ಜೊಯಿಡಾ: ‘ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ತಾಲ್ಲೂಕಿನ ಬಡವರ ಕೆಲಸಗಳು ಆಗುತ್ತಿಲ್ಲ, ಜೊಯಿಡಾ ತಾಲ್ಲೂಕಿನಲ್ಲಿ ಕೆಲಸ ಮಾಡಲು ಆಸಕ್ತಿ ಇಲ್ಲವಾದಲ್ಲಿ ಬೇರೆ ಕಡೆ ವರ್ಗಾವಣೆ ಪಡೆದು ಹೋಗಿ. ಇದಕ್ಕೆ ನಾನು ಸಹಾಯ ಮಾಡುತ್ತೇನೆ’ ಎಂದು ಶಾಸಕ ಆರ್.ವಿ.ದೇಶಪಾಂಡೆ ಹೇಳಿದರು.
ಇಲ್ಲಿ ಶುಕ್ರವಾರ ನಡೆದ ಮಳೆ -ಬೆಳೆ ಪರಿಸ್ಥಿತಿ ಬಗ್ಗೆ ಪರಿಶೀಲನಾ ಸಭೆ ಮತ್ತು ಸಾವಯವ ತಾಲ್ಲೂಕಿನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಕರ್ತವ್ಯ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ಕಾರ್ಯ ವೈಖರಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
‘ಇಲ್ಲಿ ಹೇಳುವರು, ಕೇಳುವರು ಯಾರು ಇಲ್ಲ ಎಂಬ ಭಾವನೆಯಲ್ಲಿ ಅಧಿಕಾರಿಗಳು ಇದ್ದಾರೆ. ಯಾವುದೇ ಸರ್ಕಾರಿ ಕೆಲಸ ಕಾರ್ಯಗಳು ನಿಗದಿತ ಸಮಯದಲ್ಲಿ ಆಗುತ್ತಿಲ್ಲ, ಗುತ್ತಿಗೆ ಕೆಲಸದಲ್ಲಿ ಜನಪ್ರತಿನಿಧಿಗಳು ತೋರಿಸುವ ಆಸಕ್ತಿ ಬಡವರ ಮತ್ತು ಅಭಿವೃದ್ಧಿ ಕೆಲಸಗಳಿಗೆ ತೋರಿಸುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಯಾವುದೇ ಸರ್ಕಾರಿ ಯೋಜನೆ ಬಂದರೆ ಜನರಿಗೆ ತಿಳಿಸಿ, ಅಧಿಕಾರಿಗಳು ತಮ್ಮ ಮನಸ್ಸಿಗೆ ಬಂದಂತೆ ಸರ್ಕಾರದ ಅನುದಾನವನ್ನು ಬಳಸಿಕೊಳ್ಳಬೇಡಿ. ಸರ್ಕಾರದ ಅಭಿವೃದ್ಧಿ ಕಾರ್ಯಗಳ ಪ್ರಚಾರ ಆಗಬೇಕು ಜೊತೆಗೆ ಜನರಿಗೆ ಅನುಕೂಲ ಆಗಬೇಕು’ ಎಂದರು.
ತಾಲ್ಲೂಕಿನಲ್ಲಿ ಆಶ್ರಯ ಮನೆ ಹಂಚಿಕೆಗೆ ಸಂಬಂಧಿಸಿದಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಲ್ಲಿ ಸೂಕ್ತ ಮಾಹಿತಿ ಕೊರತೆ ಇರುವುದರಿಂದ ಶಾಸಕರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಮಳೆ ಮಾಪನ ಕೇಂದ್ರಗಳ ಬಗ್ಗೆ ಮಾಹಿತಿ ಪಡೆದ ಅವರು, ಗುಂದ-ಉಳವಿ ರಸ್ತೆಯ ಕೈಟೆನಾಳ ಸೇತುವೆ, ಜೊಯಿಡಾ ಸಿದ್ದೇಶ್ವರ ಕೆರೆ ಅಭಿವೃದ್ಧಿ ಮತ್ತು ಜೊಯಿಡಾಗೆ ನೀರು ಕೊಡಲು ಆದ ಸಮಸ್ಯೆ ಬಗ್ಗೆ ತುರ್ತು ಕ್ರಮ ಕೈಗೊಳ್ಳುವಂತೆ ಹಾಗೂ ಸಾವಯವ ತಾಲ್ಲೂಕನ್ನಾಗಿ ಪರಿವರ್ತಿಸುವ ಕಾರ್ಯಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡುವಂತೆ ಹೇಳಿದರು.
ಈ ಪೂರ್ವದಲ್ಲಿ ಅವರು ಉಳವಿಯಲ್ಲಿ ಅಭಿವೃದ್ಧಿ ಆಕಾಂಕ್ಷಿ ತಾಲ್ಲೂಕು ಕಾರ್ಯಕ್ರಮದಡಿಯಲ್ಲಿ ತಾಲ್ಲೂಕು ಪಂಚಾಯಿತಿಯ ‘ಒಂದು ಮರ ತಾಯಿಯ ಹೆಸರಲ್ಲಿ’ ಎಂಬ ಕಾರ್ಯಕ್ರಮಕ್ಕೆ ಗಿಡ ನೆಡುವ ಮೂಲಕ ಚಾಲನೆ ನೀಡಿದರು.
ಉಳವಿ ಚನ್ನಬಸವೇಶ್ವರ ಟ್ರಸ್ಟ್ ವತಿಯಿಂದ ಇಲ್ಲಿ ನಿರ್ಮಿಸಲಾಗುತ್ತಿರುವ ಹಿರಿಯ ಪ್ರಾಥಮಿಕ ಶಾಲೆಯ ಹೆಚ್ಚುವರಿ ಕೊಠಡಿಗಳ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದರು.
ಉಳವಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ ಮೊಕಾಶಿ, ತಹಸೀಲ್ದಾರ್ ಮಂಜುನಾಥ ಮುನ್ನೊಳ್ಳಿ, ತಾಪಂ ಕಾರ್ಯನಿರ್ವಾಹಣಾಧಿಕಾರಿ ಭಾರತಿ ಎನ್, ಟ್ರಸ್ಟ್ ಕಮಿಟಿ ಅಧ್ಯಕ್ಷ ಸಂಜಯ ಕಿತ್ತೂರ , ವಿವಿಧ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ಸ್ಥಳೀಯ ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
ಸರ್ಕಾರಿ ಜಾಗ ಅತಿಕ್ರಮಣ ಆಗದಂತೆ ನೋಡಿಕೊಳ್ಳಬೇಕು ಮಾಡಿದ್ದಲ್ಲಿ ತೆರವುಗೊಳಿಸಿಬೇಕು. ಅಧಿಕಾರಿಗಳು ಅಭಿವೃದ್ಧಿ ಕೆಲಸ ಮಾಡುವ ಮನಸ್ಸಿದ್ದರೆ ಮಾತ್ರ ಇಲ್ಲಿರಬೇಕು. ದಿನ ಕಳೆಯಲು ಅಲ್ಲ–ಆರ್.ವಿ.ದೇಶಪಾಂಡೆ, ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.