ADVERTISEMENT

ಪಂಪ್ಡ್ ಸ್ಟೋರೇಜ್ | ಡಿಪಿಆರ್ ಬಹಿರಂಗಪಡಿಸಲ್ಲ: ವಿ.ಎಂ.ವಿಜಯ್

ವರದಿಯಲ್ಲಿದೆ ಜಲಾಶಯದ ಸೂಕ್ಷ್ಮಮಾಹಿತಿ: ಕೆಪಿಸಿಎಲ್ ಅಧಿಕಾರಿಗಳ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2025, 4:26 IST
Last Updated 29 ಅಕ್ಟೋಬರ್ 2025, 4:26 IST
ವಿ.ಎಂ.ವಿಜಯ್
ವಿ.ಎಂ.ವಿಜಯ್   

ಕಾರವಾರ: ‘ಗೇರುಸೊಪ್ಪ, ತಳಕಳಲೆ ಸೇರಿದಂತೆ ಶರಾವತಿ ಯೋಜನಾ ಪ್ರದೇಶದ ಸೂಕ್ಷ್ಮ ಮಾಹಿತಿಗಳಿರುವ ಕಾರಣದಿಂದಾಗಿ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಾರ್ವಜನಿಕರಿಗೆ ಬಹಿರಂಗಪಡಿಸಿಲ್ಲ’ ಎಂದು ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ (ಕೆ‍ಪಿಸಿಎಲ್‌) ಕಾರ್ಯನಿರ್ವಾಹಕ ಎಂಜಿನಿಯರ್ ವಿ.ಎಂ.ವಿಜಯ್ ತಿಳಿಸಿದರು.

‘ಪಂಪ್ಡ್ ಸ್ಟೋರೇಜ್ ಯೋಜನೆ ಬಗ್ಗೆ ಜನರಲ್ಲಿನ ತಪ್ಪು ಗ್ರಹಿಕೆ ಹೋಗಲಾಡಿಸಲು ಕೆಪಿಸಿಎಲ್‌ನಿಂದ ಗರಿಷ್ಠಮಟ್ಟದ ಪ್ರಯತ್ನ ನಡೆದಿದೆ. ವಾಸ್ತವ ಸಂಗತಿಗಳನ್ನು ತಿಳಿಯಲು ಕೆಪಿಸಿಎಲ್ ಅಧಿಕಾರಿಗಳನ್ನು ಸಂಪರ್ಕಿಸಬಹುದು. ಯೋಜನೆಯ ವಿವರ ಮಾಹಿತಿಗಳು ಪರಿವೇಶಲ್ ಪೋರ್ಟಲ್‌ನಲ್ಲಿ ಲಭ್ಯವಿದೆ’ ಎಂದು ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಯೋಜನೆಗೆ ಸಂಬಂಧಿಸಿದ ಪರಿಸರ ಸಾರ್ವಜನಿಕ ಅಹವಾಲು ಸಭೆಗೆ ಮುನ್ನ ಜನರಿಗೆ ಯೋಜನೆಯ ಸ್ಪಷ್ಟ ಮಾಹಿತಿ ಇರಲಿಲ್ಲ. 2017ರಿಂದಲೂ ಯೋಜನೆ ಪ್ರದೇಶದಲ್ಲಿ ವಿಸ್ತೃತ ಅಧ್ಯಯನ ನಡೆಸಲಾಗಿದೆ. ಯೋಜನೆ ಜಾರಿಯಿಂದ ಶರಾವತಿ ನದಿಗೆ ಹರಿಯುವ ನೀರಿನ ಪ್ರಮಾಣದಲ್ಲಿ ಇಳಿಕೆ ಆಗುವುದಿಲ್ಲ. ಯೋಜನೆ ವ್ಯಾಪ್ತಿಯಲ್ಲಿ ಮರಗಳನ್ನು ಗುರುತಿಸಲಾಗಿದೆಯಾದರೂ ಅಗತ್ಯ ಇದ್ದರೆ ಮಾತ್ರ ಕಡಿಯಲಾಗುತ್ತದೆ. ಬಹುಪಾಲು ರಚನೆಗಳು ಸುರಂಗದ ಒಳಗೆ ಇರುವುದರಿಂದ ಭೂಮಿಯ ಮೇಲ್ಮೈನಲ್ಲಿ ಕನಿಷ್ಠ ಪರಿಣಾಮ ಉಂಟಾಗುತ್ತದೆ’ ಎಂದರು.

