ADVERTISEMENT

ನದಿ ತಿರುವು ಯೋಜನೆಗೆ ವಿರೋಧ: ಹೆಬ್ಬಾರ್

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2025, 5:14 IST
Last Updated 5 ನವೆಂಬರ್ 2025, 5:14 IST
ಶಿವರಾಮ ಹೆಬ್ಬಾರ
ಶಿವರಾಮ ಹೆಬ್ಬಾರ   

ಶಿರಸಿ: ‘ಉತ್ತರ ಕನ್ನಡ ಜಿಲ್ಲೆಯಲ್ಲಿ ಅನುಷ್ಠಾನ ಮಾಡಲು ಹೊರಟಿರುವ ಬೇಡ್ತಿ– ವರದಾ, ಅಘನಾಶಿನಿ– ವೇದಾವತಿ ಹಾಗೂ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ನನ್ನ ವಿರೋಧವಿದ್ದು, ಸಮಗ್ರ ಪರಿಶೀಲನೆಗೆ ವಿಜ್ಞಾನಿಗಳ ತಂಡ ರಚನೆ ಮಾಡಲು ವಿನಂತಿಸಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಸ್ಪಂದಿಸಿದ್ದಾರೆ’ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನದಿ ತಿರುವು ಯೋಜನೆ ರಾಜ್ಯ ಸರ್ಕಾರದ್ದಲ್ಲ. ಇದು ಕೇಂದ್ರ ಸರ್ಕಾರದ ಯೋಜನೆ. ಮಾಜಿ ಪ್ರಧಾನಿ ದಿ.ಅಟಲ್ ಬಿಹಾರಿ ವಾಜಪೇಯಿ ಅವಧಿಯಲ್ಲಿ ಪ್ರಸ್ತಾಪಿತ ಯೋಜನೆಯಾಗಿದ್ದು, ಪಕ್ಕದ ಜಿಲ್ಲೆ ಹಾವೇರಿಯ ಸಂಸದ ಬಸವರಾಜ ಬೊಮ್ಮಾಯಿ ಅವರು ನದಿ ತಿರುವು ಯೋಜನೆಗೆ ಬಹಳ ಒತ್ತಾಯ ಮಾಡುತ್ತಿದ್ದಾರೆ. ನನ್ನ ಬಳಿ ಮಾತನಾಡಿದ ವೇಳೆ ಅದಕ್ಕೆ ಒಪ್ಪಿಗೆ ಸೂಚಿಸಿಲ್ಲ. ನಮ್ಮ ಜಿಲ್ಲೆಯ ಸಂಸದರು ಬಸವರಾಜ ಬೊಮ್ಮಾಯಿ ವಿಶ್ವಾಸ ಗಳಿಸುವುದು ಒಳ್ಳೆಯದು ಎಂದು ಹೇಳಿದ್ದೇನೆ. ನದಿ ಜೋಡಣೆ ಯೋಜನೆಗೆ ಹಣದ ಸಂಪನ್ಮೂಲವನ್ನು ಕೇಂದ್ರ ಸರ್ಕಾರ ಒದಗಿಸುತ್ತದೆ. ಡಿಪಿಆರ್ ಮಾಡಿ ವರದಿ ಸಲ್ಲಿಸುವುದು ಮಾತ್ರ ರಾಜ್ಯ ಸರ್ಕಾರದ ಕೆಲಸ. ಬೇಡ್ತಿ– ಅಘನಾಶಿನಿ ನದಿ ತಿರುವು ಯೋಜನೆಗೆ ಯಾವಾಗಲೂ ನನ್ನ ವಿರೋಧವಿದೆ’ ಎಂದರು.

‘ಜಿಲ್ಲೆಯ ಧಾರಣಾ ಸಾಮರ್ಥ್ಯ ಅಧ್ಯಯನ ಆಗಬೇಕು ಎನ್ನುವವರಿಂದಲೇ ಅನೇಕ ಯೋಜನೆಗಳು ಜಾರಿಯಾಗಿದ್ದು, ವರದಾ–ಬೇಡ್ತಿ ನದಿ ಜೋಡಣೆ ಕುರಿತು ಹಿಂದೆಯೂ ವಿರೋಧ ಮಾಡಿದ್ದೇನೆ. ಯಾವುದೇ ಕಾರಣಕ್ಕೂ ನದಿ ಜೋಡಣೆಗೆ ಅವಕಾಶ ನೀಡುವುದಿಲ್ಲ. ಉತ್ತರಕನ್ನಡ ಜಿಲ್ಲೆಯು ಬೃಹತ್ ಯೋಜನೆಗಳನ್ನು ತಡೆದುಕೊಳ್ಳುವ ಶಕ್ತಿ ಹೊಂದಿಲ್ಲ. ವರದಾ–ಬೇಡ್ತಿ, ಅಘನಾಶಿನಿ–ವೇದಾವತಿ ನದಿ ಜೋಡಣೆ ವಿರೋಧಿಸಿ ಮುಖ್ಯಮಂತ್ರಿ ಭೇಟಿ ನಿಯೋಗದಲ್ಲಿ ನಾನು ಭಾಗವಹಿಸಿ, ಜಿಲ್ಲೆಯ ಜನರ ಅಹವಾಲನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತಂದಿದ್ದೇನೆ’ ಎಂದು ತಿಳಿಸಿದರು.

ADVERTISEMENT

‘ಸರ್ಕಾರವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಿಗೆ ನೀಡುತ್ತಿದ್ದ ಸಾಲದ ಮಾರ್ಜಿನ್ ಕಡಿಮೆ (ಶೇ.1.75) ಮಾಡಿರುವುದನ್ನು ಪ್ರಶ್ನಿಸಲಾಗುತ್ತದೆ. ಮುಂದಿನ ವಾರ ಅಪೆಕ್ಸ್ ಬ್ಯಾಂಕ್ ಸಭೆಯಿದ್ದು, ಅಲ್ಲಿ ವಿವಿಧ ಜಿಲ್ಲೆಗಳ ಜಿಲ್ಲಾ ಮಧ್ಯವರ್ತಿ ಬ್ಯಾಂಕ್‍ಗಳ ಸದಸ್ಯರು ಈ ಕುರಿತು ಚರ್ಚಿಸುತ್ತೇವೆ. ಸರ್ಕಾರಕ್ಕೂ ಮನವರಿಕೆ ಮಾಡುವ ಕಾರ್ಯ ಮಾಡುತ್ತೇವೆ’ ಎಂದು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.