ADVERTISEMENT

ಅಂಕೋಲಾ: ಆಕರ್ಷಕ ಸಾಲುಮರದ ತಿಮ್ಮಕ್ಕ ಉದ್ಯಾನ

ಮನಸೆಳೆಯುವ ಉದ್ಯಾನ: ಒಂದೇ ವರ್ಷದಲ್ಲಿ ನಿರ್ಮಾಣ, ಸಚಿವರಿಂದ ಉದ್ಘಾಟನೆ ಇಂದು

ಮಾರುತಿ ಹರಿಕಂತ್ರ
Published 30 ನವೆಂಬರ್ 2020, 2:22 IST
Last Updated 30 ನವೆಂಬರ್ 2020, 2:22 IST
ಸಾಲುಮರದ ತಿಮ್ಮಕ್ಕ ಉದ್ಯಾನವನದ ಒಳನೋಟ
ಸಾಲುಮರದ ತಿಮ್ಮಕ್ಕ ಉದ್ಯಾನವನದ ಒಳನೋಟ   

ಅಂಕೋಲಾ: ತಾಲ್ಲೂಕಿನಲ್ಲಿ ಉತ್ತಮ ಉದ್ಯಾನವೊಂದು ಇರಬೇಕು ಎಂಬ ಈ ಭಾಗದ ಜನರ ಕನಸು ಈಗ ಈಡೇರುತ್ತಿದೆ. ಅರಣ್ಯ ಇಲಾಖೆಯ ವಿಶೇಷ ಮುತುವರ್ಜಿ ತಾಲ್ಲೂಕಿನ ಹುಲಿದೇವರವಾಡ ಸಮೀಪದ ಶೇಡಗೇರಿಯಲ್ಲಿ ಆಧುನಿಕ ರೀತಿಯಲ್ಲಿ ಟ್ರೀ ಪಾರ್ಕ್ ನಿರ್ಮಾಣವಾಗಿದ್ದು ಇಂದು ಉದ್ಘಾಟನೆಗೊಳ್ಳುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಉದ್ಘಾಟನೆ ನೆರವೇರಿಸಲಿದ್ದಾರೆ.

ಕಾರವಾರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಸಂತರೆಡ್ಡಿ ಕೆ.ವಿ. ಅವರ ಕಾಳಜಿಯಿಂದ ಈ ಉದ್ಯಾನ ನಿರ್ಮಾಣವಾಗಿದೆ. ಅರಣ್ಯ ಪ್ರದೇಶದ ಸುಮಾರು 15 ಹೆಕ್ಟೇರ್ ಪ್ರದೇಶವನ್ನು ಪಾರ್ಕ್ ನಿರ್ಮಾಣಕ್ಕೆ ಕಾಯ್ದಿರಿಸಲಾಗಿದ್ದು. ಪ್ರಸ್ತುತ 10 ಹೆಕ್ಟೇರ್ ಪ್ರದೇಶವನ್ನು ಬಳಸಲಾಗಿದೆ. ಪರಿಸರ ಪ್ರೇಮಿ ಸಾಲುಮರದ ತಿಮ್ಮಕ್ಕ ಅವರ ಗೌರವಾರ್ಥ ಉದ್ಯಾನವನಕ್ಕೆ ಸಾಲುಮರದ ತಿಮ್ಮಕ್ಕ ಉದ್ಯಾನ ಎಂದು ಹೆಸರಿಡಲಾಗಿದೆ.

ರಾಜ್ಯದ ಮಹಾನಗರಗಳಲ್ಲಿ ನಿರ್ಮಾಣವಾದ ರೀತಿಯಲ್ಲಿ ಈ ಪಾರ್ಕ್ ಅನ್ನು ವ್ಯವಸ್ಥಿತವಾಗಿ ನಿರ್ಮಿಸಲಾಗಿದೆ. ಪಂಚವಟಿವನ, ಕದಂಬವನ, ಶ್ರೀಗಂಧವನ, ಅಂಕೋಲಾ ವೃಕ್ಷದ ಅಂಕೋಲಾ ವನವನ್ನು ಇಲ್ಲಿ ಕಾಣಬಹುದು. ಚಿಕ್ಕಮಕ್ಕಳಿಗಾಗಿ ಮಕ್ಕಳ ಪಾರ್ಕ್ ಸಿದ್ಧಪಡಿಸಲಾಗಿದೆ. ಮಕ್ಕಳು ವಿವಿಧ ರೀತಿಯ ಮನರಂಜನೆಯ ಆಟಗಳನ್ನು ಇಲ್ಲಿ ಆಡಬಹುದು. ತೆರೆದ ರಂಗ ಮಂಟಪವನ್ನು ವಿಶೇಷ ರೀತಿಯಲ್ಲಿ ರೂಪಿಸಲಾಗಿದೆ.

