ಕಾರವಾರ: ಮುಂಗಾರು ಹಂಗಾಮು ಆರಂಭಗೊಳ್ಳಲು ದಿನಗಣನೆ ಆರಂಭಗೊಂಡ ಬೆನ್ನಲ್ಲೇ ನಗರದ ಮಾರುಕಟ್ಟೆಯಲ್ಲಿ ತಾಡಪತ್ರಿ, ಸೊಳ್ಳೆ ಪರದೆಗಳ ವಹಿವಾಟು ಬಿರುಸುಗೊಂಡಿದೆ.
ಮಳೆಗಾಲಕ್ಕೆ ಮನೆಯ ಅಂಗಳದಲ್ಲಿ ವಾಹನ ನಿಲುಗಡೆ, ಪರಿಕರಗಳ ದಾಸ್ತಾನಿಗೆ ತಾತ್ಕಾಲಿಕ ಶೆಡ್ ನಿರ್ಮಾಣದ ಸಲುವಾಗಿ ಜನರು ವಿವಿಧ ಅಳತೆಯ ತಾಡಪತ್ರಿಗಳನ್ನು ಖರೀದಿಸುವಲ್ಲಿ ನಿರತರಾಗಿದ್ದಾರೆ. ಇಲ್ಲಿನ ಎಂ.ಜಿ.ರಸ್ತೆ, ಶಿವಾಜಿ ವೃತ್ತ, ಪಿಕಳೆ ರಸ್ತೆ, ಗ್ರೀನ್ ಸ್ಟ್ರೀಟ್ ಸೇರಿದಂತೆ ವಿವಿಧೆಡೆ ಹೊರ ಜಿಲ್ಲೆಗಳಿಂದ ತಾಡಪತ್ರಿ ದಾಸ್ತಾನು ತಂದಿರುವ ವ್ಯಾಪಾರಿಗಳು, ಮಾರಾಟದಲ್ಲಿ ತೊಡಗಿದ್ದಾರೆ.
ಅಳತೆಗೆ ತಕ್ಕಂತೆ ತಾಡಪತ್ರಿಗಳು ₹200ರಿಂದ ಆರಂಭಗೊಂಡು ₹2,000ವರೆಗೆ ಮಾರಾಟವಾಗುತ್ತಿವೆ. ಮೂರ‍್ನಾಲ್ಕು ದಿನಗಳಿಂದ ಆಗಾಗ ಮಳೆ ಸುರಿಯುತ್ತಿರುವ ಕಾರಣ, ಖರೀದಿ ಪ್ರಮಾಣ ಹೆಚ್ಚಿದೆ. ಭಾನುವಾರ ಸಂತೆ ಮಾರುಕಟ್ಟೆಯಲ್ಲಿ ವ್ಯಾಪಾರಿಗಳ ಸಂಖ್ಯೆಯೂ ವೃದ್ಧಿಸಿದೆ. ನಗರದ ವಿವಿಧೆಡೆ ಸುಮಾರು 20ಕ್ಕೂ ಹೆಚ್ಚು ವ್ಯಾಪಾರಿಗಳು ವಾಹನಗಳಲ್ಲಿ ತಾಡಪತ್ರಿ, ಸೊಳ್ಳೆ ಪರದೆಗಳನ್ನಿಟ್ಟುಕೊಂಡು ಮಾರಾಟ ನಡೆಸಿದ್ದಾರೆ.
‘ಮುಂದಿನ ಎರಡು ವಾರದೊಳಗೆ ಮಳೆಗಾಲ ಆರಂಭಗೊಳ್ಳಬಹುದು ಎಂಬ ನಿರೀಕ್ಷೆ ಇದೆ. ಕರಾವಳಿ ಭಾಗದಲ್ಲಿ ಮಳೆ ಪ್ರಮಾಣ ಹೆಚ್ಚಿರುವ ಕಾರಣ ವಾಹನಗಳ ನಿಲುಗಡೆಗೆ, ಮೀನುಗಾರಿಕೆ ಪರಿಕರಗಳನ್ನಿಡಲು ತಾತ್ಕಾಲಿಕ ಶೆಡ್ ನಿರ್ಮಿಸುವುದು ವಾಡಿಕೆ. ಇದಕ್ಕಾಗಿ ತಾಡಪತ್ರಿ ಬಳಕೆ ಅನಿವಾರ್ಯವಾಗಿರುವ ಕಾರಣ ವಹಿವಾಟು ಉತ್ತಮವಾಗಿದೆ’ ಎಂದು ತಾಡಪತ್ರಿ ವ್ಯಾಪಾರಿ ಮಧುಕರ ಹೇಳಿದರು.
‘ಮಳೆಗಾಲದಲ್ಲಿ ಕರಾವಳಿ ಭಾಗದಲ್ಲಿ ಸೊಳ್ಳೆ ಕಾಟವೂ ವಿಪರೀತ. ಅದರಿಂದ ರಕ್ಷಿಸಿಕೊಳ್ಳಲು ಸೊಳ್ಳೆ ಪರದೆ ಬಳಕೆ ಹೆಚ್ಚು. ತಾಡಪತ್ರಿಯೊಂದಿಗೆ ಸೊಳ್ಳೆ ಪರದೆಗೂ ಹೆಚ್ಚು ಬೇಡಿಕೆ ಇದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.