ADVERTISEMENT

ಭಟ್ಕಳ| ಅಂಗಡಿ ಹರಾಜು ಪ್ರಕ್ರಿಯೆಗೆ ಅಂಗಡಿಕಾರರ ಬಿಗಿ ಪಟ್ಟು : ವಾಗ್ವಾದ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2023, 7:00 IST
Last Updated 15 ಫೆಬ್ರುವರಿ 2023, 7:00 IST
ಭಟ್ಕಳ ಪುರಸಭೆ ಕಚೇರಿಯಲ್ಲಿ ಮುಖ್ಯಾಧಿಕಾರಿ ಹಾಗೂ ಅಂಗಡಿಕಾರರ ನಡುವೆ ವಾಗ್ವಾದ ನಡೆಯಿತು
ಭಟ್ಕಳ ಪುರಸಭೆ ಕಚೇರಿಯಲ್ಲಿ ಮುಖ್ಯಾಧಿಕಾರಿ ಹಾಗೂ ಅಂಗಡಿಕಾರರ ನಡುವೆ ವಾಗ್ವಾದ ನಡೆಯಿತು   

ಭಟ್ಕಳ: ಪುರಸಭೆಯ ಅಂಗಡಿ ಮಳಿಗೆ ಹರಾಜು ಪ್ರಕ್ರಿಯೆಯನ್ನು ಉರ್ದು ಭಾಷೆಯಲ್ಲಿ ಜಾಹೀರಾತು ಪ್ರಕಟಣೆ ಹೊರಡಿಸಿಲ್ಲ ಎಂಬ ಕಾರಣದಿಂದ ಮುಂದೂಡಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಅಂಗಡಿಕಾರರು ಮಂಗಳವಾರವೂ ಸಹ ಪುರಸಭೆ ಎದುರು ಪ್ರತಿಭಟನೆ ನಡೆಸಿದರು.

ಪುರಸಭೆ ಕಚೇರಿ ಆರಂಭವಾಗುತ್ತಿದ್ದಂತೆ ಬಾಗಿಲಿನಲ್ಲಿ ಧರಣಿ ಕುಳಿತು ಪುರಸಭೆಯ ಧೋರಣೆ ಬಗ್ಗೆ ಧಿಕ್ಕಾರ ಕೂಗಿದರು. ಪ್ರತಿಭಟನಾ ಸ್ಥಳಕ್ಕಾಗಮಿಸಿದ ಪುರಸಭೆ ಮುಖ್ಯಾಧಿಕಾರಿ ಎಂ.ಕೆ. ಸುರೇಶ, ಸಂಜೆಯೊಳಗೆ ಸ್ಪಷ್ಟ ನಿರ್ಧಾರ ತೆಗೆದುಕೊಂಡು ಲಿಖಿತವಾಗಿ ತಿಳಿಸುವ ಭರವಸೆ ನೀಡಿ ಅಂಗಡಿಕಾರರಿಗೆ ಪ್ರತಿಭಟನೆ ವಾಪಸ್ ಪಡೆಯುವಂತೆ ಕೇಳಿಕೊಂಡರು.

ಮುಖ್ಯಾಧಿಕಾರಿಯ ಭರವಸೆ ಹಿನ್ನೆಲೆಯಲ್ಲಿ ಪ್ರತಿಭಟನೆ ವಾಪಸ್ ಪಡೆದು ಸಂಜೆ ಮತ್ತೆ ಮುಖ್ಯಾಧಿಕಾರಿ ಕಚೇರಿಗೆ ತೆರಳಿದ ಅಂಗಡಿಕಾರರು ಹರಾಜು ಪ್ರಕ್ರಿಯೆಗೆ ಪಟ್ಟು ಹಿಡಿದರು.

ADVERTISEMENT

‘ಹರಾಜು ಪ್ರಕ್ರಿಯೆ ನಡೆಸುವ ಬಗ್ಗೆ ಅಧ್ಯಕ್ಷರ ಗಮನಕ್ಕೆ ತರಲಾಗಿದೆ. ಆದರೆ ಅವರು ಫೆ.16ರಂದು ನಡೆಯುವ ಸಾಮಾನ್ಯ ಸಭೆಯಲ್ಲಿ ಈ ಕುರಿತು ಚರ್ಚಿಸಲು ಲಿಖಿತವಾಗಿ ಹೇಳಿದ್ದಾರೆ’ ಎಂದರು. ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಪುರಸಭೆಯ ನಾಮನಿರ್ದೇಶಿತ ಸದಸ್ಯ ಶ್ರೀಕಾಂತ ನಾಯ್ಕ, ಅಂಗಡಿ ಹರಾಜು ಪ್ರಕ್ರಿಯೆ ಬಗ್ಗೆ ಸಾಮಾನ್ಯ ಸಭೆಯಲ್ಲಿ ಚರ್ಚಿಸುವ ಅಗತ್ಯವಿಲ್ಲ. ಪುರಸಭೆ ಧೋರಣೆಯಿಂದ ನಮ್ಮ ಅಂಗಡಿಕಾರರಿಗೆ ಅನ್ಯಾಯವಾಗಲಿದೆ. ಅಂಗಡಿಕಾರರಿಗೆ ನ್ಯಾಯ ಸಿಗುವ ವರೆಗೂ ಹೋರಾಟ ನಿಲ್ಲಿಸುವುದಿಲ್ಲ. ಬುಧವಾರ ಬೆಳಿಗ್ಗೆ ಹರಾಜು ಪ್ರಕ್ರಿಯೆ ನಡೆಸದೇ ಇದ್ದರೆ ಮತ್ತೆ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಸಿದರು.

ಮುಖ್ಯಾಧಿಕಾರಿ ಯಾರದ್ದೋ ಒತ್ತಡಕ್ಕೆ ಮಣಿಯುವುದು ಸರಿಯಲ್ಲ. ಕಾನೂನು ಏನು ಹೇಳುತ್ತದೋ ಅದನ್ನು ಮಾಡಬೇಕು ಎಂದು ಒತ್ತಾಯಿಸಿದರು. ಮುಖ್ಯಾಧಿಕಾರಿ ಮತ್ತು ಅಂಗಡಿಕಾರರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಸಂಜೆ 5.30ರಿಂದ 8.30 ರವರೆಗೂ ವಾಗ್ವಾದ ಮುಂದುವರಿದಿತ್ತು. ಪಟ್ಟು ಬಿಡದ ಅಂಗಡಿಕಾರರು ಅಂಗಡಿ ಹರಾಜು ಮುರುಟೆಂಡರ್ ನಡೆಸುವುದಿಲ್ಲ ಎನ್ನುವುದರ ಬಗ್ಗೆ ಲಿಖಿತವಾಗಿ ಬರೆದುಕೊಡಬೇಕು ಎಂದು ಆಗ್ರಹಿಸಿದರು.

ಅಂಗಡಿಕಾರರಾದ ಸಂದೀಪ ಶೇಟ್,ಕೃಷ್ಣಾನಂದ ಸಾಣಿಕಟ್ಟೆ, ಜಿಯಾವುಲ್ಲಾ, ಸೈಯದ್ ಖಮರ್ ಸೇರಿದಂತೆ ಹರಾಜಿಗೆ ಡಿಡಿ ಸಲ್ಲಿಸಿದ ಅಂಗಡಿಕಾರು ಅಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.