ADVERTISEMENT

ಮತ್ತೆ ಮೊಳಗಿದ ಶಾಲಾ ಘಂಟೆ!

ಒಂಬತ್ತು ತಿಂಗಳ ಬಳಿಕ ತರಗತಿ ಪುನರಾರಂಭ: ದ್ವಿತೀಯ ಪಿ.ಯು. ವಿದ್ಯಾರ್ಥಿಗಳಲ್ಲೂ ಉತ್ಸಾಹ

​ಪ್ರಜಾವಾಣಿ ವಾರ್ತೆ
Published 1 ಜನವರಿ 2021, 15:12 IST
Last Updated 1 ಜನವರಿ 2021, 15:12 IST
ಕಾರವಾರದ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ನಡೆದ ತರಗತಿಯೊಂದರ ದೃಶ್ಯ
ಕಾರವಾರದ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ನಡೆದ ತರಗತಿಯೊಂದರ ದೃಶ್ಯ   

ಕಾರವಾರ: ಸುಮಾರು ಒಂಬತ್ತು ತಿಂಗಳನಿಂದ ವಿದ್ಯಾರ್ಥಿಗಳ ಸುಳಿವಿಲ್ಲದೇ ಕಳಾಹೀನವಾಗಿದ್ದ ಸರ್ಕಾರಿ ಶಾಲೆಗಳು, ಶುಕ್ರವಾರ ಮತ್ತೆ ಬಾಗಿಲು ತೆರೆದವು. ಸಮವಸ್ತ್ರ ಧರಿಸಿದ ಮಕ್ಕಳ ಕಲರವ, ಶಾಲಾ ಘಂಟೆಯ ನಾದ, ಶಿಕ್ಷಕರಿಂದ ಕರಿ ಹಲಗೆಯ ಮೇಲೆ ಬಿಳಿ ಅಕ್ಷರಗಳು ಮೂಡಿ ಹೊಸ ಆರಂಭಕ್ಕೆ ನಾಂದಿ ಹಾಡಲಾಯಿತು.

ದ್ವಿತೀಯ ಪಿ.ಯು.ಸಿ ಮತ್ತು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ದೇಹದ ಉಷ್ಣತೆ ಪರೀಕ್ಷೆ, ಕೈಗಳಿಗೆ ಸ್ಯಾನಿಟೈಸರ್ ಸಿಂಪಡಣೆ, ಮುಖಗವಸು ಧರಿಸಿದ್ದನ್ನು ಖಾತರಿ ಪಡಿಸಿಕೊಂಡು ತರಗತಿಗಳಿಗೆ ಕಳುಹಿಸಲಾಯಿತು. ಇದರೊಂದಿಗೆ ಆರರಿಂದ ಒಂಬತ್ತನೇ ತರಗತಿಗಳಿಗೆ ‘ವಿದ್ಯಾಗಮ’ವನ್ನೂ ಆರಂಭಿಸಲಾಯಿತು.

ಕಾರವಾರದ ಸರ್ಕಾರಿ ಪ್ರೌಢಶಾಲೆಯಲ್ಲಿ ತರಗತಿಗಳ ಪುನರಾರಂಭಕ್ಕೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಿಯಾಂಗಾ ಚಾಲನೆ ನೀಡಿದರು. ತಳಿರು, ತೋರಣಗಳಿಂದ ಸಿಂಗರಿಸಿದ್ದ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ಸಮವಸ್ತ್ರ, ಪಠ್ಯಪುಸ್ತಕಗಳನ್ನು ವಿತರಿಸಲಾಯಿತು.

ADVERTISEMENT

ವಿದ್ಯಾರ್ಥಿಗಳ ಜೊತೆ ಮಾತನಾಡಿದ ಅವರು, ‘ತರಗತಿಗೆ ಹಾಜರಾಗಿದ್ದಕ್ಕೆ ನಿಮಗೆ ಅಭಿನಂದನೆಗಳು. ನಿಮ್ಮನ್ನು ನೋಡಿ ಇತರ ವಿದ್ಯಾರ್ಥಿಗಳೂ ಬರುವಂತಾಗಬೇಕು. ಇಡೀ ಶಾಲೆಯನ್ನು ಸ್ಯಾನಿಟೈಸ್ ಮಾಡಲಾಗಿದೆ. ಕುಡಿಯಲು ಬಿಸಿನೀರನ್ನು ಸಾಧ್ಯವಾದರೆ ಮನೆಯಿಂದಲೇ ತನ್ನಿ. ಶಾಲೆಯಲ್ಲೂ ಕೊಡಲಾಗುತ್ತದೆ. ಯಾರೂ ಆತಂಕ ಪಡಬೇಕಿಲ್ಲ. ನೀವೂ ಕೋವಿಡ್ ನಿಯಮಾವಳಿಗಳನ್ನು ಪಾಲಿಸಿ. ಏನೇ ತೊಂದರೆಗಳಿದ್ದರೂ ಶಿಕ್ಷಕರ ಗಮನಕ್ಕೆ ತನ್ನಿ’ ಎಂದು ಧೈರ್ಯ ತುಂಬಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ‘ಸೋಂಕು ದೃಢಪಟ್ಟ ಶಿಕ್ಷಕರನ್ನು ಪ್ರತ್ಯೇಕವಾಗಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಒಟ್ಟು 51 ಸಾವಿರ ವಿದ್ಯಾರ್ಥಿಗಳು ಜಿಲ್ಲೆಯಲ್ಲಿದ್ದಾರೆ. ಎಲ್ಲ ಶಿಕ್ಷಕರೂ ಉತ್ತಮ ರೀತಿಯಲ್ಲಿ ಸಹಕರಿಸಿದ್ದಾರೆ’ ಎಂದು ಶ್ಲಾಘಿಸಿದರು.

