ಕಾರವಾರ: ಅಂಕೋಲಾ ತಾಲ್ಲೂಕಿನ ಶಿರೂರಿನಲ್ಲಿ ಗುಡ್ಡ ಕುಸಿತದಲ್ಲಿ ಕಾಣೆಯಾದ ನಾಟಾ ತುಂಬಿದ್ದ ಲಾರಿಯ ಪತ್ತೆಗೆ ಭಾರತೀಯ ಸೇನೆಯ ಮರಾಠಾ ರೆಜಿಮೆಂಟ್ ತಂಡವು ಸೋಮವಾರದಿಂದ ಕಾರ್ಯಾಚರಣೆ ಆರಂಭಿಸಿದೆ.
ಸೇನಾ ಕಮಾಂಡೆಂಟ್ ಅಭಿಷೇಕ ಕಶ್ಯಪ್ ನೇತೃತ್ವದಲ್ಲಿ 44 ಸಿಬ್ಬಂದಿಯ ತಂಡವು ಬೆಳಗಾವಿಯಿಂದ ಭಾನುವಾರ ಶಿರೂರಿಗೆ ತಲುಪಿತ್ತು. ನಿರಂತರ ಮಳೆ, ಮುಖ್ಯಮಂತ್ರಿ ಭೇಟಿ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಸಾಧ್ಯವಾಗಿರಲಿಲ್ಲ. ಮಣ್ಣಿನ ಮೇಲ್ಮೈನಿಂದ 10 ಮೀಟರ್ ಆಳ ಲೋಹದ ವಸ್ತುಗಳನ್ನು ಶೋಧಿಸಬಲ್ಲ ಸಾಮರ್ಥ್ಯವುಳ್ಳ ಗ್ರೌಂಡ್ ಪೆನೆಟ್ರೇಟಿಂಗ್ ರೆಡಾರ್ (ಜಿಪಿಆರ್) ಬಳಸಿ, ಶೋಧ ಮುಂದುವರೆದಿದೆ.
‘ಗುಡ್ಡದ ಬುಡದಲ್ಲಿನ ಮಣ್ಣಿನ ರಾಶಿಯಲ್ಲಿ ಲಾರಿ ಸಿಲುಕಿರಬಹುದು ಎಂದು ಲಾರಿ ಮಾಲೀಕರು ದೂರಿದ್ದಾರೆ. ಮಣ್ಣು ತೆರವು ವೇಳೆ ಲಾರಿ ಇರುವುದು ದೃಢಪಟ್ಟರೆ, ಅದನ್ನು ಹೊರತೆಗೆಯಲಾಗುವುದು’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
‘ಗುಡ್ಡ ಕುಸಿದು ಏಳು ದಿನಗಳಾದರೂ ನಿರೀಕ್ಷಿತ ವೇಗದಲ್ಲಿ ಕಾರ್ಯಾಚರಣೆ ನಡೆದಿಲ್ಲ. ಅಧಿಕಾರಿಗಳಿಂದ ಸ್ಪಂದನೆ ಸಿಗುತ್ತಿಲ್ಲ. ನಿಧಾನಗತಿಯ ಕಾರ್ಯಾಚರಣೆಯಿಂದ ಲಾರಿ ಚಾಲಕ ಅರ್ಜುನ್ ಜೀವದೊಂದಿಗೆ ಚೆಲ್ಲಾಟ ಆಡಲಾಗುತ್ತಿದೆ’ ಎಂದು ಲಾರಿ ಸಮೇತ ಕಾಣೆಯಾಗಿರುವ ಕೇರಳದ ಚಾಲಕ ಅರ್ಜುನ್ ಅವರ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗಂಗಾವಳಿ ನದಿಗೆ ಭಾರಿ ಪ್ರಮಾಣದಲ್ಲಿ ಮಣ್ಣು ಬಿದ್ದಿದ್ದು ಅದರಡಿ ವಾಹನ ಜನ ಸಿಲುಕಿರಬಹುದು. ಮಂಗಳವಾರದಿಂದ ನದಿಗೆ ಬಿದ್ದ ಮಣ್ಣು ತೆರವುಗೊಳಿಸಿ ಅಲ್ಲಿ ಶೋಧ ನಡೆಸಲಾಗುವುದು.
-ಸತೀಶ ಸೈಲ್ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.