ADVERTISEMENT

ಶಾಲಾ ಅಂಗಳದಲ್ಲಿ ವಿಜ್ಞಾನ ಉದ್ಯಾನ

ಕುಮಟಾ, ಹಳಿಯಾಳದ ಎರಡು ಕಡೆಗಳಲ್ಲಿ ಯೋಜನೆ ಜಾರಿ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2022, 13:48 IST
Last Updated 27 ಫೆಬ್ರುವರಿ 2022, 13:48 IST
ಕುಮಟಾ ತಾಲ್ಲೂಕಿನ ನಾಡುಮಾಸ್ಕೇರಿ ಸರ್ಕಾರಿ ಪ್ರೌಢಶಾಲೆ ಅಂಗಳದಲ್ಲಿ ಅಳವಡಿಸಲಾದ ವಿಜ್ಞಾನ ಮಾದರಿಗಳು
ಕುಮಟಾ ತಾಲ್ಲೂಕಿನ ನಾಡುಮಾಸ್ಕೇರಿ ಸರ್ಕಾರಿ ಪ್ರೌಢಶಾಲೆ ಅಂಗಳದಲ್ಲಿ ಅಳವಡಿಸಲಾದ ವಿಜ್ಞಾನ ಮಾದರಿಗಳು   

ಕಾರವಾರ: ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಲ್ಲಿ ವಿಜ್ಞಾನ, ತಂತ್ರಜ್ಞಾನದ ಅರಿವು ಹೆಚ್ಚಿಸುವ ನಿಟ್ಟಿನಲ್ಲಿ ಶಾಲೆ ಆವರಣದಲ್ಲಿ ವಿಜ್ಞಾನ ಹೊರಾಂಗಣ ಮಾದರಿಯ ಉದ್ಯಾನ ನಿರ್ಮಿಸಲು ಜಿಲ್ಲಾ ಪಂಚಾಯ್ತಿ ಮುಂದಾಗಿದೆ.

ಮೊದಲ ಹಂತವಾಗಿ ಹಳಿಯಾಳ ತಾಲ್ಲೂಕಿನ ಭಾಗವತಿ ಹಾಗೂ ಕುಮಟಾ ತಾಲ್ಲೂಕಿನ ನಾಡುಮಾಸ್ಕೇರಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣಗಳಲ್ಲಿ 15ನೇ ಹಣಕಾಸು ಯೋಜನೆಯ ಅಡಿ ತಲಾ ₹5 ಲಕ್ಷ ವೆಚ್ಚದಲ್ಲಿ ಉದ್ಯಾನ ನಿರ್ಮಿಸಲಾಗಿದೆ.

ಚಾಮರಾಜನಗರದ ಗ್ರಾಮಬಂಧು ಟ್ರಸ್ಟ್ ವಿಜ್ಞಾನ ಕಲಾವಿದರು ಶಾಲಾ ಆವರಣಕ್ಕೆ ಪೂರಕವಾಗಿ ಮಕ್ಕಳನ್ನು ಆಕರ್ಷಿಸುವ ಉದ್ಯಾನ ರೂಪಿಸಿದ್ದಾರೆ. ಅಲ್ಲಿ 10ಕ್ಕೂ ಅಧಿಕ ವಿಜ್ಞಾನ ಪ್ರಾಯೋಗಿಕ ಮಾದರಿಗಳನ್ನು ಅಳವಡಿಸಲಾಗಿದೆ.

ADVERTISEMENT

ಭಾಗವತಿ ಗ್ರಾಮದ ಸರ್ಕಾರಿ ಶಾಲಾ ಆವರಣದಲ್ಲಿ ನ್ಯೂಟನ್ ತೊಟ್ಟಿಲು, ಸಂಗೀತದ ಕೊಳವೆಗಳು, ಪ್ರಚೋದಿತ ಆಂದೋಲನೆ, ಕನ್ನಡಿಯೊಂದಿಗೆ ಆಟ, ಅನುಕಂಪದ ಉಯ್ಯಾಲೆ, ರಾಟೆಗಳಿಂದ ಯಾಂತ್ರಿಕ ಲಾಭದಂತಹ ವಿಜ್ಞಾನದ ಮಾದರಿಗಳನ್ನು ಅಳವಡಿಸಲಾಗಿದೆ.

ನಾಡುಮಾಸ್ಕೇರಿ ಗ್ರಾಮದ ಸರ್ಕಾರಿ ಶಾಲಾ ಆವರಣದಲ್ಲಿ ತರಂಗ ಚಲನೆ, ಗೈರೋಸ್ಕೋಪ್, 3ಡಿ ಲೋಲಕ, ಲಿಸಾಜಿಯಸ್ ವಿನ್ಯಾಸ, ಬಣ್ಣ ಶೋಧಕ, ನ್ಯೂಟನ್ ಬಣ್ಣದ ಚಕ್ರ, ಮುಂತಾದ ಮಾದರಿಗಳನ್ನು ಅಳವಡಿಸಲಾಗಿದೆ.

‘ಉದ್ಯಾನಗಳ ಕುರಿತು ವ್ಯಕ್ತವಾಗುವ ಪ್ರತಿಕ್ರಿಯೆ ಗಮನಿಸಿ ಯೋಜನೆಯನ್ನು ಮತ್ತಷ್ಟು ಶಾಲೆಗಳಿಗೆ ವಿಸ್ತರಿಸಲಾಗುವುದು’ ಎಂದು ಜಿಲ್ಲಾ ಪಂಚಾಯ್ತಿ ಸಿಇಒ ಎಂ.ಪ್ರಿಯಾಂಗಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.