ADVERTISEMENT

ಸ್ವರ್ಣವಲ್ಲಿಯಲ್ಲಿ ಸಹಸ್ರ ಚಂಡಿಯಾಗ ಸಂಪನ್ನ

ಮಹಾರುದ್ರ ಹವನ ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2020, 13:48 IST
Last Updated 23 ಏಪ್ರಿಲ್ 2020, 13:48 IST
ಶಿರಸಿ ತಾಲ್ಲೂಕಿನ ಸ್ವರ್ಣವಲ್ಲಿ ಮಠದಲ್ಲಿ ಸಹಸ್ರ ಚಂಡಿಯಾಗ ಸಂಪನ್ನಗೊಂಡಿತು
ಶಿರಸಿ ತಾಲ್ಲೂಕಿನ ಸ್ವರ್ಣವಲ್ಲಿ ಮಠದಲ್ಲಿ ಸಹಸ್ರ ಚಂಡಿಯಾಗ ಸಂಪನ್ನಗೊಂಡಿತು   

ಶಿರಸಿ: ಕೊರೊನಾ ವೈರಸ್‌ ಸೋಂಕು ನಿವಾರಣೆಯಾಗಿ ಸಮಾಜ ಸಹಜ ಸ್ಥಿತಿಗೆ ಬರಲೆಂಬ ಉದ್ದೇಶದಿಂದ ತಾಲ್ಲೂಕಿನ ಸೋಂದಾ ಸ್ವರ್ಣವಲ್ಲಿ ಮಠದಲ್ಲಿ ಮಾರ್ಚ್ 25ರಿಂದ ಪ್ರಾರಂಭಿಸಿದ್ದ ಸಹಸ್ರ ಚಂಡಿಯಾಗವು ಬುಧವಾರ ಸಂಪನ್ನಗೊಂಡಿತು.

ಮಠಾಧೀಶ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಅವರು ಚಂಡಿಯಾಗದ ಪೂರ್ಣಾಹುತಿಯ ಸಾನ್ನಿಧ್ಯ ವಹಿಸಿದ್ದರು. ‘ಕೊರೊನಾ ವೈರಸ್‌ ಸಮಸ್ಯೆ ಆರಂಭವಾದಾಗಿನಿಂದ ಸರ್ಕಾರಗಳು ಕಟ್ಟುನಿಟ್ಟಾಗಿ ಲಾಕ್‌ಡೌನ್ ನಿಯಮ ಜಾರಿಗೆ ತಂದವು. ಸಮಾಜಕ್ಕೆ ಬಂದಿರುವ ಈ ಆಪತ್ತು ನಿವಾರಣೆಯಾಗಲೆಂದು ಮಠದಲ್ಲಿ ಅನೇಕ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಲಾಕ್‌ಡೌನ್ ನಿಯಮ ಪಾಲಿಸಿದ್ದರಿಂದ, ಕೆಲವೇ ವೈದಿಕರ ಉಪಸ್ಥಿತಿಯಲ್ಲಿ ಚೈತ್ರ ಮಾಸ ಪೂರ್ತಿ ಯಾಗ ನಡೆಯಿತು. ದಿನವೂ ಮೂರು ಅಥವಾ ನಾಲ್ಕು ಹವನಗಳು ನಡೆದವು’ ಎಂದು ಶ್ರೀಗಳು ತಿಳಿಸಿದ್ದಾರೆ.

‘ಎಲ್ಲರೂ ಆರೋಗ್ಯವಂತರು, ಆಯುಷ್ಯವಂತರಾಗಲೆಂಬ ಸದಾಶಯದಿಂದ ದೊಡ್ಡ ಪ್ರಮಾಣದಲ್ಲಿ ಮಹಾಮೃತ್ಯುಂಜಯ ಹವನ, ಧನ್ವಂತರಿ ಹವನ, ಸಹಸ್ರ ವಿಷ್ಣು ಸಹಸ್ರನಾಮ ಪಾರಾಯಣ, ಮೃತ್ಯುಭಯ ನಿವಾರಣೆಯ ಉದ್ದೇಶದಿಂದ ವಿಧಿಸಿದ ಜನಮಾರಶಾಂತಿ, ಮಹಾರುದ್ರ ಪಾರಾಯಣ ಮತ್ತು ಅಭಿಷೇಕ, 32ಸಾವಿರ ಲಕ್ಷ್ಮೀನೃಸಿಂಹ ಜಪ ಮತ್ತು ಹವನ, ಲಕ್ಷ್ಮೀನೃಸಿಂಹ ದೇವರಿಗೆ 10ಸಾವಿರ ತುಳಸಿ ಅರ್ಚನೆ ಮೊದಲಾದ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು. ದೇವರಲ್ಲಿ ಪೂಜೆ, ಪ್ರಾರ್ಥನೆ, ಹವನ ಮಾಡುವುದರಿಂದ ಖಂಡಿತ ಒಳ್ಳೆಯದಾಗುತ್ತದೆ’ ಎಂದು ಶ್ರೀಗಳು ಹೇಳಿದ್ದಾರೆ. ಮಠದ ವ್ಯವಸ್ಥಾಪಕರಾದ ಎಸ್.ಎನ.ಗಾಂವಕರ, ಆಡಳಿತ ಮಂಡಳಿ ಅಧ್ಯಕ್ಷ ವಿ.ಎನ್.ಹೆಗಡೆ ಇದ್ದರು.

ADVERTISEMENT

ಏ.24ರಂದು ಮಹಾರುದ್ರ ಹವನ, ಏ.25ರಂದು ಧನ್ವಂತರಿ ಹೋಮವನ್ನು ನಡೆಸಲು ಸಂಕಲ್ಪಿಸಲಾಗಿದೆ. ಏ.25ರಿಂದ ಮೇ 4ರವರೆಗೆ ಲಕ್ಷ್ಮೀನೃಸಿಂಹ ಮೂಲಮಂತ್ರ ಜಪ ಮತ್ತು ಹವನ ಪ್ರತಿದಿನ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.