ADVERTISEMENT

ಶಿರಸಿಯ ಗ್ರಾಮ ಅರಣ್ಯ ಸಮಿತಿಗಳಿಗೆ ಮರುಚೈತನ್ಯ

ಯೋಜನೆ ರೂಪಿಸಿರುವ ಕೆನರಾ ವೃತ್ತ ಸಿಸಿಎಫ್ ಡಿ.ಯತೀಶಕುಮಾರ್

ಸಂಧ್ಯಾ ಹೆಗಡೆ
Published 25 ಸೆಪ್ಟೆಂಬರ್ 2019, 19:45 IST
Last Updated 25 ಸೆಪ್ಟೆಂಬರ್ 2019, 19:45 IST
ಶಿರಸಿ ತಾಲ್ಲೂಕಿನ ಖೂರ್ಸೆ ವಿಎಫ್‌ಸಿ ಲಾಭಾಂಶದ ಹಣದಲ್ಲಿ ಅಳವಡಿಸಿರುವ ಕೃಷಿ ಡ್ರೈಯರ್
ಶಿರಸಿ ತಾಲ್ಲೂಕಿನ ಖೂರ್ಸೆ ವಿಎಫ್‌ಸಿ ಲಾಭಾಂಶದ ಹಣದಲ್ಲಿ ಅಳವಡಿಸಿರುವ ಕೃಷಿ ಡ್ರೈಯರ್   

ಶಿರಸಿ: ನಿಷ್ಕ್ರಿಯವಾಗಿರುವ ಉತ್ತರ ಕನ್ನಡದ ಗ್ರಾಮ ಅರಣ್ಯ ಸಮಿತಿಗಳನ್ನು ಕ್ರಿಯಾಶೀಲಗೊಳಿಸಲು ಅರಣ್ಯ ಇಲಾಖೆ ಕೆನರಾ ವೃತ್ತ ಯೋಜನೆ ರೂಪಿಸಿದೆ. ಈ ಸಂಬಂಧ ಜಿಲ್ಲೆಯ ವಿವಿಧೆಡೆ ಸಭೆ ನಡೆಸಲು ಇಲಾಖೆ ಮುಂದಾಗಿದೆ.

ಕಾಡಿನ ಜಿಲ್ಲೆಯ ಅರಣ್ಯ ರಕ್ಷಣೆಯಲ್ಲಿ ಸಕ್ರಿಯವಾಗಿದ್ದ ಗ್ರಾಮ ಅರಣ್ಯ ಸಮಿತಿಗಳು (ವಿಎಫ್‌ಸಿ) ಇತ್ತೀಚಿನ ವರ್ಷಗಳಲ್ಲಿ ಕ್ರಿಯಾಶೀಲತೆ ಕಳೆದುಕೊಂಡಿವೆ. ಬೆರಳೆಣಿಕೆಯ ಸಮಿತಿಗಳು ಮಾತ್ರ ಸ್ವಯಂ ಪ್ರೇರಣೆಯಿಂದ ಕೆಲಸ ಮಾಡುತ್ತಿದ್ದರೂ, ಇಲಾಖೆಯಿಂದ ಸಿಗದ ಸಂಪೂರ್ಣ ಸಹಕಾರದಿಂದ ನಿರೀಕ್ಷಿತ ಗುರಿ ತಲುಪಲು ಸಾಧ್ಯವಾಗದೆ, ಅಸಹಾಯಕ ಸ್ಥಿತಿಯಲ್ಲಿವೆ. ಅರಣ್ಯ ಇಲಾಖೆಯ ಮಹತ್ವಾಕಾಂಕ್ಷಿ ‘ಪಾಲಿಸಿದರೆ ಪಾಲು’ ಯೋಜನೆಯಲ್ಲಿ ಗರಿಷ್ಠ ₹16 ಕೋಟಿಯಷ್ಟು ಮೊತ್ತದ ಪಾಲು ಪಡೆದಿರುವ ಶಿರಸಿ ತಾಲ್ಲೂಕಿನ ಅರಣ್ಯ ಸಮಿತಿಗಳು ಸಹ ಈಗ ತಣ್ಣಗಾಗಿವೆ. ವಿಎಫ್‌ಸಿಗಳಿಗೆ ವಿತರಣೆಯಾಗುತ್ತಿರುವ ಲಾಭಾಂಶದ ಹಣ ಕೂಡ ವರ್ಷದಿಂದ ವರ್ಷಕ್ಕೆ ಇಳಿಮುಖವಾಗಿದೆ.