ADVERTISEMENT

ಪಕ್ಷಿಗಳನ್ನು ಆಕರ್ಷಿಸಲು ವಿವಿಧ ಹಣ್ಣಿನ ಗಿಡಗಳನ್ನು ಹಾಗೂ ಆಶ್ರಯಿಸಲು ಗೂಡುಗಳನ್ನು ನಿರ್ಮಿಸಲಾಗಿದೆ. ಉದ್ಯಾನವನದ ಎಡಬದಿಯಲ್ಲಿ ಚಿಟ್ಟೆ ಪಾರ್ಕ್ ಸಹ ಇದೆ. ಬಹು ಅಪರೂಪದ ಹಾಗೂ ಔಷಧೀಯ ಗಿಡಗಳನ್ನು ಬೆಳೆಸಲಾಗಿದೆ. ತೆರೆದ ಜಿಮ್ ಸೌಲಭ್ಯ , ಅಡ್ವೆಂಚರ್ ಪಾರ್ಕ್ ಹಾಗೂ ಮೂರು ಪ್ಯಾರಗೋಲ ಇದ್ದು ಯುವಕರನ್ನು ಬಹುವಾಗಿ ಆಕರ್ಷಿಸಲಿದೆ. ಉದ್ಯಾನದ ಅತ್ಯಂತ ಎತ್ತರದ ಪ್ರದೇಶದಲ್ಲಿ ವಾಚ್ ಟವರ್ ನಿರ್ಮಿಸಲಾಗಿದೆ. ಇಲ್ಲಿಂದ ತಾಲ್ಲೂಕಿನ ಹೊರವಲಯವನ್ನು ಸಹ ವೀಕ್ಷಿಸಬಹುದಾಗಿದೆ. ಕ್ಯಾಂಟೀನ್ ವ್ಯವಸ್ಥೆ, ಕುಡಿಯುವ ನೀರು, ಶೌಚಾಲಯ, ಪಾರ್ಕಿಂಗ್ ಸೌಲಭ್ಯ ಸೇರಿದಂತೆ ಎಲ್ಲಾ ರೀತಿಯ ಮೂಲಭೂತ ಸೌಲಭ್ಯಗಳು ಇವೆ.

ಕೇವಲ ಒಂದು ವರ್ಷದ ಅವಧಿಯಲ್ಲಿ ಈ ಪಾರ್ಕ್ ನಿರ್ಮಾಣವಾಗಿದೆ. ದಟ್ಟ ಅರಣ್ಯ ಮತ್ತು ಗುಡ್ಡಗಾಡು
ಪ್ರದೇಶವಾದ್ದರಿಂದ ಇಲ್ಲಿ ಪಾರ್ಕ್ ನಿರ್ಮಾಣ ಅಸಾಧ್ಯ ಎನ್ನುವುದು ಆರಂಭದಲ್ಲಿ ಹಲವರ ಅಭಿಪ್ರಾಯವಾಗಿತ್ತು. ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ನಿರಂತರ ಶ್ರಮ ವಹಿಸಿ ಆ ಅಭಿಪ್ರಾಯವನ್ನು ಸುಳ್ಳಾಗಿಸಿದ್ದಾರೆ.

ಹಿರಿಯ ಅರಣ್ಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸಿಬ್ಬಂದಿ ಶಿಸ್ತಿನಿಂದ ಕಾರ್ಯನಿರ್ವಹಿಸಿದ್ದು, ತಾಲ್ಲೂಕಿನ ಎಲ್ಲಾ ವಲಯದ ಸಿಬ್ಬಂದಿ ತಮ್ಮ ಕೆಲಸದ ಅವಧಿಯ ನಂತರವು ಪಾರ್ಕ್ ನಿರ್ಮಾಣದ ಕೆಲಸದಲ್ಲಿ ತೊಡಗಿಕೊಂಡಿದ್ದರು ಎಂದು ಅರಣ್ಯಧಿಕಾರಿ ಸುರೇಶ ನಾಯ್ಕ ತಿಳಿಸಿದರು.

ಅಂಕೋಲಾ-ಕಾರವಾರ ಮಾರ್ಗದ ರಾಷ್ಟ್ರೀಯ ಹೆದ್ದಾರಿಯಿಂದ ಕೇವಲ 200 ಮೀಟರ್ ದೂರದಲ್ಲಿ ಈ ಪಾರ್ಕ್ ಇದೆ. ತಾಲ್ಲೂಕಿನ ಜನರನ್ನು ಹೊರತುಪಡಿಸಿ ಇತರೆ ಪ್ರವಾಸಿಗರು ಸಹ ಸಾಗುವ ಮಾರ್ಗ ಮಧ್ಯದಲ್ಲಿ ಉದ್ಯಾನವನಕ್ಕೆ ಭೇಟಿ ಕೊಟ್ಟು ವೀಕ್ಷಿಸಬಹುದಾಗಿದೆ. ಸಂಗೀತಾಭ್ಯಾಸ, ಧ್ಯಾನ, ಬರವಣಿಗೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವವರಿಗೆ ನೆಚ್ಚಿನ ಸ್ಥಳ ಇದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.