ADVERTISEMENT

ಸೌಂದರ್ಯವರ್ಧಕ ಹರಳುಪ್ಪು

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2020, 2:19 IST
Last Updated 7 ಫೆಬ್ರುವರಿ 2020, 2:19 IST
   

ಸಮುದ್ರದ ನೀರಿನಿಂದ ಮಾಡಿದ, ಶುದ್ಧೀಕರಿಸದ ಉಪ್ಪಿನಲ್ಲಿ ಕಲ್ಮಶಗಳಿರುತ್ತವೆ ಎಂಬುದು ಅನೇಕರ ಮಾತು.ಆ ಕಾರಣಕ್ಕೆ ಈ ಉಪ್ಪು ತಿನ್ನಲು ಯೋಗ್ಯವಲ್ಲ ಎನ್ನುತ್ತಾರೆ. ಆದರೆ ಈ ಹರಳುಪ್ಪು ಸೌಂದರ್ಯಕ್ಕೆ ಮದ್ದು ಎಂದರೆ ನಂಬಲೇಬೇಕು. ನೈಸರ್ಗಿಕವಾಗಿ ಸಿಗುವ ಈ ಉಪ್ಪನ್ನು ತ್ವಚೆಯ ಸ್ಕ್ರಬ್ ಆಗಿ, ಫೇಶಿಯಲ್ ಮಾಡಿಕೊಳ್ಳಲು, ಟೋನರ್ ಹಾಗೂ ಉಗುರಿನ ಹೊಳಪು ಹೆಚ್ಚಿಸಲು ಕೂಡ ಬಳಸಬಹುದು. ಇದರಲ್ಲಿ ಸೋಡಿಯಂ, ಕ್ಯಾಲ್ಸಿಯಂ, ಮೆಗ್ನೀಸಿಯಂ ಹಾಗೂ ಪೊಟ್ಯಾಸಿಯಂನಂತಹ ಹಲವಾರು ಖನಿಜಾಂಶಗಳ ಸಂಗ್ರಹವಿರುವುದರಿಂದ ಇದು ಸೌಂದರ್ಯವರ್ಧಕ ಎನ್ನಿಸಿಕೊಳ್ಳುವುದರಲ್ಲಿ ಸಂದೇಹವಿಲ್ಲ.

ಸ್ಕ್ರಬ್ ಆಗಿ ಹರಳುಪ್ಪು

ಹರಳುಪ್ಪಿನಲ್ಲಿ ನೈಸರ್ಗಿಕ ಖನಿಜಾಂಶವಿದ್ದು ಇದು ಚರ್ಮವನ್ನು ಮೃದುಗೊಳಿಸುತ್ತದೆ. ಹೀಗಾಗಿ ಬೇರೆ ಬೇರೆ ಸೌಂದರ್ಯವರ್ಧಕಗಳನ್ನು ಹಚ್ಚಿಕೊಳ್ಳುವ ಬದಲು ಹರಳುಪ್ಪನ್ನೇ ಸ್ಕ್ರಬ್ ಆಗಿ ಬಳಸಬಹುದು. ಅರ್ಧ ಕಪ್ ಆಲಿವ್ ಎಣ್ಣೆಗೆ ಕಾಲು ಕಪ್‌ ಹರಳುಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ತೋಳು, ಕಾಲು, ಪಾದ ಹಾಗೂ ಮುಖಕ್ಕೆ ಹಚ್ಚಿಕೊಂಡು ಉಜ್ಜಿ. ಇದರಿಂದ ಚರ್ಮದ ಮೇಲಿನ ಸತ್ತ ಪದರ ಸ್ವಚ್ಛವಾಗಿ ಹೊಳಪು ಹೆಚ್ಚುತ್ತದೆ.