‘ಈ ಹಿಂದೆ ಅರಣ್ಯ ಇಲಾಖೆಯೇ ಜನರ ಜೊತೆ ಸೇರಿ ವಿಎಫ್‌ಸಿಗಳನ್ನು ರಚನೆ ಮಾಡಿತು. ಸಣ್ಣ ಸಣ್ಣ ಯೋಜನೆಗಳನ್ನು ರೂಪಿಸಿ ಹಳ್ಳಿಗಳಲ್ಲಿ ಹೆಸರು ಮಾಡಿತು. ಆದರೆ, ಕಳೆದ ಐದಾರು ವರ್ಷಗಳ ಈಚೆಗೆ ವಿಎಫ್‌ಸಿಗಳಿಗೆ ಸಿಗಬೇಕಾದ ಹಣವನ್ನೂ ಕೊಡದೆ, ಇಲಾಖೆ ಜನರ ವಿಶ್ವಾಸ ಕಳೆದುಕೊಂಡಿದೆ. ಒಪ್ಪಂದದಂತೆ ಪಾಲು ಕೊಡಲು ಸಹ ವಿನಾಕಾರಣ ವಿಳಂಬ ಮಾಡಿದೆ. ಆದಷ್ಟು ಶೀಘ್ರ ಸಮಿತಿಗಳ ಹಣ ವಿತರಣೆ ಮಾಡುವ ಮೂಲಕ ಇಲಾಖೆ ಜನರ ವಿಶ್ವಾಸ ಗಳಿಸಬೇಕು’ ಎನ್ನುತ್ತಾರೆ ಕಳವೆ ವಿಎಫ್‌ಸಿ ಪ್ರಮುಖ ಶಿವಾನಂದ ಕಳವೆ.

ADVERTISEMENT

‘ಜಿಲ್ಲೆಯಲ್ಲಿ ಒಟ್ಟು 636 ವಿಎಫ್‌ಸಿಗಳಿವೆ. ಅವುಗಳಲ್ಲಿ 200ಕ್ಕೂ ಹೆಚ್ಚು ವಿಎಫ್‌ಸಿಗಳು ಕ್ರಿಯಾಶೀಲವಾಗಿವೆ. ವಿಎಫ್‌ಸಿಗಳ ಉತ್ತಮ ಕಾರ್ಯನಿರ್ವಹಣೆಯಿಂದ ಅರಣ್ಯ ರಕ್ಷಣೆಗೆ ಅನುಕೂಲವಾಗುತ್ತದೆ. ಕಾಡಿನ ರಕ್ಷಣೆಯ ಸಂಪೂರ್ಣ ಹೊಣೆಯನ್ನು ಇಲಾಖೆ ಸಿಬ್ಬಂದಿ ನಿರ್ವಹಿಸಲು ಸಾಧ್ಯವಾಗದು. ಅತಿಕ್ರಮಣ, ಕಳ್ಳತನ ತಡೆಗಟ್ಟಲು ಜನರ ಸಹಕಾರ ತುಂಬ ಅಗತ್ಯ. ಈ ನಿಟ್ಟಿನಲ್ಲಿ ವಿಎಫ್‌ಸಿ ಚಟುವಟಿಕೆ ಚುರುಕುಗೊಳಿಸಲು ಯೋಚಿಸಲಾಗಿದೆ’ ಎನ್ನುತ್ತಾರೆ ಸಿಸಿಎಫ್ ಡಿ.ಯತೀಶಕುಮಾರ್.

‘ಕಾಡಿನ ಬೆಂಕಿ ತಡೆಯುವಲ್ಲಿ ವಿಎಫ್‌ಸಿಗಳ ಪಾತ್ರ ಬಹುದೊಡ್ಡದು. ವಿಎಫ್‌ಸಿ ಆಧಾರಿತ ಚಟುವಟಿಕೆ, ಸಮಿತಿ ಸದಸ್ಯರೊಡನೆ ಉತ್ತಮ ಬಾಂಧವ್ಯ ಇಟ್ಟುಕೊಂಡರೆ, ಅವರು ಖಂಡಿತವಾಗಿ ಅರಣ್ಯ ಉಳಿಸಲು ಕೈಜೋಡಿಸುತ್ತಾರೆ’ ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.