ADVERTISEMENT

ಶಿರಸಿ | ‘ರಾಖಿ’ಗೆ ಕೊರೊನಾ ಕರಿನೆರಳು

ಅಂಗಡಿಯಲ್ಲಿ ಖರೀದಿಗಿಂತ ಆನ್‌ಲೈನ್ ವಹಿವಾಟಿಗೆ ಬೇಡಿಕೆ ಜೋರು

​ಪ್ರಜಾವಾಣಿ ವಾರ್ತೆ
Published 30 ಜುಲೈ 2020, 20:00 IST
Last Updated 30 ಜುಲೈ 2020, 20:00 IST
ಶಿರಸಿಯ ಅಂಗಡಿಯೊಂದರಲ್ಲಿ ರಾಖಿ ವೈವಿಧ್ಯ ತೋರಿಸಿದ ವ್ಯಾಪಾರಿ
ಶಿರಸಿಯ ಅಂಗಡಿಯೊಂದರಲ್ಲಿ ರಾಖಿ ವೈವಿಧ್ಯ ತೋರಿಸಿದ ವ್ಯಾಪಾರಿ   

ಶಿರಸಿ: ಅಂಗಡಿಗಳನ್ನು ಅಲಂಕರಿಸಿರುವ ಬಣ್ಣ ಬಣ್ಣದ ರಾಖಿಗಳ ಮೇಲೆ ಕೊರೊನಾ ಕರಿನೆರಳು ಮೂಡಿದೆ. ಹೊಸ ಮಾದರಿಯ ಆಕರ್ಷಕ ರಾಖಿಗಳು ಯುವತಿಯರನ್ನು ಸೆಳೆಯಲು ವಿಫಲವಾಗಿವೆ.

ಆಗಸ್ಟ್‌ 3ರಂದು ನಡೆಯುವ ರಕ್ಷಾ ಬಂಧನ ಹೆಣ್ಣು ಮಕ್ಕಳಿಗೆ ವಿಶೇಷ ಹಬ್ಬ. ಸಹೋದರನಿಗೆ ರಕ್ಷೆ ಕಟ್ಟುವ ಮೂಲಕ ಬಾಂಧವ್ಯ ಭದ್ರಗೊಳಿಸುವ ಹಬ್ಬದ ಆಚರಣೆಗೆ ಹೆಣ್ಣು ಮಕ್ಕಳು ತವಕದಲ್ಲಿರುತ್ತಾರೆ. ಹೀಗಾಗಿ, ಪ್ರತಿವರ್ಷ ನಗರದಲ್ಲಿ ರಾಖಿ ಮಾರಾಟ ಜೋರಾಗಿ ನಡೆಯುತ್ತದೆ. ಅಂಗಡಿಗಳಲ್ಲಿ ಮಾತ್ರವಲ್ಲ, ಫುಟ್‌ಪಾತ್‌ನಲ್ಲೂ ರಾಖಿ ವ್ಯಾಪಾರಿಗಳು ಕಾಣಸಿಗುತ್ತಾರೆ. ಆದರೆ, ಈ ಬಾರಿ ಕೋವಿಡ್ 19 ಕಾರಣಕ್ಕೆ ರಾಖಿ ವ್ಯಾಪಾರಿಗಳು ಗ್ರಾಹಕರನ್ನು ಕಾಯುತ್ತ ಕುಳಿತುಕೊಳ್ಳುವಂತಾಗಿದೆ.

‘ಲಾಕ್‌ಡೌನ್ ಸಡಿಲಿಕೆಯ ನಂತರ ವ್ಯಾಪಾರ ಮೊದಲಿನ ಮಟ್ಟಕ್ಕೆ ಬರಲೇ ಇಲ್ಲ. ಹಳ್ಳಿಗರು ಪೇಟೆಗೆ ಬರುವುದನ್ನೇ ಕಡಿಮೆ ಮಾಡಿದ್ದಾರೆ. ಅಂಗಡಿಗೆ ಬರುವ ಗ್ರಾಹಕರೂ ತೀರಾ ಅಗತ್ಯವಿರುವ ಸಾಮಗ್ರಿಗಳನ್ನು ಮಾತ್ರ ಖರೀದಿಸುತ್ತಾರೆ. ಮುಖಗವಸು ಧರಿಸಲು ಆರಂಭಿಸಿದ ಮೇಲೆ ಸೌಂದರ್ಯವರ್ಧಕ ಸಾಮಗ್ರಿಗಳನ್ನು ಖರೀದಿಸಲು ಮಹಿಳೆಯರು ನಿರಾಸಕ್ತರಾಗಿದ್ದಾರೆ. ಮಾಮೂಲು ವ್ಯಾಪಾರ ಶೇ 50ರಷ್ಟು ಕಡಿಮೆಯಾಗಿದೆ’ ಎನ್ನುತ್ತಾರೆ ಭವಾನಿ ಸ್ಟೋರ್ಸ್‌ನ ಮಾಲೀಕ ರಾಜಸ್ಥಾನದ ದುರ್ಗಾರಾಂ.

