
ಜೊಯಿಡಾ: ತಾಲ್ಲೂಕಿನ ಆಸ್ಪತ್ರೆ ಹಾಗೂ ಜನರ ಕುರಿತು ನಿಮಗೆ ಕಾಳಜಿ ಇಲ್ಲ, ನಿಮಗೆ ಇಲ್ಲೆ ಕೆಲಸ ಮಾಡುವ ಮನಸ್ಸಿಲ್ಲದಿದ್ದರೆ ಹೇಳಿ, ನಿಮ್ಮ ಮನಸ್ಸಿಗೆ ಬಂದಂತೆ ಕೆಲಸ ಮಾಡಬೇಡಿ ಎಂದು ಶಾಸಕ ಆರ್.ವಿ.ದೇಶಪಾಂಡೆ ಅವರು ತಾಲ್ಲೂಕು ವೈದ್ಯಾಧಿಕಾರಿ ಡಾ.ಸುಜೇತಾ ಉಕ್ಕಲಿ ಅವರನ್ನು ತರಟಾಗೆ ತೆಗೆದುಕೊಂಡರು.
ಜೊಯಿಡಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ನಡೆದ ತಾಲ್ಲೂಕು ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಾರ್ವಜನಿಕರು ಮಾಡಿದ ಆರೋಪದ ಮೇಲೆ ತಾಲ್ಲೂಕು ವೈದ್ಯಾಧಿಕಾರಿಗಳ ಕಾರ್ಯ ವೈಖರಿ ಕುರಿತು ಅಸಮಾಧಾನ ವ್ಯಕ್ತಪಡಿಸಿದರು.
‘ತಾಲ್ಲೂಕಾ ವೈದ್ಯಾಧಿಕಾರಿಗಳು ತಾಲ್ಲೂಕಿನ ಯಾವ ಆಸ್ಪತ್ರೆಗೂ ಭೇಟಿ ನೀಡುತ್ತಿಲ್ಲ, ಎಲ್ಲ ಆಸ್ಪತ್ರೆಗಳು ಅವ್ಯವಸ್ಥೆಗಳಿಂದ ಕೂಡಿವೆ, ಜನರ ಆರೋಗ್ಯ ಮತ್ತು ತಾಲ್ಲೂಕಿನ ಆಸ್ಪತ್ರೆಗಳ ಕುರಿತು ನಿಮಗೆ ಕಾಳಜಿ ಇಲ್ಲ. ಎಲ್ಲಿ ಇರುತ್ತೀರಿ, ಏನು ಮಾಡುತ್ತೀರಿ ಎಂಬುದು ಯಾರಿಗೂ ಗೊತ್ತಿಲ್ಲ ಎಂದು ಪ್ರಶ್ನಿಸಿದರು.
ತಾಲ್ಲೂಕಿನ ಗುಂದ ಸೇರಿದಂತೆ ವಿವಿಧ ಆಸ್ಪತ್ರೆಗಳಿಗೆ ಹೊಸದಾಗಿ ವೈದ್ಯರ ನೇಮಕ ಆಗಿದ್ದು ಸಾರಿಗೆ ಸಂಪರ್ಕದ ವ್ಯವಸ್ಥೆ ಇಲ್ಲದಿರುವುದರಿಂದ ವೈದ್ಯರು ಆಸ್ಪತ್ರೆಗಳಿಗೆ ಹೋಗುತ್ತಿಲ್ಲ ಎಂದು ತಾಲ್ಲೂಕು ವೈದ್ಯಾಧಿಕಾರಿ ಮಾಹಿತಿ ನೀಡುತ್ತಿದ್ದಂತೆ ಪ್ರತಿಕ್ರಿಯಿಸಿದ ಶಾಸಕರು, ಕೆಲಸ ಮಾಡುವ ಮನಸ್ಸಿದ್ದರೆ ಕೆಲಸ ಮಾಡಲಿ ಇಲ್ಲದಿದ್ದರೆ ವೈದ್ಯರು ಮನೆಗೆ ಹೋಗಲಿ ಎಂದರು.
