ADVERTISEMENT

ದ್ವಿಪಥಕ್ಕೆ 23 ಮೀ. ರಸ್ತೆ ವಿಸ್ತರಣೆ- ಸಭೆಯಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2021, 9:03 IST
Last Updated 6 ಸೆಪ್ಟೆಂಬರ್ 2021, 9:03 IST
ಶಿರಸಿ–ಯಲ್ಲಾಪುರ ರಸ್ತೆಯನ್ನು ನಗರ ವ್ಯಾಪ್ತಿಯಲ್ಲಿ ವಿಸ್ತರಣೆ ಮಾಡುವ ಸಂಬಂಧ ನಡೆದ ಸಭೆಯಲ್ಲಿ ಸಾರ್ವಜನಿಕರೊಬ್ಬರು ಸಮಸ್ಯೆ ಹೇಳಿಕೊಂಡರು
ಶಿರಸಿ–ಯಲ್ಲಾಪುರ ರಸ್ತೆಯನ್ನು ನಗರ ವ್ಯಾಪ್ತಿಯಲ್ಲಿ ವಿಸ್ತರಣೆ ಮಾಡುವ ಸಂಬಂಧ ನಡೆದ ಸಭೆಯಲ್ಲಿ ಸಾರ್ವಜನಿಕರೊಬ್ಬರು ಸಮಸ್ಯೆ ಹೇಳಿಕೊಂಡರು   

ಶಿರಸಿ: ರಾಜ್ಯ ಹೆದ್ದಾರಿ–93ನ್ನು ದ್ವಿಪಥಗೊಳಿಸಲು ನಗರ ವ್ಯಾಪ್ತಿಯಲ್ಲಿ ರಸ್ತೆಯನ್ನು 23 ಮೀಟರ್‌ಗೆ ವಿಸ್ತರಣೆ ಅನಿವಾರ್ಯ ಎಂದು ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರತಿಪಾದಿಸಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಭಾನುವಾರ ನಡೆದ ಸಭೆಯಲ್ಲಿ ಸಾರ್ವಜನಿಕರು ರಸ್ತೆ ವಿಸ್ತರಣೆಯನ್ನು 18 ಮೀ.ಗೆ ಇಳಿಸಲು ಒತ್ತಾಯಿಸಿದರು.

‘ಬೆಳೆಯುತ್ತಿರುವ ನಗರಕ್ಕೆ ವಿಶಾಲ ರಸ್ತೆಯ ಅಗತ್ಯವಿದೆ. ಭವಿಷ್ಯದಲ್ಲಿ ಪುನಃ ವಿಸ್ತರಣೆಗೆ ಆಸ್ಪದ ನೀಡದಂತೆ ಯೋಜನೆ ರೂಪಿಸಲಾಗಿದೆ’ ಎಂದು ಕಾಗೇರಿ ಸಮರ್ಥಿಸಿದರು.

ADVERTISEMENT

‘1 ಮೀ. ಬಫರ್ ಜೋನ್, ತಲಾ 7.5 ಮೀ. ರಸ್ತೆ, 2.5 ಮೀ. ಚರಂಡಿ ಹಾಗೂ 1 ಮೀ. ರಸ್ತೆ ವಿಭಜಕ ನಿರ್ಮಾಣಕ್ಕೆ ಯೋಜಿಸಲಾಗಿದೆ. ಒಟ್ಟಾರೆ ರಸ್ತೆ ಮಧ್ಯದಿಂದ ತಲಾ 11.5 ಮೀ. ವಿಸ್ತರಣೆ ಆಗಲಿದೆ. 42 ಜನ 34 ಗುಂಟೆ ಜಾಗ ಅತಿಕ್ರಮಣ ಮಾಡಿದ್ದು ಆ ಜಾಗ ಪಡೆಯಬೇಕಾಗಬಹುದು’ ಎಂದರು.

ಪಿಡಬ್ಲ್ಯೂಡಿ ಇಲಾಖೆ ಗಡಿಗುರುತು ಸರಿ ಹಾಕಿಲ್ಲ ಎಂದು ಅಶ್ವತ್ಥ ಹೆಗಡೆ ದೂರಿದರು. ‘ರಸ್ತೆ ಮಧ್ಯೆ 1 ಮೀ. ವಿಭಜಕದ ಅಗತ್ಯವಿಲ್ಲ. ಅದರ ಬದಲು ರಸ್ತೆ ಅಕ್ಕಪಕ್ಕದ ಖಾಸಗಿ ಜಾಗ ಉಳಿಸಬಹುದು’ ಎಂದು ಮುಖೇಶ್ ಅಮಿನ್ ಹೇಳಿದರು.

ರಸ್ತೆ ಮಧ್ಯಭಾಗದಿಂದ 11.5 ಮೀ. ಬದಲು ಒಟ್ಟೂ 18 ಮೀ. ವಿಸ್ತರಣೆ ಮಾಡಿ ಎಂದು ಪ್ರಸಾದ ಮೂಡಿ ಒತ್ತಾಯಿಸಿದರು. ಸರ್ಕಾರಿ ಜಾಗ ಇದ್ದ ಕಡೆ ಹೆಚ್ಚು ಜಾಗ ವಶಕ್ಕೆ ಪಡೆದು, ಖಾಸಗಿ ಜಮೀನು ಮಾಲೀಕರಿಗೆ ವಿನಾಯಿತಿ ನೀಡಿ ಎಂದು ಟಿ.ಎ.ಶಾಸ್ತ್ರಿ ಇನ್ನಿತರರು ಮನವಿ ಮಾಡಿದರು.

ನಗರಸಭೆ ಉಪಾಧ್ಯಕ್ಷೆ ವೀಣಾ ಶೆಟ್ಟಿ, ತಹಶೀಲ್ದಾರ್ ಎಂ.ಆರ್. ಕುಲಕರ್ಣಿ, ಡಿವೈಎಸ್ಪಿ ರವಿ ನಾಯ್ಕ, ಪೌರಾಯುಕ್ತ ಕೇಶವ ಚೌಗುಲೆ, ಪಿಡಬ್ಲ್ಯೂಡಿ ಎಕ್ಸಿಕ್ಯೂಟಿವ್ ಎಂಜಿನಿಯರ್ ದೇವಿದಾಸ ಚವ್ಹಾಣ್, ಎಇಇ ಉಮೇಶ ನಾಯ್ಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.