ADVERTISEMENT

ಕರಡು ಅಧಿಸೂಚನೆ ವಿರುದ್ಧ ಜು.30ಕ್ಕೆ ಪ್ರತಿಭಟನೆ

ಚಿಂತನ ಸಭೆಯಲ್ಲಿ ತೀರ್ಮಾನ

​ಪ್ರಜಾವಾಣಿ ವಾರ್ತೆ
Published 23 ಜುಲೈ 2022, 12:57 IST
Last Updated 23 ಜುಲೈ 2022, 12:57 IST
ಶಿರಸಿಯಲ್ಲಿ ಅರಣ್ಯ ಭೂಮಿ ಹಕ್ಕು ಹೋರಟಗಾರರ ವೇದಿಕೆ ಸಭೆಯಲ್ಲಿ ಪ್ರಮುಖರು ಜನಜೀವನಕ್ಕೆ ಮರಕವಾಗಿರುವ ಪರಿಸರ ಸೂಕ್ಷ್ಮ ಪ್ರದೇಶ ಕರಡು ವರದಿ ಪ್ರದರ್ಶಿಸಿದರು
ಶಿರಸಿಯಲ್ಲಿ ಅರಣ್ಯ ಭೂಮಿ ಹಕ್ಕು ಹೋರಟಗಾರರ ವೇದಿಕೆ ಸಭೆಯಲ್ಲಿ ಪ್ರಮುಖರು ಜನಜೀವನಕ್ಕೆ ಮರಕವಾಗಿರುವ ಪರಿಸರ ಸೂಕ್ಷ್ಮ ಪ್ರದೇಶ ಕರಡು ವರದಿ ಪ್ರದರ್ಶಿಸಿದರು   

ಶಿರಸಿ: ಕಸ್ತೂರಿ ರಂಗನ್ ವರದಿ ಆಧಾರಿತ ಪರಿಸರ ಸೂಕ್ಷ್ಮ ಪ್ರದೇಶ ಘೋಷಣೆಯ ಐದನೇ ಕರಡು ಅಧಿಸೂಚನೆ ರದ್ದುಗೊಳಿಸಬೇಕೆಂದು ಒತ್ತಾಯಿಸಿ ಜುಲೈ 30 ರಂದು ಶಿರಸಿಯಲ್ಲಿ ಬೃಹತ್ ರ‍್ಯಾಲಿ ಸಂಘಟಿಸಲು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ನಿರ್ಣಯಿಸಿದೆ.

ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಅಧ್ಯಕ್ಷತೆಯಲ್ಲಿ ಶನಿವಾರ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಕಚೇರಿಯಲ್ಲಿ ನಡೆದ ‘ಕಸ್ತೂರಿ ರಂಗನ್ ವರದಿ- ಚಿಂತನ ಸಭೆ’ಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.

‘ಪರಿಸರ ಸೂಕ್ಷ್ಮ ಪ್ರದೇಶ ವ್ಯಾಪ್ತಿಗೆ ಜಿಲ್ಲೆಯ 6,998 ಚದರ್ ಕಿಲೋ ಮೀಟರ್ ಪ್ರದೇಶದಲ್ಲಿನ 704 ಹಳ್ಳಿಗಳು ಸೇರ್ಪಡೆಯಾಗಿದ್ದರಿಂದ ಜಿಲ್ಲೆಯ ಜನಜೀವನ ಬುಡಮೇಲಾಗುವ ಆತಂಕವಿದೆ. ಇಂತಹ ಅವೈಜ್ಞಾನಿಕ ವರದಿಯನ್ನು ತಿರಸ್ಕರಿಸುವಂತೆ ಸರ್ಕಾರದ ಗಮನ ಸೆಳೆಯಲು ದೊಡ್ಡಮಟ್ಟದ ಪ್ರತಿಭಟನೆ ನಡೆಸಲಾಗುವುದು’ ಎಂದು ರವೀಂದ್ರ ನಾಯ್ಕ ತಿಳಿಸಿದರು.

ADVERTISEMENT

‘ವರದಿ ಅನುಷ್ಠಾನದ ಮುನ್ನ ಕರಡು ವರದಿಯಲ್ಲಿ ಘೋಷಿಸಿದ ಸೂಕ್ಷ್ಮ ಪ್ರದೇಶ ವ್ಯಾಪ್ತಿಯ ಗ್ರಾಮಗಳ ಜನರ ಅಭಿಪ್ರಾಯ ಸಂಗ್ರಹಿಸಿ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕೆಂದು ಮುಖ್ಯಮಂತ್ರಿಯವರಿಗೆ ಒತ್ತಾಯಿಸಲು ನಿರ್ಣಯಿಸಲಾಗಿದೆ. ಕರಡು ವರದಿ ವಿರುದ್ಧ ಆಯಾ ಗ್ರಾಮಗಳ ಪ್ರತಿ ಕುಟುಂಬದಿಂದ ಆಕ್ಷೇಪಣೆ ಸಲ್ಲಿಕೆಗೂ ನಿರ್ಧರಿಸಲಾಗಿದೆ’ ಎಂದು ತಿಳಿಸಿದರು.

ಲಕ್ಷ್ಮಣ ಮಾಳ್ಳಕ್ಕನವರ, ದೇವರಾಜ ಮರಾಠಿ, ನೆಹರೂ ನಾಯ್ಕ ಬಿಳೂರು, ಎಂ.ಆರ್.ನಾಯ್ಕ ಕಂಡ್ರಾಜಿ, ಉದಯ ನಾಯ್ಕ, ರಾಜು ನರೇಬೈಲ್, ಜೈ ಪ್ರಕಾಶ ಹಬ್ಬು, ಇಬ್ರಾಹಿಂ ಗೌಡಳ್ಳಿ, ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.