ವಿಶ್ವಾಸ ಮೂಡಿಸಲು ವಿಡಿಯೊ:

‘ಶಾಲೆಗಳ ಪುನರಾರಂಭದ ಬಗ್ಗೆ ಸಕಾರಾತ್ಮಕ ಭಾವನೆ ಬೆಳೆಸುವ ನಿಟ್ಟಿನಲ್ಲಿ ವಿಡಿಯೊ ಚಿತ್ರೀಕರಣ ಮಾಡಿ ವಿವಿಧೆಡೆ ಪ್ರಸಾರ ಮಾಡಲಾಗುವುದು. ಅಲ್ಲದೇ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಿಕ್ಷಕರ ಮೂಲಕವೂ ಮಕ್ಕಳ ಹಾಗೂ ಪಾಲಕರ ಮನವೊಲಿಕೆ ಮಾಡಲಾಗುವುದು’ ಎಂದು ಪ್ರಿಯಾಂಗಾ ತಿಳಿಸಿದರು.

‘ಒಂದು ತರಗತಿಯಲ್ಲಿ 15ಕ್ಕಿಂತ ಹೆಚ್ಚಿನ ಮಕ್ಕಳು ಇರದಂತೆ ವ್ಯವಸ್ಥೆ ಮಾಡಲಾಗಿದೆ. ಅರ್ಧ ದಿನ ಪುನರಾವರ್ತನೆ (ರೊಟೆಷನ್) ಪ್ರಕಾರ ಶಿಕ್ಷಕರು ಭೋದಿಸುತ್ತಾರೆ. ಹಾಸ್ಟೆಲ್‌ಗಳು ಅಗತ್ಯವಿರುವ ಮಕ್ಕಳ ಆರೋಗ್ಯವನ್ನು ಪರಿಶೀಲಿಸಲು ಇಲಾಖೆಯಿಂದ ಸೂಚನೆ ಬಂದಿದೆ’ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಶಾಂತೇಶ ನಾಯಕ, ಮುಖ್ಯ ಶಿಕ್ಷಕರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಜರಿದ್ದರು.

***

ಕಾರವಾರ ತಾಲ್ಲೂಕಿನ ಶಾಲೆಗಳಿಗೆ ಸಮವಸ್ತ್ರ ಪೂರೈಕೆಯಾಗಿದೆ. ಇತರ ಎಲ್ಲ ತಾಲ್ಲೂಕುಗಳಿಗೆ ಇನ್ನೊಂದು ವಾರದಲ್ಲಿ ಸಂಪೂರ್ಣವಾಗಿ ತಲುಪಲಿದೆ.

– ಹರೀಶ ಗಾಂವ್ಕರ್, ಶಿಕ್ಷಣ ಇಲಾಖೆ ಉಪ ನಿರ್ದೇಶಕ.

***

ಮೊದಲ ದಿನದ ಹಾಜರಾತಿ (ದ್ವಿತೀಯ ಪಿ.ಯು.ಸಿ)

13,459

ಒಟ್ಟು ವಿದ್ಯಾರ್ಥಿಗಳು

5,987

ಹಾಜರಾದ ವಿದ್ಯಾರ್ಥಿಗಳು

ಶೇ 44.48

ಹಾಜರಾತಿ ಪ್ರಮಾಣ

7

ಶೂನ್ಯ ಹಾಜರಾತಿಯ ಕಾಲೇಜುಗಳು

***

ಮೊದಲ ದಿನದ ಹಾಜರಾತಿ (10ನೇ ತರಗತಿ)

9,482

ಒಟ್ಟು ವಿದ್ಯಾರ್ಥಿಗಳು

6,624

ತರಗತಿಗೆ ಹಾಜರಾದವರು

ಶೇ 70

ಹಾಜರಾತಿ ಪ್ರಮಾಣ

1,780

ಆನ್‌ಲೈನ್ ತರಗತಿಗೆ ಹಾಜರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.