ಅಂಕೋಲಾ: ಉತ್ತರ ಕನ್ನಡ ಜಿಲ್ಲೆಗೆ ಲಾಭದಾಯಕವಲ್ಲದ, ಉದ್ಯೋಗ ಸೃಷ್ಟಿ ದೃಷ್ಟಿಯಿಂದಲೂ ಹೆಚ್ಚು ಪ್ರಯೋಜನ ಇಲ್ಲ. ಪರಿಸರ ಸಂಬಂಧಿ ಸಮಸ್ಯೆ ಉಲ್ಬಣಿಸುವ ಶರಾವತಿ ಪಂಪ್ಡ್ ಸ್ಟೋರೇಜ್ ವಿದ್ಯುತ್ ಯೋಜನೆಯನ್ನು ಕರ್ನಾಟಕ ಪ್ರಾಂತ ರೈತ ಸಂಘ ಉತ್ತರ ಕನ್ನಡ ಜಿಲ್ಲಾ ಸಮಿತಿಯು ತೀವ್ರವಾಗಿ ವಿರೋಧಿಸುತ್ತದೆ. ಈ ಯೋಜನೆಯ ಸಾಧಕ ಬಾಧಕಗಳ ವೈಜ್ಞಾನಿಕ ಅಧ್ಯಯನ ಮಾಹಿತಿಯುಳ್ಳ ವರದಿ ಜಿಲ್ಲಾಡಳಿತ ಬಿಡುಗಡೆ ಮಾಡಬೇಕು ಎಂದು ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಾಂತಾರಾಮ ನಾಯಕ ತಿಳಿಸಿದ್ದಾರೆ.
ಕಾಳಿ ಜಲವಿದ್ಯುತ್, ಕೈಗಾ ಅಣು ವಿದ್ಯುತ್ ಸ್ಥಾವರ, ನೌಕಾ ನೆಲೆ , ಕೊಂಕಣ ರೈಲ್ವೆ ಸೇರಿದಂತೆ ಅನೇಕ ಯೋಜನೆಗಳಿಗೆ ಈಗಾಗಲೇ ಸಾಕಷ್ಟು ಭೂಮಿ ಕಳೆದುಕೊಂಡಿದೆ. ಹಾರ್ನಬಿಲ್, ಸಿಂಗಳಿ ತಳಿಗಳನ್ನು ಒಳಗೊಂಡು ವಿವಿಧ ಪ್ರಬೇಧದ ವನ್ಯಜೀವಿ ಸಂರಕ್ಷಿತ ತಾಣ ಹೊಂದಿದೆ. ಮುಖ್ಯವಾಗಿ ಅರಣ್ಯವಾಸಿಗಳ ಬದುಕು ದುಸ್ತರವಾಗಿದೆ. ಕೃಷಿಯನ್ನೇ ನಂಬಿ ಜಿಲ್ಲೆಯ ಆದಾಯ ಹೆಚ್ಚಿಸುತ್ತಿರುವ ರೈತರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸಾಗುವಳಿ ಯೋಗ್ಯ ಅರಣ್ಯ ಭೂಮಿಯಲ್ಲಿ ಅತಿಕ್ರಮಣ ಮಾಡಿಕೊಂಡು ಜೀವನ ನಿರ್ವಹಿಸುತ್ತಿರುವ ಹಾಗೂ ದೇಶದ ಅಭಿವೃದ್ಧಿಗೆ ಕೊಡುಗೆ ನೀಡುತ್ತಿರುವ ಅರಣ್ಯ ಅತಿಕ್ರಮಣದಾರರ ಹಕ್ಕುಪತ್ರ ಬೇಡಿಕೆ ಅರಣ್ಯ ರೋದನವಾಗಿದೆ ಎಂದಿದ್ದಾರೆ.
ಪರಿಸರ ತಜ್ಞರ ಅಭಿಪ್ರಾಯದಂತೆ ಈ ವಿಶಾಲವಾದ ಘಟ್ಟ ಪ್ರದೇಶದಲ್ಲಿ ಭೂಕುಸಿತ ಪದೇ ಪದೇ ಸಂಭವಿಸುತ್ತಲೇ ಇದೆ. ಆದ್ದರಿಂದ ಶರಾವತಿ ಭೂಗತ ವಿದ್ಯುತ್ ಯೋಜನೆ ಕೈಬೀಡಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.