ADVERTISEMENT

ಉತ್ತರ ಕನ್ನಡ: ಹೊರಗಿನಿಂದ ಬಂದವರ ಕೈಗೆ ‘ಕ್ವಾರಂಟೈನ್ ಮುದ್ರೆ’

ಬೇರೆ ರಾಜ್ಯ, ಜಿಲ್ಲೆಗಳಿಂದ ಬಂದವರ ಗುರುತಿಸಲು ಕ್ರಮಕ್ಕೆ ಸೂಚನೆ

​ಪ್ರಜಾವಾಣಿ ವಾರ್ತೆ
Published 9 ಮೇ 2021, 12:30 IST
Last Updated 9 ಮೇ 2021, 12:30 IST
ಕಾರವಾರ ತಾಲ್ಲೂಕಿನ ಮಾಜಾಳಿ ಚೆಕ್‌ಪೋಸ್ಟ್‌ನಲ್ಲಿ ಪೊಲೀಸರು ಆರಂಭಿಸಿರುವ ಕೋವಿಡ್ 19 ಸಂಬಂಧಿತ ತಪಾಸಣಾ ಕೇಂದ್ರ
ಕಾರವಾರ ತಾಲ್ಲೂಕಿನ ಮಾಜಾಳಿ ಚೆಕ್‌ಪೋಸ್ಟ್‌ನಲ್ಲಿ ಪೊಲೀಸರು ಆರಂಭಿಸಿರುವ ಕೋವಿಡ್ 19 ಸಂಬಂಧಿತ ತಪಾಸಣಾ ಕೇಂದ್ರ   

ಕಾರವಾರ: ‘ಜಿಲ್ಲೆಗೆ ಲಾಕ್‌ಡೌನ್ ಅವಧಿಯಲ್ಲಿ ಬೇರೆ ರಾಜ್ಯ, ಜಿಲ್ಲೆಗಳಿಂದ ಬಂದವರನ್ನು ಗುರುತಿಸುವ ಕಾರ್ಯವಾಗಬೇಕು. ಅವರೆಲ್ಲರಿಗೂ ಕ್ವಾರಂಟೈನ್ ಮುದ್ರೆ ಹಾಕಲು ಕ್ರಮ ಕೈಗೊಳ್ಳಬೇಕು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಕೆ.ಕೃಷ್ಣಮೂರ್ತಿ ತಹಶೀಲ್ದಾರರಿಗೆ ಸೂಚಿಸಿದ್ದಾರೆ.

ಜಿಲ್ಲೆಯ ಎಲ್ಲ ತಹಶೀಲ್ದಾರರ ಜೊತೆ ಶನಿವಾರ ನಡೆದ ವಿಡಿಯೊ ಸಂವಾದದಲ್ಲಿ ಅವರು ಮಾತನಾಡಿದರು.

‘ಪ್ರಮುಖವಾಗಿ ಬೆಂಗಳೂರಿನಿಂದ ಬಂದ ಎಲ್ಲ ಪ್ರಯಾಣಿಕರಿಗೆ ಕ್ವಾರಂಟೈನ್ ಮುದ್ರೆಯನ್ನು ಹಾಕಬೇಕು. ಜಿಲ್ಲೆಯ ಎಲ್ಲ ರೈಲು ನಿಲ್ದಾಣಗಳಲ್ಲಿ ಒಂದು ತಪಾಸಣಾ ತಂಡವನ್ನು ನಿಯೋಜಿಸಬೇಕು. ಅಲ್ಲಿ ಒಂದು ನೋಂದಣಿ ಪುಸ್ತಕವನ್ನಿಟ್ಟು, ಬರುವ ಪ್ರಯಾಣಿಕರ ಹೆಸರು, ವಿಳಾಸ ಮತ್ತು ಮೊಬೈಲ್ ಫೋನ್ ಸಂಖ್ಯೆಯನ್ನು ನಮೂದಿಸಬೇಕು. ಹೊರ ರಾಜ್ಯ ಮತ್ತು ಜಿಲ್ಲೆಗಳಿಂದ ಬರುವ ವಾಹನಗಳ ನೋಂದಣಿ ಸಂಖ್ಯೆಗಳನ್ನು ಪುಸ್ತಕದಲ್ಲಿ ನಮೂದು ಮಾಡಿಕೊಳ್ಳಬೇಕು’ ಎಂದು ನಿರ್ದೇಶನ ನೀಡಿದರು.

ADVERTISEMENT

‘ಇದೇ ಮಾದರಿಯಲ್ಲಿ ಜಿಲ್ಲೆಯ ಗಡಿ ಭಾಗಗಳಾದ ಕಾರವಾರ, ಯಲ್ಲಾಪುರ, ಶಿರಸಿ, ಸಿದ್ದಾಪುರ, ಮುಂಡಗೋಡ ಮತ್ತು ಭಟ್ಕಳದಲ್ಲಿ ಕೂಡ ತಂಡಗಳನ್ನು ನಿಯೋಜಿಸಬೇಕು. ಕ್ವಾರಂಟೈನ್ ಮಾಡಲು ಸೂಚಿಸಲಾಗಿರುವ ವ್ಯಕ್ತಿಗಳ ಹೆಸರನ್ನು ಆಯಾ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳಿಗೆ ಪಟ್ಟಿಯ ಮೂಲಕ ತಿಳಿಸಬೇಕು. ಕ್ವಾರಂಟೈನ್ ಕೇಂದ್ರಗಳು ಮತ್ತು ಅವುಗಳ ಉಸ್ತುವಾರಿ ವ್ಯಕ್ತಿಗಳ ಮಾಹಿತಿಯನ್ನು ನೀಡಬೇಕು’ ಎಂದು ಸೂಚಿಸಿದರು.

‘ಹೋಂ ಕ್ವಾರಂಟೈನ್‌ನಲ್ಲಿ ಯಾವುದೇ ಲೋಪ ದೋಷಗಳಾಗದಂತೆ ಪರಿಣಾಮಕಾರಿಯಾಗಿ ನಿಭಾಯಿಸಬೇಕು. ಗ್ರಾಮ ಮಟ್ಟದಲ್ಲಿ ತಂಡಗಳನ್ನು ರಚಿಸಿ, ಕ್ವಾರಂಟೈನ್ ಇರುವ ವ್ಯಕ್ತಿಗಳ ಮೇಲೆ ನಿಗಾ ವಹಿಸಬೇಕು’ ಎಂದು ತಹಶೀಲ್ದಾರರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.