
ಕಾರವಾರ: ‘ಸಂತ ಸೇವಾಲಾಲ ಅವರು ಬಂಜಾರ ಸಮುದಾಯಕ್ಕೆ ಸ್ವಾಭಿಮಾನದ ಬದುಕು ಮತ್ತು ಸಾಮಾಜಿಕ ಸಮಾನತೆಯನ್ನು ಕಲಿಸಿದ ಮಹಾನ್ ಸಂತ’ ಎಂದು ಶಾಸಕ ಸತೀಶ ಸೈಲ್ ಹೇಳಿದರು.
ತಾಲ್ಲೂಕಿನ ಬಿಣಗಾದ ಸೀತಾ ನಗರದಲ್ಲಿ ಭಾನುವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸ್ಥಳೀಯ ಮಹಾನಾಯಕ ತಾಂಡ ಜಂಟಿಯಾಗಿ ಹಮ್ಮಿಕೊಂಡಿದ್ದ ಸಂತ ಸೇವಾಲಾಲ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಒಂದು ಕಾಲದಲ್ಲಿ ಶಿಕ್ಷಣ, ಸಾಮಾಜಿಕ ಸೌಕರ್ಯಗಳಿಂದ ವಂಚಿತವಾಗಿದ್ದ ಸಮುದಾಯವನ್ನು ಪ್ರೇರೇಪಿಸಿ ಒಗ್ಗೂಡುವಂತೆ ಮಾಡುವ ಜೊತೆಗೆ ಸಮಾಜದಲ್ಲಿ ಸೂಕ್ತ ಸ್ಥಾನಮಾನ ಸಿಗುವಲ್ಲಿ ಸೇವಾಲಾಲ ಅವರ ಪಾತ್ರ ಮಹತ್ವದ್ದಾಗಿದೆ’ ಎಂದರು.
‘ಸಂತ ಸೇವಲಾಲ ಕೇವಲ ಆಧ್ಯಾತ್ಮಿಕ ಕ್ಷೇತ್ರಕ್ಕೆ ಸೀಮಿತರಾಗದೆ ಸಮಾಜ ಸುಧಾರಣೆಗೂ ತಮ್ಮದೇ ಕೊಡುಗೆ ನೀಡಿದ್ದಾರೆ. ಸತ್ಯ, ಅಹಿಂಸೆ, ಬ್ರಹ್ಮಚರ್ಯ ಮತ್ತು ವ್ಯಸನ ಮುಕ್ತ ಜೀವನವನ್ನು ಬೋಧಿಸಿ ಶಿಕ್ಷಣದೇ ಜೀವನಕ್ಕೆ ದಾರಿದೀಪ ಎಂದು ಸಾಬೀತುಪಡಿಸಿದ್ದರು’ ಎಂದರು.
ಸಂತ ಸೇವಲಾಲ ಕುರಿತು ಅನಿಲ ಪವಾರ ಉಪನ್ಯಾಸ ನೀಡಿದರು. ಸಭಾ ಕಾರ್ಯಕ್ರಮಕ್ಕೆ ಮುನ್ನ ಬಂಜಾರ ಸಮುದಾಯದವರಿಂದ ಅದ್ದೂರಿ ಮೆರವಣಿಗೆ ನಡೆಯಿತು.
ತಹಶೀಲ್ದಾರ ನಿಶ್ಚಲ್ ನೊರೋನ್ಹಾ, ಚುನಾವಣೆ ಶಾಖೆಯ ತಹಶೀಲ್ದಾರ ಪ್ರಮೋದ ನಾಯ್ಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಲಾ ನಾಯ್ಕ, ಬಂಜಾರ ಸಂಘದ ಅಧ್ಯಕ್ಷ ಸತೀಶ್ ನಾಯ್ಕ, ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ, ಇತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.