ADVERTISEMENT

ಶಿರಸಿ: ಕದಂಬೋತ್ಸವಕ್ಕೆ ರಿಕಿ ಕೇಜ್, ಅರ್ಜುನ್ ಜನ್ಯ

ಸರ್ಕಾರದ ಅನುದಾನದಲ್ಲೇ ಉತ್ಸವ ಆಚರಣೆ: ಶಾಸಕ ಹೆಬ್ಬಾರ್

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2020, 13:24 IST
Last Updated 3 ಫೆಬ್ರುವರಿ 2020, 13:24 IST
ಶಿರಸಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಶಿವರಾಮ ಹೆಬ್ಬಾರ್ ಅವರು ಕದಂಬೋತ್ಸವದ ಪೋಸ್ಟರ್ ಅನ್ನು ಬಿಡುಗಡೆಗೊಳಿಸಿದರು
ಶಿರಸಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಶಿವರಾಮ ಹೆಬ್ಬಾರ್ ಅವರು ಕದಂಬೋತ್ಸವದ ಪೋಸ್ಟರ್ ಅನ್ನು ಬಿಡುಗಡೆಗೊಳಿಸಿದರು   

ಶಿರಸಿ: ಕನ್ನಡದ ಪ್ರಥಮ ರಾಜಧಾನಿ ತಾಲ್ಲೂಕಿನ ಬನವಾಸಿಯಲ್ಲಿ ಫೆ.8 ಹಾಗೂ 9ರಂದು ನಡೆಯಲಿರುವ ರಾಜ್ಯ ಮಟ್ಟದ ಕದಂಬೋತ್ಸವದ ಆಹ್ವಾನ ಪತ್ರಿಕೆಯನ್ನು ಶಾಸಕ ಶಿವರಾಮ ಹೆಬ್ಬಾರ್ ಸೋಮವಾರ ಇಲ್ಲಿ ಬಿಡುಗಡೆಗೊಳಿಸಿದರು.

ಕದಂಬೋತ್ಸವ ಆರಂಭವಾಗಿ 25 ವರ್ಷ ಆಗಿರುವ ಪ್ರಯುಕ್ತ ಈ ವರ್ಷದ ಉತ್ಸವವನ್ನು ವಿಶೇಷವಾಗಿ ಆಚರಿಸಲಾಗುವುದು. ವರ್ಷದಿಂದ ವರ್ಷಕ್ಕೆ ಉತ್ಸವ ಹೆಚ್ಚು ಮೆರುಗು ಪಡೆಯುತ್ತಿದೆ. ಹಿಂದಿನ ಎಲ್ಲ ವರ್ಷಗಳಿಗಿಂತ ಈ ಬಾರಿ ಇನ್ನಷ್ಟು ವೈವಿಧ್ಯಗಳನ್ನು ಜೋಡಿಸಲಾಗಿದೆ. ಫೆ.6ರಂದು ಗುಡ್ನಾಪುರದಲ್ಲಿ ಕದಂಬ ಜ್ಯೋತಿಗೆ ಚಾಲನೆ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ, ಫೆ.8ರಂದು ಬೆಳಗಿನಿಂದಲೇ ವಿವಿಧ ಕಾರ್ಯಕ್ರಮಗಳು ಆರಂಭವಾಗಲಿವೆ ಎಂದರು.

ಉತ್ಸವದ ರೂಪರೇಷೆ ಕುರಿತು ಉಪವಿಭಾಗಾಧಿಕಾರಿ ಡಾ.ಈಶ್ವರ ಉಳ್ಳಾಗಡ್ಡಿ ಮಾಹಿತಿ ನೀಡಿ, ‘ಎರಡು ದಿನಗಳ ಕಾರ್ಯಕ್ರಮದಲ್ಲಿ ಮ್ಯಾರಥಾನ್, ಕೃಷಿ ಮೇಳ, ಫಲಪುಷ್ಪ ಪ್ರದರ್ಶನ, ಶ್ವಾನ, ಜಾನುವಾರು ಪ್ರದರ್ಶನ, ರಂಗೋಲಿ, ಅಡುಗೆ ಸ್ಪರ್ಧೆಗಳು, ಸಾಹಿತ್ಯ ನಡಿಗೆ, ಇತಿಹಾಸ ಗೋಷ್ಠಿ, ಯುವ ಗೋಷ್ಠಿ, ಮಾಧ್ಯಮ ಗೋಷ್ಠಿ, ಮಹಿಳಾ ಗೋಷ್ಠಿ, ಕವಿಗೋಷ್ಠಿ ನಡೆಯಲಿದೆ’ ಎಂದರು.