ADVERTISEMENT

ಫೇಶಿಯಲ್ ಟೋನರ್

ಹರಳುಪ್ಪು ಉತ್ತಮ ಫೇಶಿಯಲ್ ಕೂಡ ಹೌದು. ಇದನ್ನು ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಮುಖದ ರಂಧ್ರಗಳು ಸ್ವಚ್ಛಗೊಂಡು ಚರ್ಮದ ಉಸಿರಾಟಕ್ಕೆ ನೆರವಾಗುತ್ತದೆ. ಒಂದು ಕಪ್ ಬಿಸಿನೀರಿಗೆ ಒಂದು ಟೇಬಲ್ ಚಮಚ ಹರಳುಪ್ಪು ಸೇರಿಸಿ. ಆ ನೀರಿನಲ್ಲಿ ಹತ್ತಿಯ ಉಂಡೆಯನ್ನು ಅದ್ದಿ ಸಂಪೂರ್ಣ ಮುಖಕ್ಕೆ ಉಜ್ಜಿ. ಆದರೆ ಕಣ್ಣಿನ ಭಾಗಕ್ಕೆ ತಾಗಿಸಬೇಡಿ. ಪ್ರತಿದಿನ ಹೀಗೆ ಮಾಡುವುದರಿಂದ ಮುಖದ ಹೊಳಪು ಹೆಚ್ಚುತ್ತದೆ.

ಉಗುರಿನ ಕಾಂತಿಗೆ

ಉಗುರಿನ ಕಾಂತಿ ಹೆಚ್ಚಲು ಹಾಗೂ ಉಗುರಿನ ಆರೋಗ್ಯ ಕಾಪಾಡಿಕೊಳ್ಳಲು ಹರಳುಪ್ಪು ತುಂಬಾನೇ ಸಹಕಾರಿ. ಒಂದು ಚಮಚ ಉ‍ಪ್ಪು, ಒಂದು ಚಮಚ ಅಡುಗೆ ಸೋಡಾ ಹಾಗೂ ಒಂದು ಚಮಚ ನಿಂಬೆರಸ ಮಿಶ್ರ ಮಾಡಿ ಅರ್ಧ ಕಪ್ ಬಿಸಿನೀರಿಗೆ ಸೇರಿಸಿ. ನಂತರ ಆ ನೀರಿನಲ್ಲಿ ಉಗುರನ್ನು ಎಂಟರಿಂದ ಹತ್ತು ನಿಮಿಷ ನೆನೆಸಿ. ನಂತರ ಬ್ರಷ್‌ನಿಂದ ನಿಧಾನಕ್ಕೆ ಉಜ್ಜಿ. ಹೀಗೆ ಮಾಡುವುದರಿಂದ ಉಗುರಿನಲ್ಲಿರುವ ಧೂಳು ಹೋಗಿ ಉಗುರು ಹೊಳೆಯುತ್ತದೆ.

ಕೂದಲಿಗೆ ಕಂಡಿಷನರ್ ಆಗಿ ಬಳಕೆ

ಸಾಮಾನ್ಯವಾಗಿ ಉಪ್ಪುನೀರು ಕೂದಲಿಗೆ ಹಾನಿ ಮಾಡುತ್ತದೆ ಎಂಬುದು ಜನರ ನಂಬಿಕೆ. ಆದರೆ ಖನಿಜಾಂಶ ಹೊಂದಿರುವ ನೀರು ಕೂದಲ ಆರೋಗ್ಯಕ್ಕೆ ತುಂಬಾ ಸಹಕಾರಿ.

ತೆಂಗಿನೆಣ್ಣೆಗೆ ಸ್ವಲ್ಪ ಹರಳುಪ್ಪು ಸೇರಿಸಿ ಮಿಶ್ರ ಮಾಡಿ ಕೂದಲಿನ ಬುಡಕ್ಕೆ ಹಚ್ಚಿ. 20 ನಿಮಿಷಗಳ ಕಾಲ ಬಿಟ್ಟು ತೊಳೆಯಿರಿ. ವಾರಕ್ಕೆ ಎರಡು ಬಾರಿ ಹೀಗೆ ಮಾಡುವುದರಿಂದ ಕೂದಲಿನ ಬೇರು ಸದೃಢವಾಗುತ್ತದೆ. ಕೂದಲು ದಟ್ಟವಾಗಿ ಬೆಳೆಯುವ ಜೊತೆಗೆ ಕಾಂತಿ ಕೂಡ ಹೆಚ್ಚುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.