ಹೊನ್ನಾವರ: ಎಲ್ಲ ವರ್ಗದವರಿಗೆ ಗುಣಮಟ್ಟದ ಶಿಕ್ಷಣ ದೊರಕುವಂತೆ ಮಾಡುವುದು ಸರ್ಕಾರದ ಗುರಿಯಾಗಿದೆ. ಸಾಕ್ಷರ ಸಮಾಜ ನಿರ್ಮಿಸುವ ಶಿಕ್ಷಕರಿಗೆ ವಿದ್ಯಾರ್ಥಿಗಳು ದೊಡ್ಡ ಆಸ್ತಿಯಾಗಿದ್ದು ಶಿಕ್ಷಕರಿಗೆ ಗೌರವದ ಸ್ಥಾನವಿದೆ’ ಎಂದು ಸಚಿವ ಮಂಕಾಳ ಎಸ್.ವೈದ್ಯ ಹೇಳಿದರು.
ವಿವಿಧ ಇಲಾಖೆಗಳ ಸಹಯೋಗದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಾಸಕ ದಿನಕರ ಕೆ.ಶೆಟ್ಟಿ ಸಾಧಕ ಶಿಕ್ಷಕ ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಿ ಮಾತನಾಡಿ, ‘ದೇಶದ ರಾಜಕೀಯ ವ್ಯವಸ್ಥೆ ನಿಯಂತ್ರಿಸುವ ಸಾಮರ್ಥ್ಯ ಶಿಕ್ಷಕರಿಗಿದ್ದು ಶಿಕ್ಷಕರಿಗೆ ಗೌರವಯುತ ಜೀವನ ನಡೆಸಲು ಅನುಕೂಲವಾಗುವಂತೆ ಸರ್ಕಾರ ಉತ್ತಮ ಸಂಬಳ ನೀಡಬೇಕು’ ಎಂದು ಆಗ್ರಹಿಸಿದರು.
ತಹಶೀಲ್ದಾರ್ ಪ್ರವೀಣ ಕರಾಂಡೆ ಮಾತನಾಡಿದರು. ಕೇಂದ್ರೀಯ ಶಾಲೆಯ ಪ್ರಾಂಶುಪಾಲೆ ವಿಜಯಲಕ್ಷ್ಮಿ ನಾಯ್ಕ ಉಪನ್ಯಾಸ ನೀಡಿದರು.
ತಾಲ್ಲೂಕು ಪಂಚಾಯಿತಿ ಇಒ ಚೇತನಕುಮಾರ, ಬಿಇಓ ವಿನಾಯಕ ಅವಧಾನಿ, ಯುವಜನ ಸೇವೆ ಮತ್ತು ಕ್ರೀಡಾಧಿಕಾರಿ ಸುಧೀಶ ನಾಯ್ಕ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಜಿ.ನಾಯ್ಕ ಭಾಗವಹಿಸಿದ್ದರು.
‘ಪರಂಪರೆಯ ಅರಿವು ಹೊಂದುವ ಜೊತೆಗೆ ಶಿಕ್ಷಕನಾದವನು ಕಾಲಕ್ಕೆ ತಕ್ಕಂತೆ ಜ್ಞಾನವನ್ನು ನವೀಕರಣಗೊಳಿಸಿಕೊಳ್ಳುವ ಮೂಲಕ ಸಮಕಾಲೀನ ಶಿಕ್ಷಣದ ಅಗತ್ಯ ಪೂರೈಸಬೇಕು’ ಎಂದು ಭಟ್ಕಳ ಅಂಜುಮನ್ ಎಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕ ಪ್ರಸಾದ ಜಿ.ಬಿ.ಹೇಳಿದರು.
ಶಿಕ್ಷಕ ದಿನಾಚರಣೆ ಅಂಗವಾಗಿ ಎಂ.ಪಿ.ಇ.ಸೊಸೈಟಿ ವತಿಯಿಂದ ಎಸ್.ಡಿ.ಎಂ.ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎಂಪಿಇ ಸೊಸೈಟಿಯ ಅಧ್ಯಕ್ಷ ಕೃಷ್ಣಮೂರ್ತಿ ಭಟ್ಟ,ಪ್ರಾಚಾರ್ಯ ಡಿ.ಎಲ್.ಹೆಬ್ಬಾರ ಮಾತನಾಡಿದರು.
ಜಂಟಿ ಕಾರ್ಯದರ್ಶಿ ಜಿ.ಪಿ.ಹೆಗಡೆ ಸ್ವಾಗತಿಸಿದರು. ಕಾರ್ಯದರ್ಶಿ ಎಸ್.ಎಂ.ಭಟ್ಟ ವಂದಿಸಿದರು.
ಕುಮಟಾ: ‘ಸಮಾಜದಲ್ಲಿ ಯಾರಿಗೂ ಸಿಗದ ಅನುಪಮ ಸೇವೆಯ ಅವಕಾಶ ಕಲಿಸುವ ಶಿಕ್ಷಕಕರಿಗೆ ಮಾತ್ರ ಲಭಿಸಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದರು.
ಪಟ್ಟಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರವಾರ ಶೈಕ್ಷಣಿಕ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
‘ಒಬ್ಬ ವ್ಯಕ್ತಿ ಉತ್ತಮ ನಾಗರೀಕನಾಗಿ ಹೆಸರು ಮಾಡಿದ್ದಾನೆ ಎಂದಾದರೆ ಅದಕ್ಕೆ ಆತನಿಗೆ ಕಲಿಸಿದ ಶಿಕ್ಷಕರೇ ಕಾರಣರಾಗಿರುತ್ತಾರೆ’ ಎಂದರು.
ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ, ‘ಕಾರವಾರ ಹಾಗೂ ಶಿರಸಿ ಶೈಕ್ಷಣಿಕ ಜಿಲ್ಲೆಗಳು ಕಳೆದ ಎರಡು ವರ್ಷಗಳಲ್ಲಿ ಉತ್ತಮ ಶೈಕ್ಷಣಿಕ ಪ್ರಗತಿ ಸಾಧಿಸುತ್ತಿವೆ. ಮಕ್ಕಳ ಚಾರಿತ್ರ್ಯ ನಿರ್ಮಾಣ ಕಾರ್ಯ ಶಿಕ್ಷಕರಿಂದಲೇ ಆರಂಭವಾಗುತ್ತದೆ. ಪುಸ್ತಕದ ಆಚೆಯ ಜ್ಞಾನದ ಬಗ್ಗೆ ಮಕ್ಕಳನ್ನು ಅಣಿಗೊಳಿಸುವ ಜವಾಬ್ದಾರಿ ಶಿಕ್ಷರದು’ ಎಂದರು.
ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಅಧ್ಯಕ್ಷತೆ ವಹಿಸಿದ್ದ ಶಾಸಕ ದಿನಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್, ಉಪವಿಭಾಗಾಧಿಕಾರಿ ಶ್ರವಣಕುಮಾರ ಪಿ., ಶಿಕ್ಷಣ ಇಲಾಖೆಯ ನಿರ್ದೇಶಕ ಈಶ್ವರ ನಾಯ್ಕ, ಡಿಡಿಪಿಐ ಲತಾ ನಾಯಕ, ಡಯಟ್ ಪ್ರಾಚಾರ್ಯ ಎನ್.ಆರ್.ಹೆಗಡೆ, ಬಿಇಒ ಉದಯ ನಾಯ್ಕ, ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಆನಂದು ಗಾಂವಕರ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.