ADVERTISEMENT

8ರಂದು ಮುಂಬೈನ ಎಂಜೆ5 ತಂಡದ ನೃತ್ಯ, ಗಾಯಕ ಅರ್ಜುನ್ ಜನ್ಯ ಹಾಗೂ ತಂಡದ ರಸಮಂಜರಿ, 9ಕ್ಕೆ ಪ್ರವೀಣ ಗೋಡ್ಕಿಂಡಿ ಕೊಳಲು ವಾದನ, ಅಂತರರಾಷ್ಟ್ರೀಯ ಕಲಾವಿದ ರಿಕಿ ಕೇಜ್ ಹಾಗೂ ತಂಡದವರ ಗಾಯನ ಮತ್ತು ನೃತ್ಯ ಈ ಬಾರಿಯ ವಿಶೇಷ ಆಕರ್ಷಣೆಯಾಗಿದೆ ಎಂದು ತಿಳಿಸಿದರು.

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ, ಉಪಾಧ್ಯಕ್ಷ ಚಂದ್ರು ದೇವಾಡಿಗ, ಸದಸ್ಯೆ ರತ್ನಾ ಶೆಟ್ಟಿ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಬಸವರಾಜ ದೊಡ್ಮನಿ, ರೂಪಾ ನಾಯ್ಕ, ಜಿ.ಎನ್.ಹೆಗಡೆ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಗಣೇಶ ಸಣ್ಣಲಿಂಗಣ್ಣನವರ್, ಅಪರ ಜಿಲ್ಲಾಧಿಕಾರಿ ನಾಗರಾಜ ಸಿಂಗ್ರೇರ್ ಇದ್ದರು.

ಅನಿವಾರ್ಯತೆ ಬಂದಿಲ್ಲ

ಮುಜರಾಯಿ ಇಲಾಖೆ ದೇವಾಲಯಗಳಿಂದ ಹಣ ಸಂಗ್ರಹಿಸಿ ಕದಂಬೋತ್ಸವ ಆಚರಿಸಬೇಕಾದ ಅನಿವಾರ್ಯತೆ ಸರ್ಕಾರಕ್ಕೆ ಬಂದಿಲ್ಲ. ಸರ್ಕಾರದ ಅನುದಾನದಿಂದಲೇ ಉತ್ಸವವನ್ನು ಆಚರಿಸಲಾಗುವುದು. ಅಧಿಕಾರಿಗಳು ದೇವಾಲಯಗಳಿಗೆ ಸುತ್ತೋಲೆ ಕಳುಹಿಸಿದ್ದೇ ಆದರೆ, ಆ ರೀತಿಯಲ್ಲಿ ಹಣ ಕೇಳದಂತೆ ಸೂಚನೆ ನೀಡಲಾಗುವುದು ಎಂದು ಶಾಸಕ ಶಿವರಾಮ ಹೆಬ್ಬಾರ್ ಸುದ್ದಿಗಾರರೊಂದಿಗೆ ಮಾತನಾಡುತ್ತ ಹೇಳಿದರು.

ಆಮಂತ್ರಣ ಪತ್ರಿಕೆಗೆ ಆಕ್ಷೇಪ

ರಾಜ್ಯ ಮಟ್ಟದ ಉತ್ಸವ ಆಹ್ವಾನ ಪತ್ರಿಕೆಯನ್ನು ಅತ್ಯಂತ ಸರಳವಾಗಿ ಮಾಡಲಾಗಿದೆ. ಆಹ್ವಾನ ಪತ್ರಿಕೆಯಲ್ಲಿ ಮುಖ್ಯಮಂತ್ರಿ, ಸಚಿವರು, ಜನಪ್ರತಿನಿಧಿಗಳ ಹೆಸರನ್ನು ಮಾತ್ರ ಮುದ್ರಿಸಲಾಗಿದೆ. ಉತ್ಸವಕ್ಕೆ ಐದು ದಿನಗಳ ಮಾತ್ರ ಬಾಕಿಯಿದ್ದರೂ, ಸಾಂಸ್ಕೃತಿಕ ಕಾರ್ಯಕ್ರಮಗಳ ಉಲ್ಲೇಖವಿಲ್ಲ. ಮುಖ್ಯ ಕಲಾವಿದರ ಪೋಸ್ಟರ್‌ಗಳನ್ನು ಮಾತ್ರ ಸಿದ್ಧಪಡಿಸಲಾಗಿದೆ ಎಂದು ಸಭೆಯಲ್ಲಿ ಉಪಸ್ಥಿತರಿದ್ದ ಕೆಲ ಜನಪ್ರತಿನಿಧಿಗಳು ಆಕ್ಷೇಪ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.