ಶಿರಸಿ: ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ತಾಲ್ಲೂಕಿನ ಇಸಳೂರಿನಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ಕಾಮಗಾರಿಗೆ ಶಾಸಕ ಭೀಮಣ್ಣ ನಾಯ್ಕ ಶುಕ್ರವಾರ ಭೂಮಿಪೂಜೆ ನೆರವೇರಿಸಿದರು.
ಜಿಲ್ಲಾ ಪಂಚಾಯಿತಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಲೋಕೋಪಯೋಗಿ ಇಲಾಖೆ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ₹3.52 ಕೋಟಿ ಮೊತ್ತದ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ‘ವಿಜ್ಞಾನ ಕೇಂದ್ರದ ನಿರ್ಮಾಣಕ್ಕೆ ಸರ್ಕಾರ ₹7.25 ಕೋಟಿ ನಿಗದಿ ಮಾಡಿದೆ. ಪ್ರಥಮ ಹಂತದ ಕಾಮಗಾರಿಗೆ ₹3.52 ಕೋಟಿ ಮೊತ್ತದಲ್ಲಿ ಆಗಲಿದೆ. ಉಳಿದ ಮೊತ್ತದಲ್ಲಿ ಯಂತ್ರೋಪಕರಣ, ವಿವಿಧ ಉಪಕರಣಗಳ ಖರೀದಿ ಆಗಲಿದೆ’ ಎಂದರು.
‘ಕೇಂದ್ರದಲ್ಲಿ ಮುಖ್ಯವಾಗಿ ಖಗೋಳ ವೀಕ್ಷಣೆಯ ಅವಕಾಶ ಇರಲಿದೆ. ಕಟ್ಟಡ ಕಾರ್ಯಾಚರಣೆ ಆರಂಭದ ಬಳಿಕ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಯಂತ್ರೋಪಕರಣ ಕಳಿಸಲಿದೆ. ನಿಗದಿತ ಸಮಯದಲ್ಲಿ ಕಾಮಗಾರಿ ಆಗಬೇಕು. ವಿಜ್ಞಾನ ಭವನ ನಿರ್ಮಾಣಗೊಂಡು ಮಕ್ಕಳಿಗೆ ಜ್ಞಾನ ಹಂಚುವ ಕಾರ್ಯ ಆಗಲಿ’ ಎಂದರು.
ಡಿಡಿಪಿಐ ಬಸವರಾಜ ಪಾರಿ, ‘ಶಿರಸಿ ಶೈಕ್ಷಣಿಕ ಜಿಲ್ಲೆಗೆ ಇದು ಅನುಕೂಲ ಆಗಲಿದೆ. ಮಕ್ಕಳ ಜ್ಞಾನ ಹಂಚಲು ಇದು ಕೇಂದ್ರವಾಗಲಿದೆ’ ಎಂದರು.
ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡ, ಇಸಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಷಾ ಶೆಟ್ಟರ, ಉಪಾಧ್ಯಕ್ಷೆ ಉಷಾ ಶೆಟ್ಟಿ, ಸದಸ್ಯ ನವೀನ ಶೆಟ್ಟಿ, ಪಿ.ವಿ. ಹೆಗಡೆ, ಘಟಕಾಧ್ಯಕ್ಷ ಸಿದ್ದು, ದುಷ್ಯಂತಗೌಡ ಕೊಲ್ಲೂರಿ, ಲೋಕೋಪಯೋಗಿ ಇಲಾಖೆಯ ಹನುಮಂತ, ಅರುಣ ಗೌಡರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.