ADVERTISEMENT

‘ಪ್ರತಿವರ್ಷ ರಕ್ಷಾ ಬಂಧನದ ವೇಳೆಗೆ ಅಂದಾಜು ₹ 50ಸಾವಿರ ಮೊತ್ತದ ರಾಖಿ ತರುತ್ತಿದ್ದೆವು. ಈ ವರ್ಷ ₹ 15ಸಾವಿರ ಮೊತ್ತದ ರಾಖಿ ತಂದಿದ್ದೇವೆ. ಆದರೂ, ತಂದಿರುವ ಅರ್ಧದಷ್ಟು ರಾಖಿಗಳೂ ಖಾಲಿಯಾಗಿಲ್ಲ. ಉಳಿಕೆಯಾದರೆ, ಮುಂದಿನ ವರ್ಷಕ್ಕೆ ಇವುಗಳಿಗೆ ಬೇಡಿಕೆ ಇರುವುದಿಲ್ಲ. ಈಗಿನ ತಲೆಮಾರಿನ ಮಕ್ಕಳು ಹೊಸ ಮಾದರಿಗಳನ್ನು ಹೆಚ್ಚು ಇಷ್ಟಪಡುತ್ತಾರೆ’ ಎಂದು ಅವರು ಬೇಸರಿಸಿಕೊಂಡರು.

‘ರಾಖಿ ಹಬ್ಬಕ್ಕಿಂತ ಮೊದಲು ಬರುವ ‘ಫ್ರೆಂಡ್‌ಷಿಪ್ ಡೇ’ ಬ್ಯಾಂಡ್‌ಗಳಿಗೂ ಬೇಡಿಕೆಯಿಲ್ಲ. ಶಾಲೆಯಿದ್ದರೆ ಮಕ್ಕಳು ಹೆಚ್ಚು ಬ್ಯಾಂಡ್‌ಗಳನ್ನು ಒಯ್ಯುತ್ತಿದ್ದರು. ದೀಪಾವಳಿ ಹಬ್ಬದ ನಂತರವಾದರೂ ವ್ಯಾಪಾರ–ವಹಿವಾಟು ಚೇತರಿಕೆ ಕಾಣಬಹುದೆಂಬ ನಿರೀಕ್ಷೆಯಲ್ಲಿದ್ದೇವೆ’ ಎಂದು ಹೇಳಿದರು.

‘ಕೋವಿಡ್ 19 ಕಾರಣಕ್ಕೆ ಮನೆಯಲ್ಲಿ ಹೊರ ಹೋಗಲು ಬಿಡುತ್ತಿಲ್ಲ. ಆನ್‌ಲೈನ್‌ನಲ್ಲಿ ಆಯ್ಕೆಗಳಿರುತ್ತವೆ, ಅಷ್ಟೇ ಅಲ್ಲ, ಮನೆಯಿಂದಲೇ ರಾಖಿಯನ್ನು ಕಳುಹಿಸಬಹುದು. ಅದಕ್ಕೆ ನಾವು ಸ್ನೇಹಿತೆಯರೆಲ್ಲ ಈ ಬಾರಿ ಆನ್‌ಲೈನ್‌ನಲ್ಲಿ ಸಹೋದರರಿಗೆ ರಾಖಿ ಕಳುಹಿಸಲು ನಿರ್ಧರಿಸಿದ್ದೇವೆ’ ಎಂದಳು ವಿದ್ಯಾರ್ಥಿನಿ ಸ್ನೇಹಲ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.