ADVERTISEMENT

ಪ್ರವಾಹದಲ್ಲಿ ಸಿಲುಕಿದ್ದ ಏಳು ಜನರ ರಕ್ಷಣೆ

ಹಲವು ರಸ್ತೆ, ಸೇತುವೆಗಳು ನೀರುಪಾಲು: ಜನಜೀವನ ಸಂಪೂರ್ಣ ಅಸ್ತವ್ಯಸ್ತ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2019, 15:31 IST
Last Updated 8 ಆಗಸ್ಟ್ 2019, 15:31 IST
ಹಳಿಯಾಳ ತಾಲ್ಲೂಕಿನ ಯಡೋಗಾದಲ್ಲಿ ಹಳ್ಳದ ನೀರು ಹರಿದು ಸಂಪೂರ್ಣ ಕೊಚ್ಚಿಹೋದ ರಸ್ತೆಯನ್ನು ಶಾಸಕ ಆರ್.ವಿ.ದೇಶಪಾಂಡೆ ಮತ್ತು ವಿಧಾನಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಗುರುವಾರ ಪರಿಶೀಲಿಸಿದರು.
ಹಳಿಯಾಳ ತಾಲ್ಲೂಕಿನ ಯಡೋಗಾದಲ್ಲಿ ಹಳ್ಳದ ನೀರು ಹರಿದು ಸಂಪೂರ್ಣ ಕೊಚ್ಚಿಹೋದ ರಸ್ತೆಯನ್ನು ಶಾಸಕ ಆರ್.ವಿ.ದೇಶಪಾಂಡೆ ಮತ್ತು ವಿಧಾನಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಗುರುವಾರ ಪರಿಶೀಲಿಸಿದರು.   

ಕಾರವಾರ: ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿದ್ದು,ಯಲ್ಲಾಪುರ ತಾಲ್ಲೂಕಿನ ಕಾರ್ಕುಂಡಿ ಗ್ರಾಮದ ಬಳಿ ತಟ್ಟಿಹಳ್ಳ ಅಣೆಕಟ್ಟೆಯ ಪ್ರವಾಹದಲ್ಲಿ ಸಿಲುಕಿದ್ದ ಏಳು ಜನರನ್ನುತಟರಕ್ಷಕ ದಳದ ಸಿಬ್ಬಂದಿ ಗುರುವಾರ ರಕ್ಷಿಸಿದರು.

ತಟ್ಟಿಹಳ್ಳ ಅಣೆಕಟ್ಟೆಯಿಂದ ಕಾಳಿ ನದಿಗೆ ನೀರು ಹರಿಸುವ ಕಾರಣ ಕಾರ್ಕುಂಡಿ ಹಾಗೂ ತಾಟವಾಳ ಗ್ರಾಮಗಳಸುಮಾರು 80 ಕುಟುಂಬಗಳನ್ನು ತಾತ್ಕಾಲಿಕ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲಾಗಿತ್ತು. ಆದರೆ, ಏಳು ಜನ ಅಲ್ಲಿಗೆ ಹೋಗಿರಲಿಲ್ಲ.

ಜಿಲ್ಲೆಯ ಹಲವೆಡೆ ಸೇತುವೆ, ರಸ್ತೆಗಳು ಕೊಚ್ಚಿ ಹೋಗಿವೆ.ಹಳಿಯಾಳ ತಾಲ್ಲೂಕಿನ ಖಾನಾಪುರ– ತಾಳಗುಪ್ಪ ರಾಜ್ಯ ಹೆದ್ದಾರಿಯ ದುಸಗಿ ಗ್ರಾಮದಲ್ಲಿ ಹಳ್ಳದ ನೀರು ಉಕ್ಕಿ ಹರಿದು ಸೇತುವೆ ಕೊಚ್ಚಿಹೋಗಿದೆ.ಹಳಿಯಾಳ– ಯಲ್ಲಾಪುರ– ದಾಂಡೇಲಿ ರಸ್ತೆಯ ಕೆಸರೊಳ್ಳಿ ಗ್ರಾಮದಲ್ಲಿ ರಸ್ತೆ ಸಂಪೂರ್ಣವಾಗಿ ನಾಶವಾಗಿದೆ. ಎಡೋಗ ಗ್ರಾಮದಲ್ಲಿಸೇತುವೆನೀರುಪಾಲಾಗಿದ್ದು, ಗ್ರಾಮಕ್ಕೆ ರಸ್ತೆ ಸಂಪರ್ಕ ಕಡಿತವಾಗಿದೆ.

ADVERTISEMENT

ಕದ್ರಾ ಅಣೆಕಟ್ಟೆಯಿಂದ ಗುರುವಾರವೂ ನಿರಂತರವಾಗಿ 1.80 ಲಕ್ಷ ಕ್ಯುಸೆಕ್ ನೀರನ್ನು ಕಾಳಿ ನದಿಗೆ ಹರಿಸಲಾಯಿತು. ಇದರಿಂದ ಕದ್ರಾ ಹಾಗೂ ಮಲ್ಲಾಪುರ ಗ್ರಾಮಗಳು ಬಹುತೇಕ ಮುಳುಗಡೆಯಾಗಿವೆ. ಕಾರವಾರ– ಔರಾದ್ ರಾಜ್ಯ ಹೆದ್ದಾರಿಯಲ್ಲಿ ಹಲವೆಡೆ ಮೂರು– ನಾಲ್ಕು ಅಡಿ ನೀರು ನಿಂತಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ. ಅಂಕೋಲಾ ತಾಲ್ಲೂಕಿನ ಸುಂಕಸಾಳದಲ್ಲಿ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಗಂಗಾವಳಿ ನದಿಯ ನೀರು ಇನ್ನೂ ಹರಿಯುತ್ತಿದ್ದು, ವಾಹನ ಸಂಚಾರ ನಾಲ್ಕನೇ ದಿನವೂ ಆರಂಭವಾಗಿಲ್ಲ.

ಸೂಪಾ ಅಣೆಕಟ್ಟೆಗೆ ಗುರುವಾರ 90,825 ಕ್ಯುಸೆಕ್ ಒಳಹರಿವು ದಾಖಲಾಗಿದೆ. ಅಣೆಕಟ್ಟೆ ಭರ್ತಿಯಾಗಲು ಇನ್ನು ಎಂಟು ಮೀಟರ್ ಮಾತ್ರ ಬಾಕಿಯಿದೆ. ಹಾಗಾಗಿ ಜಲಾಶಯದಿಂದ ಗುರುವಾರ ಸಂಜೆ 5,500 ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಯಿತು. ಈ ಪ್ರಮಾಣ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಆದ್ದರಿಂದ ಮುನ್ನೆಚ್ಚರಿಕಾ ಕ್ರಮವಾಗಿ 28 ಗ್ರಾಮಗಳಿಂದ ಜನರನ್ನು ತೆರವು ಮಾಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.