ADVERTISEMENT

ಕೋಟೆಮನೆಯಲ್ಲಿ ‘ಧನುರ್ಮಡ್ಡಿ’ : ರೊಟ್ಟಿ ಊಟದ ಆಚರಣೆ

​ಪ್ರಜಾವಾಣಿ ವಾರ್ತೆ
Published 7 ಜನವರಿ 2025, 13:50 IST
Last Updated 7 ಜನವರಿ 2025, 13:50 IST
`ಧನುರ್ಮಡ್ಡಿ'ಗಾಗಿ ರೊಟ್ಟಿ ತಯಾರಿಯಲ್ಲಿ ನಿರತರಾದ ಮಹಿಳೆಯರು 
`ಧನುರ್ಮಡ್ಡಿ'ಗಾಗಿ ರೊಟ್ಟಿ ತಯಾರಿಯಲ್ಲಿ ನಿರತರಾದ ಮಹಿಳೆಯರು    

ಯಲ್ಲಾಪುರ: ತಾಲ್ಲೂಕಿನ ಉಮ್ಮಚ್ಗಿ ಪಂಚಾಯಿತಿ ವ್ಯಾಪ್ತಿಯ ಕೋಟೆಮನೆಯಲ್ಲಿ ಈಚೆಗೆ ‘ಧನುರ್ಮಡ್ಡಿ’ ಎಂಬ ಸಾಮೂಹಿಕ ರೊಟ್ಟಿ ಊಟದ ಆಚರಣೆ ನಡೆಯಿತು.

ಧನುರ್ಮಾಸದ ಅವಧಿಯಲ್ಲಿ ಗ್ರಾಮದ ಒಂದು ಮನೆಯವರು ಒಂದು ದಿನದಂತೆ ಪ್ರತಿದಿನವೂ ನಡೆಯುತ್ತಿದ್ದ ಬಹಳ ಹಿಂದಿನ ಕಾಲದ ಈ ಆಚರಣೆ ಈಚಿನ ವರ್ಷಗಳಲ್ಲಿ ಮರೆಗೆ ಸರಿಯುತ್ತಿತ್ತು. ಈ ಸಲ ಸಿದ್ಧಿವಿನಾಯಕ ರೈತ ಮಹಿಳಾ ಸ್ವಸಹಾಯ ಸಂಘದ ಸದಸ್ಯರ ಉಸ್ತುವಾರಿಯಲ್ಲಿ ಈ ಆಚರಣೆ ನಡೆಯಿತು.

ಸಂಘದ ಮಹಿಳೆಯರು ಬೆಳಗಿನಿಂದಲೇ ಅಕ್ಕಿರೊಟ್ಟಿಯನ್ನು ಲಟ್ಟಿಸುವ, ಅದನ್ನು ಹಂಚಿನ ಮೇಲಿಟ್ಟು ಬೇಯಿಸುವ ಕಾರ್ಯದಲ್ಲಿ ನಿರತರಾಗಿದ್ದರು. ಅಕ್ಕಿರೊಟ್ಟಿಯೊಂದಿಗೆ ತಯಾರಿಸಿದ ವಿಶೇಷ ಅಡುಗೆಯನ್ನೆಲ್ಲ ದೇವರಿಗೆ ಸಮರ್ಪಿಸಿದ ನಂತರ ಮಧ್ಯಾಹ್ನ ಊರಿನವರೆಲ್ಲ ಒಟ್ಟಾಗಿ ಕುಳಿತು ಊಟ ಮಾಡಿದರು. ಬೆಳಿಗ್ಗೆ ಬೇಗನೆ ಅಕ್ಕಿರೊಟ್ಟಿ ಸಿದ್ಧಪಡಿಸಿ ದೇವರಿಗೆ ಅರ್ಪಿಸಿದ ನಂತರ ಅಂದು ಇಡೀ ದಿನ ಆ ಮನೆಯವರು ಅಕ್ಕಿರೊಟ್ಟಿಯನ್ನಲ್ಲದೆ ಬೇರೆನನ್ನೂ ತಿನ್ನುವುದಿಲ್ಲ.

ADVERTISEMENT

‘ಈಗ ಈ ಭಾಗದಲ್ಲಿ ಬಹುತೇಕ ಜನ ಇದನ್ನು ಆಚರಿಸುತ್ತಿಲ್ಲ. ಈ ಪದ್ಧತಿಯನ್ನು ಉಳಿಸುಕೊಳ್ಳುವ ಉದ್ದೇಶದಿಂದ ನಾವು ಸಂಘದ ಮಹಿಳೆಯರೆಲ್ಲ ಸೇರಿ, ಈ ಧನುರ್ಮಾಸದ ಧನುರ್ಮಡ್ಡಿ ಆಚರಣೆಯನ್ನು ಕೆಲವು ವರ್ಷಗಳಿಂದ ಮಾಡುತ್ತ ಬಂದಿದ್ದೇವೆ. ಆಚರಣೆಯ ದಿನ ಊರಿನವರೆಲ್ಲ ಒಟ್ಟಿಗೆ ಸೇರಿ ಊಟ ಮಾಡುವ ಪದ್ಧತಿ ಅಳವಡಿಸಿಕೊಂಡಿದ್ದೇವೆ. ಇದಕ್ಕೆ ಬೇಕಾದ ಎಲ್ಲ ವಸ್ತುಗಳನ್ನು ನಾವೇ ಖರೀದಿಸಿ ತಂದು ರೊಟ್ಟಿ ಮಾಡುತ್ತೇವೆ' ಎನ್ನುತ್ತಾರೆ ಸಿದ್ಧಿವಿನಾಯಕ ರೈತ ಮಹಿಳಾ ಸ್ವಸಹಾಯ ಸಂಘದ ಅಧ್ಯಕ್ಷೆ ಗೀತಾ ವೆಂಕಟ್ರಮಣ ಭಟ್ಟ, ಸದಸ್ಯರಾದ ಕಾವೇರಿ ರಾಮಚಂದ್ರ ಭಟ್ಟ, ರಂಜನಾ ಗಣಪತಿ ಭಟ್ಟ, ಮಾದೇವಿ ವಿಶ್ವನಾಥ ಭಟ್ಟ, ಸುಜಾತಾ ವೆಂಕಟ್ರಮಣ ಭಟ್ಟ, ಜಾನ್ಹವಿ ಗಜಾನನ ಭಟ್ಟ, ಕಮಲಾ ಜಿ. ಭಟ್ಟ, ಸಾಧನಾ ಬಾಲಚಂದ್ರ ಭಟ್ಟ, ರಂಜನಾ ಗಣಪತಿ ಭಟ್ಟ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.