ಎನ್.ಎಸ್.ಹೆಗಡೆ
ಶಿರಸಿ: ‘ಈಚೆಗೆ ಪತ್ರಕರ್ತೆಯೊಬ್ಬರ ಪ್ರಶ್ನೆಗೆ ಉತ್ತರಿಸುವಾಗ ಬೇಜವಾಬ್ಧಾರಿಯಿಂದ ಹಾಗೂ ಕೇವಲವಾಗಿ ಮಾತನಾಡಿರುವ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ, ಶಾಸಕ ಆರ್.ವಿ.ದೇಶಪಾಂಡೆ ಅವರು ನಾಡಿನ ಮಹಿಳೆಯರಿಗೆ ಅವಮಾನ ಮಾಡಿದ್ದಾರೆ’ ಎಂದು ಬಿಜೆಪಿ ಉತ್ತರಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಎಸ್.ಹೆಗಡೆ ಕರ್ಕಿ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಜನಪರ ಕಾಳಜಿಯಿಂದ ಆಸ್ಪತ್ರೆ ಬಗ್ಗೆ ಬೇಡಿಕೆ ಇಟ್ಟಾಗ, ಹೆರಿಗೆಯ ಕುರಿತು ದೇಶಪಾಂಡೆ ಅವರು ಆಡಿರುವ ಮಾತು ಕೀಳು ಅಭಿರುಚಿಯದ್ದು. ಹಿರಿಯ ಮುಖಂಡರಾಗಿ, ಸುದೀರ್ಘ ಅವಧಿಗೆ ಅಧಿಕಾರ ನಡೆಸಿದ ಅವರು ಹಾಗೂ ಕಾಂಗ್ರೆಸ್, ಜಿಲ್ಲೆಯ ಜನರ ಆರೋಗ್ಯ ವಿಚಾರದಲ್ಲಿ ರಾಜಕೀಯ ಮಾಡದೇ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಲು ಪ್ರಾಮಾಣಿಕ ಪ್ರಯತ್ನ ಮಾಡಬೇಕಿತ್ತು’ ಎಂದು ತಿಳಿಸಿದ್ದಾರೆ.
‘ಕಾಂಗ್ರೆಸ್ ಮಹಿಳೆಯರ ಬಗ್ಗೆ ಮತ್ತು ನಾಡಿನ ಅಬಿವೃದ್ಧಿ ಬಗ್ಗೆ ಯಾವ ರೀತಿಯ ದೃಷ್ಟಿಕೋನ ಹೊಂದಿದೆ ಎಂಬುದು ಈ ಬೇಜವಾಬ್ದಾರಿಯ ಹೇಳಿಕೆಯಿಂದ ಸ್ಪಷ್ಟವಾಗಿದೆ. ಬಿಜೆಪಿ ಸರ್ಕಾರ ಇದ್ದಾಗ ಆಸ್ಪತ್ರೆ ನಿರ್ಮಾಣಕ್ಕೆ ಜಾಗ ಗುರುತು ಮಾಡುವ ಕೆಲಸವಾಗಿತ್ತು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಹಿನ್ನಡೆಯಾಗಿದೆ. ಹಲವು ಬಾರಿ ಸಚಿವರಾಗಿ, ಜಿಲ್ಲೆಯ ಉಸ್ತುವಾರಿ ಮಂತ್ರಿಯಾಗಿ, ಪ್ರಸ್ತುತ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾಗಿರುವ ದೇಶಪಾಂಡೆ ಅವರಿಗೆ ಇಂಥ ಮಾತು ಶೋಭೆ ತರುವುದಿಲ್ಲ’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.