ಪೊಟೋಳಿ - ಗುಂದ ರಸ್ತೆಯಲ್ಲಿ ಸೇತುವೆ ದುರಸ್ತಿ ಇರುವುದರಿಂದ ಜೊಯಿಡಾ ಮೂಲಕ ಸಂಚರಿಸುವ ಶಿರಸಿ - ಉಳವಿ ಬಸ್ ಬೆಳಿಗ್ಗೆ ಯರಮುಖಕ್ಕೆ ಬಿಡಬೇಕು, ಸಂಜೆ ತಮ್ಮಣ್ಣಗಿ ಬಿಡುವ ಬಸ್ಸನ್ನು ಮಧ್ಯಾಹ್ನ ಬಿಡಬೇಕು ಜೊತೆಗೆ ಕ್ಯಾಸಲ್ ರಾಕ್ ಹೊಸದಾಗಿ ಸೂಕ್ತ ಸಮಯಕ್ಕೆ ಬಸ್ ಬಿಡುವಂತೆ ಸಾರ್ವಜನಿಕರ ಆಗ್ರಹದ ಮೇರೆಗೆ ಶಾಸಕರು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಾಲ್ಲೂಕಿನ ವಿವಿಧೆಡೆ ಹಾಳಾದ ರಸ್ತೆಯನ್ನು ಶೀಘ್ರ ದುರಸ್ತಿ ಮಾಡುವಂತೆ, ತಾಲ್ಲೂಕಿನಲ್ಲಿ ಮಂಜೂರಾಗಿರುವ ಅಂಗನವಾಡಿ ಮತ್ತು ಶಾಲೆಗಳ ಕಟ್ಟಡ ನಿರ್ಮಾಣ ಕಾಮಗಾರಿಗಳನ್ನು ತ್ವರಿತವಾಗಿ ಮುಗಿಸಬೇಕು ಎಂದು ಶಾಸಕರು ಆಯಾ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.
ಜೊಯಿಡಾದಲ್ಲಿ ಕುಡಿಯುವ ನೀರಿನ ಕಾಮಗಾರಿ ಆರಂಭವಾಗಿ ಹಲವು ತಿಂಗಳು ಕಳೆದರೂ ಮುಗಿಯುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಸ್ಥಳೀಯ ವಿನಯ ದೇಸಾಯಿ ಹೇಳಿದರು.
ಸ್ಥಳೀಯ ಅರಣ್ಯ ಇಲಾಖೆಯ ಸಿಬ್ಬಂದಿ ಹಲವು ರೀತಿಯಲ್ಲಿ ಕಿರುಕುಳ ನೀಡುತ್ತಿದ್ದಾರೆ, ಕರಡಿಗಳು ಸೇರಿದಂತೆ ಹಲವು ಪ್ರಾಣಿಗಳನ್ನು ಬೇರೆ ಕಡೆಯಿಂದ ತಂದು ಇಲ್ಲಿಗೆ ಬಿಟ್ಟಿದ್ದಾರೆ ಎಂದು ಸುಭಾಷ ಗಾವಡಾ ಆರೋಪಿಸಿದರು. ಈ ಬಗ್ಗೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಗಮನ ಹರಿಸುವಂತೆ ಶಾಸಕರು ಸೂಚಿಸಿದರು.
ಶಿಕ್ಷಣ, ತೋಟಗಾರಿಕೆ, ಕೃಷಿ, ಸಮಾಜ ಕಲ್ಯಾಣ, ಪಂಚಾಯತ್ ರಾಜ್, ಲೋಕೋಪಯೋಗಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು.
ತಹಶೀಲ್ದಾರ್ ಮಂಜುನಾಥ ಮುನ್ನೊಳ್ಳಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಭಾರತಿ ಎನ್, ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಪುರುಷೋತ್ತಮ ಕಾಮತ, ಉಳವಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ ಮೊಕಾಶಿ, ಸ್ಥಳೀಯ ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು, ಸಾರ್ವಜನಿಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.