ADVERTISEMENT

‘ಯೋಜನೆಗೆ ಗೇರುಸೊಪ್ಪ ಮತ್ತು ತಳಕಳಲೆ ಮಾತ್ರ ಪೂರಕವಾಗಿರುವ ಕಾರಣಕ್ಕೆ ಇದೇ ಪ್ರದೇಶದಲ್ಲಿ ಯೋಜನೆ ಕೈಗೆತ್ತಿಕೊಳ್ಳಲಾಗುತ್ತಿದೆ. ಕಡಿಮೆ ವೆಚ್ಚದಲ್ಲಿ ವಿದ್ಯುತ್ ಉತ್ಪಾದನೆಗೆ ಇದು ಅನುಕೂಲವಾಗಲಿದೆ. ಹೆಚ್ಚುವರಿ ವಿದ್ಯುತ್ ಇದ್ದಾಗ ನೀರನ್ನು ಕೆಳಗಿನ ಜಲಾಶಯದಿಂದ ಮೇಲಿನ ಜಲಾಶಯಕ್ಕೆ ಪಂಪ್ ಮಾಡಿ ಶೇಖರಿಸಲಾಗುತ್ತದೆ. ವಿದ್ಯುತ್ ಬೇಡಿಕೆ ಹೆಚ್ಚಾದಾಗ ಆ ನೀರನ್ನು ಬಳಸಿ ವಿದ್ಯುತ್ ಉತ್ಪಾದಿಸಿ ಪೂರೈಸಲಾಗುತ್ತದೆ. ಗ್ರಿಡ್ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಇದು ಸಹಾಯಕವಾಗಲಿದೆ’ ಎಂದರು.

ಕೆಪಿಸಿಎಲ್ ಮುಖ್ಯ ಎಂಜಿನಿಯರ್ ಶಿಲ್ಪಾ ಡಿ.ರಾಜ್, ಎಂಜಿನಿಯರ್‌ಗಳಾದ ಪ್ರದೀಪ, ಶ್ರೀಲಕ್ಷ್ಮಿ, ಎಸ್.ಎಂ.ಗಿರೀಶ್, ಉಮಾಪತಿ ಪಾಲ್ಗೊಂಡಿದ್ದರು.

ಪಂಪ್ಡ್ ಸ್ಟೋರೇಜ್ ಯೋಜನೆಗೆ ಇನ್ನೂ ಪರಿಸರ ವನ್ಯಜೀವಿ ಮತ್ತು ಅರಣ್ಯ ಅನುಮತಿ ಪಡೆಯುವುದು ಬಾಕಿ ಇದೆ
ವಿ.ಎಂ.ವಿಜಯ್ ಕೆಪಿಸಿಎಲ್ ಕಾರ್ಯಪಾಲಕ ಎಂಜಿನಿಯರ್
ವಿದ್ಯುತ್ ಮಾರ್ಗ ವಿಸ್ತರಣೆ ಇಲ್ಲ
‘ಪಂಪ್ಡ್ ಸ್ಟೋರೇಜ್ ಯೋಜನೆಯಲ್ಲಿ ಉತ್ಪಾದನೆಗೊಂಡ ವಿದ್ಯುತ್‌ನ್ನು ತಾಳಗುಪ್ಪ ಗುತ್ತೂರಿನ ಗ್ರಿಡ್‌ಗೆ ಸಾಗಿಸಲು ವಿದ್ಯುತ್ ಮಾರ್ಗ 440 ಕೆ.ವಿ ಸಾಮರ್ಥ್ಯಕ್ಕೆ ಏರಿಕೆಯಾಗಲಿದೆ. ಆದರೆ ಸುಧಾರಿತ ತಾಂತ್ರಿಕತೆ ಬಳಸಿಕೊಂಡು ಪ್ರಸ್ತುತ ಇರುವ ಕಾರಿಡಾರ್‌ನಲ್ಲಿಯೇ ವಿದ್ಯುತ್ ಪೂರೈಕೆಗೆ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಹೀಗಾಗಿ ಮಾರ್ಗದ ವಿಸ್ತರಣೆ ಅಗತ್ಯವಿಲ್ಲ’ ಎಂದು ಕೆಪಿಟಿಸಿಎಲ್ ಅಧೀಕ್ಷಕ ಎಂಜಿನಿಯರ್ ಎಂ.ಶಿಲ್ಪಾ ತಿಳಿಸಿದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.