ADVERTISEMENT

ಕೋವಿಡ್ ಗೆದ್ದವರ ಕಥೆಗಳು | ಆತ್ಮಸೈರ್ಯವೇ ದೊಡ್ಡ ಔಷಧ

​ಪ್ರಜಾವಾಣಿ ವಾರ್ತೆ
Published 24 ಜುಲೈ 2020, 16:19 IST
Last Updated 24 ಜುಲೈ 2020, 16:19 IST

ಶಿರಸಿ: ‘ಎಲ್ಲ ಸುರಕ್ಷಾ ಸಾಧನಗಳೊಂದಿಗೆ ಪ್ರಯೋಗಾಲಯದಲ್ಲಿ ಕೆಲಸ ಮಾಡುತ್ತಿದ್ದೆ. ಆದರೂ, ಹೇಗೆ ಕೋವಿಡ್ 19 ತಗುಲಿತೆಂಬುದು ಈಗಲೂ ನನಗೆ ಗೊತ್ತಾಗುತ್ತಿಲ್ಲ. ಗಂಟಲು ದ್ರವ ಪರೀಕ್ಷೆಯಲ್ಲಿ ನನ್ನ ವರದಿ ಪಾಸಿಟಿವ್ ಎಂದು ಬಂದಾಗ, ನಾನು ಧೈರ್ಯಗೆಡಲಿಲ್ಲ. ಆ ಧೈರ್ಯವೇ ನನಗೆ ಬೇಗ ಗುಣಮುಖವಾಗಲು ಸಹಕಾರಿಯಾಯಿತು’ ಎಂದು ಲ್ಯಾಬ್ ಟೆಕ್ನಿಷಿಯನ್ ಆಗಿರುವ ಕೃಷ್ಣ ಹೇಳಿದರು.

ಮಂಗಳೂರಿನ ಕೋವಿಡ್ ತಪಾಸಣಾ ಪ್ರಯೋಗಾಲಯದಲ್ಲಿ ಕೆಲಸ ಮಾಡಿ ಬಂದು, ಸುಮಾರು ಒಂದು ತಿಂಗಳ ಮೇಲೆ, ಅವರಿಗೆ ಕೋವಿಡ್ 19 ಕಾಯಿಲೆ ದೃಢಪಟ್ಟಿತ್ತು. ಪ್ರಸ್ತುತ ಗುಣಮುಖರಾಗಿ ಹೋಂ ಕ್ವಾರಂಟೈನ್‌ನಲ್ಲಿರುವ ಅವರು ತಮ್ಮ ಅನುಭವ ಹಂಚಿಕೊಂಡರು.

‘ನನಗೆ ನೆಗಡಿ, ಜ್ವರ, ಕೆಮ್ಮಿನಂತಹ ಸಾಮಾನ್ಯ ಲಕ್ಷಣಗಳು ಇರಲಿಲ್ಲ. ಆದರೆ, ವರದಿಯಲ್ಲಿ ಪಾಸಿಟಿವ್ ಬಂದ ಕಾರಣಕ್ಕೆ ಕಾರವಾರದ ಕ್ರಿಮ್ಸ್‌ಗೆ ಚಿಕಿತ್ಸೆಗೆಂದು ಹೋಗಿದ್ದೆ. ಎರಡು ದಿನ ಅಲ್ಲಿದ್ದು, ನಂತರ ಶಿರಸಿಯ ಕೋವಿಡ್ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ಪಡೆದೆ. ವಿಟಮಿನ್ ‘ಬಿ’, ‘ಸಿ’ ಜೊತೆಗೆ ಇನ್ನೊಂದೆರಡು ಆ್ಯಂಟಿಬಯಾಟಿಕ್ ಮಾತ್ರೆಗಳನ್ನು ದಿನವೂ ಕೊಡುತ್ತಾರೆ. ಸೋಂಕು ತಗುಲಿದ ವ್ಯಕ್ತಿಗೆ ಧೈರ್ಯವೇ ಮುಖ್ಯ ಔಷಧ’.

ADVERTISEMENT

‘ಕೋವಿಡ್ ಕೇರ್ ಸೆಂಟರ್‌ನಲ್ಲಿ ನಾನು ಚಿಕಿತ್ಸೆ ಪಡೆಯುತ್ತಿದ್ದಾಗ, ಪಾಸಿಟಿವ್ ಬಂದಿದ್ದ 20ಕ್ಕೂ ಹೆಚ್ಚು ಜನರು ಚಿಕಿತ್ಸೆಗೆ ಬಂದಿದ್ದರು. ಲ್ಯಾಬ್‌ನಲ್ಲಿ ಕೆಲಸ ಮಾಡಿದ ಅನುಭವವಿದ್ದ ನಾನು, ಕಂಗಾಲಾಗಿ ಬಂದಿದ್ದ ಅವರಲ್ಲಿ ಆತ್ಮವಿಶ್ವಾಸ ತುಂಬಿದೆ. ನನ್ನ ಮಾತಿನಿಂದ ಸ್ಫೂರ್ತಿಗೊಂಡ ಅವರಿಗೆ ಇದು ಗಂಭೀರ ಕಾಯಿಲೆ ಅಲ್ಲ ಎಂಬುದು ಮನದಟ್ಟಾಯಿತು. ಕೋವಿಡ್ ಅಂದರೆ ಜನ ಭಯಪಡುತ್ತಾರೆ. ಆತ್ಮಸ್ಥೈರ್ಯದಿಂದ ಇದ್ದರೆ ಈ ಕಾಯಿಲೆ ಬೇಗ ಗುಣವಾಗುತ್ತದೆ’.

‘ಕೋವಿಡ್ ಕೇರ್ ಸೆಂಟರ್‌ಗೆ ಹೋಗುವಾಗ ಬಟ್ಟೆ, ತಟ್ಟೆ, ಪ್ಲೇಟ್‌ನಂತಹ ಅಗತ್ಯ ಸಾಮಗ್ರಿ ಕೊಂಡೊಯ್ಯಬೇಕು. ಆಗಾಗ ಬಿಸಿನೀರು, ಶುಂಠಿ, ಮೆಣಸಿನ ಕಾಳು, ಅರಿಸಿನ ಪುಡಿ ಸೇರಿಸಿದ ಕಷಾಯ ಕುಡಿದರೆ ಅನುಕೂಲ. ಕೋವಿಡ್ 19 ಗುಣಮುಖರಾದವರನ್ನು ಕಳ್ಳರಂತೆ ನೋಡುತ್ತಾರೆ. ತಿಳಿವಳಿಕೆ ಇರುವ ಪ್ರಬುದ್ಧರು ಈ ರೀತಿ ಮಾಡುವುದಿಲ್ಲ. ಸಣ್ಣ ಮನಸ್ಸಿನವರ ಸ್ವಭಾವಕ್ಕೆ ನಾವು ತಲೆಕೆಡಿಸಿಕೊಳ್ಳಬೇಕಿಲ್ಲ’.

ನಿರೂಪಣೆ: ಸಂಧ್ಯಾ ಹೆಗಡೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.