ಮುಂಡಗೋಡ: ವಾಡಿಕೆಗಿಂತ ಹೆಚ್ಚು ಮಳೆಯಾಗಿರುವುದರಿಂದ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಒಳಪಡುವ ಸಣ್ಣ ಕೆರೆ, ದೊಡ್ಡ ಕೆರೆ ಹಾಗೂ ಜಲಾಶಯಗಳಲ್ಲಿ ನೀರಿನ ಸಂಗ್ರಹ ಹೆಚ್ಚಾಗುತ್ತಿದೆ. ಸದ್ಯ ಸುರಿಯುತ್ತಿರುವ ಮಳೆಯ ಪ್ರಮಾಣ ಹೀಗೆ ಮುಂದುವರಿದರೆ, ಇನ್ನೆರೆಡು ವಾರದಲ್ಲಿಯೇ ಎಲ್ಲ ಜಲಾಶಯ, ಕೆರೆಕಟ್ಟೆಗಳು ಕೋಡಿ ಬೀಳಲಿವೆ ಎಂದು ಅಂದಾಜಿಸಲಾಗಿದೆ.
ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಒಳಪಡುವ ದೊಡ್ಡ ಕೆರೆ ಹಾಗೂ ಜಲಾಶಯಗಳಿಗೆ ಇಲ್ಲಿಯವರೆಗೆ ಶೇ 50ಕ್ಕಿಂತ ಹೆಚ್ಚಿನ ಪ್ರಮಾಣದ ನೀರು ಸಂಗ್ರಹವಾಗಿದೆ. ಕೆಲವು ಕೆರೆಗಳು ಭರ್ತಿಯಾಗುವ ಹಂತಕ್ಕೆ ಬಂದಿವೆ. ಸನವಳ್ಳಿ ಹಾಗೂ ಬಾಚಣಕಿ ಜಲಾಶಯಗಳಲ್ಲಿ ಶೇ 90ರಷ್ಟು ನೀರು ಸಂಗ್ರಹಗೊಂಡಿದ್ದು, ಇನ್ನೊಂದು ವಾರದಲ್ಲಿ ಕೋಡಿ ಬೀಳುವ ಸಾಧ್ಯತೆಯಿದೆ. ತಾಲ್ಲೂಕಿನ ಮಳಗಿ ಸನಿಹದ ಧರ್ಮಾ ಜಲಾಶಯ ವಾಡಿಕೆಗಿಂತ ತುಸು ಮುಂಚೆಯೇ ಈಗಾಗಲೇ ಕೋಡಿ ಬಿದ್ದು, ಹೆಚ್ಚುವರಿ ನೀರು ಹಾನಗಲ್ ತಾಲ್ಲೂಕಿನ ಕೆರೆಕಟ್ಟೆಗಳಿಗೆ ಹರಿದು ಹೋಗುತ್ತಿದೆ.
ಚಿಗಳ್ಳಿ ಜಲಾಶಯ, ಅತ್ತಿವೇರಿ ಜಲಾಶಯದಲ್ಲಿ ಸದ್ಯ ಶೇ70ರಷ್ಟು ನೀರು ಸಂಗ್ರಹಗೊಂಡಿದೆ. ದೊಡ್ಡ ಕೆರೆಗಳು ಹಾಗೂ ಪ್ರಮುಖ ಜಲಾಶಯಗಳಲ್ಲಿ ನೀರಿನ ಒಳಹರಿವಿನ ಪ್ರಮಾಣ ಹೆಚ್ಚಾಗಿದ್ದು, ಸತತ ಮಳೆಯಿಂದ ಜಲಮೂಲಗಳು ಭರ್ತಿಯಾಗುವ ಹಂತಕ್ಕೆ ಬಂದಿರುವುದು ರೈತರ ವಲಯದಲ್ಲಿ ಸಂತಸ ಮೂಡಿಸಿದೆ. ಆದರೆ, ನಿರಂತರ ಮಳೆಯಿಂದ ಗೋವಿನಜೋಳ, ಶುಂಠಿ ಬೆಳೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿರುವುದರಿಂದ, ಸ್ವಲ್ಪ ದಿನಕ್ಕಾದರೂ ಮಳೆ ಬಿಡುವು ಬೇಕು ಎಂದು ರೈತರು ಹಂಬಲಿಸುತ್ತಿದ್ದಾರೆ.
‘ಇಲಾಖೆ ವ್ಯಾಪ್ತಿಗೆ ಒಳಪಡುವ ತಾಲ್ಲೂಕಿನ 28 ಕೆರೆಗಳ ಪೈಕಿ ಈಗಾಗಲೇ 8 ಕೆರೆಗಳು ಭರ್ತಿಯಾಗಿವೆ. ಉಳಿದ 20 ಕೆರೆಗಳಲ್ಲಿ ಶೇ50ಕ್ಕಿಂತ ಹೆಚ್ಚು ನೀರಿನ ಪ್ರಮಾಣ ಸಂಗ್ರಹವಾಗಿದೆ. ದೊಡ್ಡ ಜಲಾಶಯಗಳಲ್ಲಿಯೂ ಸಹ ನೀರಿನ ಸಂಗ್ರಹ ಏರುತ್ತಿದೆ’ ಎಂದು ಸಣ್ಣ ನೀರಾವರಿ ಇಲಾಖೆಯ ಎಇಇ ಆರ್.ಎಂ.ಧಪೇದಾರ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.