿ ವಾರ್ತೆ
Published 11 ಜನವರಿ 2025, 15:22 IST
Last Updated 11 ಜನವರಿ 2025, 15:22 IST
ಕಾರವಾರದಲ್ಲಿ ಬ್ಯಾಂಕಿಂಗ್ ಮತ್ತು ಬ್ಯಾಂಕಿಂಗ್‍ಯೇತರ ಗ್ರಾಹಕರ ಅನುಕೂಲಕ್ಕಾಗಿ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್‍ನ ಬ್ಯಾಂಕಿಂಗ್ ಒಂಬುಡ್ಸಮನ್ ಬಾಲು ಕೆಂಚಪ್ಪ ಮಾತನಾಡಿದರು
ಕಾರವಾರದಲ್ಲಿ ಬ್ಯಾಂಕಿಂಗ್ ಮತ್ತು ಬ್ಯಾಂಕಿಂಗ್‍ಯೇತರ ಗ್ರಾಹಕರ ಅನುಕೂಲಕ್ಕಾಗಿ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್‍ನ ಬ್ಯಾಂಕಿಂಗ್ ಒಂಬುಡ್ಸಮನ್ ಬಾಲು ಕೆಂಚಪ್ಪ ಮಾತನಾಡಿದರು   

ಕಾರವಾರ: ‘ಭಾರತೀಯ ರಿಸರ್ವ್ ಬ್ಯಾಂಕ್ (ಆರ್.ಬಿ.ಐ) ವ್ಯಾಪ್ತಿಗೊಳಪಡುವ ಹಣಕಾಸು ಸಂಸ್ಥೆಗಳಲ್ಲಿ ಗ್ರಾಹಕರಿಗೆ ನೀಡುವ ಸೇವೆಗಳಲ್ಲಿ ತೊಂದರೆ ಕಂಡು ಬಂದಾಗ ಕೋರ್ಟ್‌‍ ಮೊರೆಹೋಗುವ ಬದಲು ಆರ್‌ಬಿಐನ ಒಂಬುಡ್ಸ್‌ಮನ್‍ಗೆ ದೂರು ನೀಡಿದಲ್ಲಿ ಶುಲ್ಕ ರಹಿತವಾಗಿ ಸಮಸ್ಯೆಗಳನ್ನು ಬಗೆಹರಿಸಲು ಅವಕಾಶವಿದೆ’ ಎಂದು ಭಾರತೀಯ ರಿಸರ್ವ್ ಬ್ಯಾಂಕ್‍ನ ಬ್ಯಾಂಕಿಂಗ್ ಒಂಬುಡ್ಸಮನ್ ಬಾಲು ಕೆಂಚಪ್ಪ ಹೇಳಿದರು.

ಇಲ್ಲಿನ ಸಾಗರ ದರ್ಶನ ಸಭಾಭವನದಲ್ಲಿ ಶನಿವಾರ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ), ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಕೆನರಾ ಬ್ಯಾಂಕ್ ಸಹಯೋಗದಲ್ಲಿ ಬ್ಯಾಂಕಿಂಗ್ ಮತ್ತು ಬ್ಯಾಂಕಿಂಗ್‍ಯೇತರ ಗ್ರಾಹಕರ ಅನುಕೂಲಕ್ಕಾಗಿ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ನಂಬಿಕೆ, ನಿಯತ್ತು ಮತ್ತು ವಿಶ್ವಾಸ ಬಹಳ ಮುಖ್ಯ. ವಿಶ್ವಾಸ ಗಳಿಕೆ ಹಾಗೂ ಗ್ರಾಹಕರನ್ನು ಸೆಳೆಯುವ ಶಕ್ತಿ ಬ್ಯಾಂಕಿಂಗ್ ಕ್ಷೇತ್ರಕ್ಕೆ ಇದೆ. ಗ್ರಾಹಕರ ರಕ್ಷಣೆ ಹಾಗೂ ಅವರಿಗೆ ತಿಳಿವಳಿಕೆ ನೀಡುವುದು ಒಂಬಡ್ಸ್ ಮನ್ ಜವಾಬ್ದಾರಿ’ ಎಂದರು.

ADVERTISEMENT

‘ಬ್ಯಾಂಕ್ ‍ಳು ದೂರು ಸ್ವೀಕರಿಸಿದ 30 ದಿನಗಳ ಒಳಗೆ ಉತ್ತರವನ್ನು ದೂರುದಾರರಿಗೆ ತಿಳಿಸಬೇಕು. ಗ್ರಾಹಕರು ದೂರು ಸಲ್ಲಿಸಲು ಅನುಕೂಲವಾಗುವಂತೆ ದೂರಿನ ನಮೂನೆಯನ್ನು ಬ್ಯಾಂಕಿನ ವೆಬ್‍ಸೈಟ್ ಮುಖಪುಟದಲ್ಲಿ ಒದಗಿಸಬೇಕು. ಬ್ಯಾಂಕಿನ ಶಾಖೆಯಲ್ಲಿಯು ಸಹ ದೂರು ಕೊಡುವ ಸೌಲಭ್ಯ ಇರಬೇಕು’ ಎಂದರು.

‘ಬ್ಯಾಂಕಿಂಗ್ ಸೇವೆಗಳನ್ನು ಡಿಜಿಟಲ್‌ಗೊಳಿಸಿ ಅವರ ಕೈಯಲ್ಲೇ ಬ್ಯಾಂಕಿಂಗ್ ವ್ಯವಸ್ಥೆಯನ್ನು ನೀಡಲಾಗಿದೆ. ಡಿಜಿಟಲ್ ವಹಿವಾಟು ಸುರಕ್ಷಿತ ಎಂಬ ಧೈರ್ಯ ಮೂಡಿಸುವ ಸಲುವಾಗಿ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಗ್ರಾಹಕರ ಪ್ರತಿಯೊಂದು ರೂಪಾಯಿಯು ವ್ಯತ್ಯಾಸವಾಗದಂತೆ ಸುರಕ್ಷಿತವಾಗಿ ಇಡುವುದು ಬ್ಯಾಂಕಿಂಗ್ ಕ್ಷೇತ್ರದ ಉದ್ದೇಶ’ ಎಂದರು.

ರಿಸರ್ವ್ ಬ್ಯಾಂಕ್ ಒಂಬಡ್ಸ್‌ಮನ್ ಯೋಜನೆಗೆ ಸಂಬಂಧಿಸಿದ ಕರಪತ್ರ ಹಾಗೂ ಕಿರು ಹೊತ್ತಿಗೆಯನ್ನು ವಿತರಿಸಲಾಯಿತು.

ಉಪ ಒಂಬಡ್ಸ್ ಮನ್ ನಿಧಿ ಅಗರ್ವಾಲ್, ಕೆನರಾ ಬ್ಯಾಂಕ್ ಉಪ ಜನರಲ್ ಮ್ಯಾನೇಜರ್ ರಾಜೀವ್ ತುಕ್ರಾಲ್, ಎಸ್‍ಬಿಐ ಉಪ ಜನರಲ್ ಮ್ಯಾನೇಜರ್ ಎಲ್.ಶ್ರೀನಿವಾಸ್ ರಾವ್, ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.