ADVERTISEMENT

ವಲಸಿಗರಿಂದ ಹಾಳಾಗುತ್ತಿರುವ ಬಿ.ಜೆ.ಪಿ: ದತ್ತಾತ್ರೇಯ ನಾಯ್ಕ ಆರೋಪ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2021, 12:41 IST
Last Updated 5 ಡಿಸೆಂಬರ್ 2021, 12:41 IST
ದತ್ತಾತ್ರೇಯ ನಾಯ್ಕ
ದತ್ತಾತ್ರೇಯ ನಾಯ್ಕ   

ಕಾರವಾರ: ‘ಬಿ.ಜೆ.ಪಿ.ಯಲ್ಲಿ ನಾಯಕರು ವೈಯಕ್ತಿಕ ಹಿತಾಸಕ್ತಿಗಳಿಗಾಗಿ ಪಕ್ಷದ ಒಳಿತನ್ನು ಬಲಿ ಕೊಡುತ್ತಿದ್ದಾರೆ. ಚುನಾವಣೆಗಳಲ್ಲಿ ಸ್ಪರ್ಧಿಸಲು ನಿಷ್ಠಾವಂತ ಕಾರ್ಯಕರ್ತರಿಗೆ ಅವಕಾಶ ಕೊಡುತ್ತಿಲ್ಲ. ವಲಸಿಗರಿಂದ ಪಕ್ಷ ಹಾಳಾಗುತ್ತಿದೆ’ ಎಂದು ವಿಧಾನಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿರುವ, ಹೈಕೋರ್ಟ್ ವಕೀಲ ದತ್ತಾತ್ರೇಯ ನಾಯ್ಕ ದೂರಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾನು ಪಕ್ಷದಲ್ಲಿ 30 ವರ್ಷ ವಿವಿಧ ಜವಾಬ್ದಾರಿಗಳಲ್ಲಿ ಕೆಲಸ ಮಾಡಿದ್ದೇನೆ. ಕಳೆದ ಬಾರಿಯೂ ಟಿಕೆಟ್ ನಿರೀಕ್ಷಿಸಿ ಮುಖಂಡರ ಬಳಿ ಚರ್ಚಿಸಿದ್ದೆ. ಆದರೆ, ಅವಕಾಶ ಕೊಡಲಿಲ್ಲ. ಇದರಿಂದ ಬೇಸರವಾಗಿದೆ. ಪಕ್ಷದ ಶೇ 70ರಷ್ಟು ಪ್ರಾಮಾಣಿಕ ಕಾರ್ಯಕರ್ತರಲ್ಲಿ ಇದೇ ಭಾವನೆಯಿದೆ’ ಎಂದರು.

‘ಈ ಕ್ಷೇತ್ರದ ಎಲ್ಲ ಕಡೆಗೂ ಭೇಟಿ ನೀಡುತ್ತಿದ್ದು, ನನಗೆ ಮತದಾರರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ ಮೇಲ್ಮನೆಯು ಚಿಂತಕರ ಚಾವಡಿಯಾಗಿದ್ದು, ವಿದ್ಯಾಭ್ಯಾಸ ಇರುವಂಥ ಪ್ರಾಮಾಣಿಕರಿಗೆ ಮತ ಕೊಡುವುದಾಗಿ ಮತದಾರರು ಹೇಳುತ್ತಾರೆ. ಅದರ ಪ್ರಕಾರ ಪ್ರಥಮ ಪ್ರಾಶಸ್ತ್ಯದ ಮತವನ್ನೇ ನನಗೆ ಕೊಡುವ ಭರವಸೆಯಿದೆ. ಒಂದುವೇಳೆ ಅದು ಸಾಧ್ಯವಾಗಿದ್ದರೂ ಎರಡನೇ ಪ್ರಾಶಸ್ತ್ಯದಲ್ಲಿ ಮತ ಕೊಡಲು ಮನವಿ ಮಾಡಿದ್ದೇನೆ’ ಎಂದು ತಿಳಿಸಿದರು.

ADVERTISEMENT

‘ನಾನು ಪಕ್ಷೇತರನಾಗಿ ಸ್ಪರ್ಧಿಸುತ್ತಿರುವುದು ಗಮನಕ್ಕೆ ಬಂದರೂ ಪಕ್ಷದ ಮುಖಂಡರು ಯಾರೂ ನನ್ನನ್ನು ಸಂಪರ್ಕಿಸಲಿಲ್ಲ. ನನಗೆ ಪಕ್ಷದ ಮೇಲೆ ಅಭಿಮಾನವಿದೆ. ಇಲ್ದೇ ಹೋಗಿದ್ದರೆ ಪಕ್ಷಾಂತರ ಮಾಡುತ್ತಿದ್ದೆ. ಒಂದುವೇಳೆ, ನನ್ನ ವಿರುದ್ಧ ವರಿಷ್ಠರು ಕ್ರಮ ಕೈಗೊಂಡರೂ ತೊಂದರೆಯಿಲ್ಲ. ಸಾಮಾಜಿಕ ಕಾರ್ಯದಲ್ಲಿ ಮುಂದುವರಿಯುತ್ತೇನೆ’ ಎಂದು ಹೇಳಿದರು.

ಮುಟ್ಟಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ದೇವಯ್ಯ ನಾಯ್ಕ, ಭಟ್ಕಳ ಪುರಸಭೆ ಸದಸ್ಯ ಪಾಸ್ಕಲ್ ಗೋಬ್ಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.