ಕಾರವಾರ: ಶಿರೂರು ಗುಡ್ಡ ಕುಸಿತ ದುರಂತದಲ್ಲಿ ಕಾಣೆಯಾದ ಮೂವರು ಮತ್ತು ಲಾರಿ ಪತ್ತೆಗಾಗಿ ಸತತ 12ನೇ ದಿನವೂ ಕಾರ್ಯಾಚರಣೆ ಮುಂದುವರಿಯಿತು. ನದಿಯ ಆಳದಲ್ಲಿ ಸಿಲುಕಿರುವ ಲಾರಿ ಹುಡುಕಲು ಪ್ರಯತ್ನಿಸಿದ ಮುಳುಗು ತಜ್ಞರ ತಂಡಕ್ಕೆ ಮಣ್ಣು ಮತ್ತು ಕಲ್ಲು ಹೊರತುಪಡಿಸಿ ಮತ್ತೇನೂ ಗೋಚರಿಸಲಿಲ್ಲ.
ಮುಳುಗು ತಜ್ಞ ಈಶ್ವರ ಮಲ್ಪೆ ಮತ್ತು ಅವರ ತಂಡವು ನೌಕಾದಳದ ಮುಳುಗು ತಜ್ಞರು, ಎನ್‌ಡಿಆರ್‌ಎಫ್ ನೆರವಿನೊಂದಿಗೆ ಶನಿವಾರ ಕಾರ್ಯಾಚರಣೆ ನಡೆಸಲು ಯತ್ನಿಸಿತು. ಗುಡ್ಡದಿಂದ ಕುಸಿದ ಮಣ್ಣು ನದಿ ಮಧ್ಯಭಾಗದಲ್ಲಿ ಶೇಖರವಾದ ಜಾಗದಲ್ಲಿ ನಿಂತು ಕಾರ್ಯಾಚರಣೆಗೆ ಯತ್ನಿಸಿದ ವೇಳೆ ತಂಡದ ಸದಸ್ಯ ದೀಪು ಎಂಬವರು ಬಿದ್ದು ಗಾಯಗೊಂಡರು. ನದಿಯ ಆಳಕ್ಕೆ ಇಳಿಯಲು ಪ್ರಯತ್ನಿಸಿದ ಈಶ್ವರ ಮಲ್ಪೆ ಅವರು ಸ್ಥಳದಿಂದ ಸುಮಾರು 80 ಮೀಟರ್ ದೂರಕ್ಕೆ ತೇಲಿ ಹೋದರು. ಅವರದ್ದೇ ತಂಡದ ಸದಸ್ಯರು, ಈಶ್ವರ ಅವರನ್ನು ರಕ್ಷಿಸಿ ಕರೆತಂದರು.
‘ನೊಯ್ಡಾದಿಂದ ಬಂದಿದ್ದ ತಜ್ಞರ ತಂಡವು ನದಿಯ ನಾಲ್ಕು ವಿಭಿನ್ನ ಪ್ರದೇಶದಲ್ಲಿ ಲೋಹದ ವಸ್ತುಗಳಿರುವ ಬಗ್ಗೆ ಸ್ಥಳ ಗುರುತಿಸಿ ವರದಿ ನೀಡಿದೆ. ಇದೇ ಸ್ಥಳದಲ್ಲಿ ಮುಳುಗು ತಜ್ಞರ ತಂಡವು ಕಾರ್ಯಾಚರಣೆ ನಡೆಸಿದ್ದು, ಮೂರು ಕಡೆ ಕಲ್ಲು ಮತ್ತು ಮಣ್ಣು ಇದೆ. ನಾಲ್ಕನೇ ಸ್ಥಳದಲ್ಲಿ ಯಾವ ಕುರುಹು ಸಿಕ್ಕಿಲ್ಲ’ ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ತಿಳಿಸಿದರು.
‘ನದಿಯಲ್ಲಿ ಸ್ಥಿರವಾಗಿ ನಿಂತು ರಕ್ಷಣಾ ಕಾರ್ಯಾಚರಣೆ ನಡೆಸಲು ತಂಡಕ್ಕೆ ಸೂಕ್ತ ಆಸರೆ ಸಿಗುತ್ತಿಲ್ಲ. ತೇಲುವ ಜಟ್ಟಿ (ಫ್ಲಟೂನ್) ತರಿಸಲು ಯತ್ನಿಸಲಾಯಿತಾದರೂ ತಾಂತ್ರಿಕ ಸಮಸ್ಯೆಯಿಂದ ಅದು ಸಾಧ್ಯವಾಗಲಿಲ್ಲ. ಟಗ್ ಬೋಟ್ ತರಿಸಲು ಪ್ರಯತ್ನ ನಡೆದಿದೆ. ಅದರ ನೆರವಿನೊಂದಿಗೆ ನದಿಯಲ್ಲಿ ರಕ್ಷಣಾ ಕಾರ್ಯಾಚರಣೆಗೆ ಅನುಕೂಲವಾಗಬಹುದು ಎಂಬ ನಿರೀಕ್ಷೆ ಇದೆ. ಭಾನುವಾರವೂ ಕಾರ್ಯಾಚರಣೆ ಮುಂದುವರಿಯಲಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.