ADVERTISEMENT

ಶಿರಸಿ: ನದಿ ತಿರುವು ಯೋಜನೆಗೆ ತೀವ್ರ ವಿರೋಧ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2025, 7:10 IST
Last Updated 6 ಅಕ್ಟೋಬರ್ 2025, 7:10 IST
ಶಿರಸಿ ತಾಲ್ಲೂಕಿನ ಭೈರುಂಬೆಯಲ್ಲಿ ಜೀವವೈವಿಧ್ಯ ಸಮಿತಿಯ ಆಶ್ರಯದಲ್ಲಿ ನಡೆದ ಜೀವ ಸಂಕುಲ ಉಳಿಸಿ ಕಾರ್ಯಕ್ರಮದಲ್ಲಿ ಅನಂತ ಹೆಗಡೆ ಅಶೀಸರ ಮಾತನಾಡಿದರು
ಶಿರಸಿ ತಾಲ್ಲೂಕಿನ ಭೈರುಂಬೆಯಲ್ಲಿ ಜೀವವೈವಿಧ್ಯ ಸಮಿತಿಯ ಆಶ್ರಯದಲ್ಲಿ ನಡೆದ ಜೀವ ಸಂಕುಲ ಉಳಿಸಿ ಕಾರ್ಯಕ್ರಮದಲ್ಲಿ ಅನಂತ ಹೆಗಡೆ ಅಶೀಸರ ಮಾತನಾಡಿದರು   

ಶಿರಸಿ: ತಾಲ್ಲೂಕಿನ ಭೈರುಂಬೆಯಲ್ಲಿ ಜೀವವೈವಿಧ್ಯ ಸಮಿತಿಯ ಆಶ್ರಯದಲ್ಲಿ ಶನಿವಾರ ನಡೆದ ಜೀವ ಸಂಕುಲ ಉಳಿಸಿ ಕಾರ್ಯಕ್ರಮದಲ್ಲಿ ಬೇಡ್ತಿ ಮತ್ತು ವರದಾ ನದಿ ಜೋಡಣೆ ಯೋಜನೆಯ ಕುರಿತಾಗಿ ತೀವ್ರ ಜನಾಕ್ರೋಶ ವ್ಯಕ್ತವಾಯಿತು.

ರಾಜ್ಯ ಜೀವ ವೈವಿಧ್ಯ ಮಂಡಳಿ ನಿಕಟಪೂರ್ವ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಕಾರ್ಯಕ್ರಮ ಉದ್ಘಾಟಿಸಿ, ‘ಹಲವಾರು ಯೋಜನೆಗಳಿಗೆ ನಮ್ಮ ಜಿಲ್ಲೆಯ ಅರಣ್ಯ ಪ್ರದೇಶ, ಜೀವ ಸಂಕುಲಗಳು ಬಲಿಯಾಗಿವೆ. ಪರಿಸರಕ್ಕೆ ಮಾರಕವಾದ ಯೋಜನೆಗಳು ಖಂಡಿತ ನಮಗೆ ಬೇಡ’ ಎಂದರು. 

ಸ್ವರ್ಣವಲ್ಲೀ ಮಹಾ ಸಂಸ್ಥಾನದ ಅಧ್ಯಕ್ಷ ವಿ.ಎನ್.ಹೆಗಡೆ ಬೊಮ್ಮನಳ್ಳಿ ಮಾತನಾಡುತ್ತಾ, ‘ಮುಂಬರುವ ದಿನಗಳಲ್ಲಿ ಜೀವಸಂಕುಲಗಳನ್ನು ಉಳಿಸುವ ನಿಟ್ಟಿನಲ್ಲಿ ಸ್ವರ್ಣವಲ್ಲಿ ಸ್ವಾಮೀಜಿ ನೇತೃತ್ವದಲ್ಲಿ ನಾವೆಲ್ಲ ಸಂಘಟಿತರಾಗಿ ಹೋರಾಡೋಣ’ ಎಂದರು.

ADVERTISEMENT

ನಿವೃತ್ತ ಮುಖ್ಯಾಧ್ಯಾಪಕ ಆರ್.ಎಸ್.ಹೆಗಡೆ ಭೈರುಂಬೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ  ಮಾತನಾಡಿ, ‘ಅಂತರ್ಜಲ ಮಟ್ಟ ಕುಸಿದ ಹಿನ್ನೆಲೆಯಲ್ಲಿ ಮಳೆಗಾಲ ಮುಗಿಯುತ್ತಿದ್ದಂತೆ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗಿ ಹೋಗುತ್ತಿದೆ. ಅಂದಾಗ ಒಡ್ಡು ಹಾಕಿ ನೀರು ಒಯ್ಯುವುದು ಅಸಾಧ್ಯದ ಮಾತು. ವ್ಯರ್ಥ ನಿಷ್ಪ್ರಯೋಜಕ ಯೋಜನೆಯಾಗಿ ಹೋಗುತ್ತದೆ, ಜನರಿಗೆ ಗೊಂದಲ, ಕೋಟ್ಯಂತರ ರೂಪಾಯಿ ಅಪವ್ಯಯ. ಈ ವಾಸ್ತವವನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವುದು ಅವಶ್ಯವಾಗಿದೆ’ ಎಂದರು.

ಪ್ರಮುಖರಾದ ಎನ್.ಎನ್.ಹೆಗಡೆ ಕಣ್ಣಿಮನೆ, ಡಾ.ಜಿ.ವಿ.ಹೆಗಡೆ ಹುಳಗೋಳ, ಸುರೇಶ ಹಕ್ಕಿಮನೆ, ಸುರೇಶ ಹೆಗಡೆ ಹುಳಗೋಳ, ಮಹಾಬಲೇಶ್ವರ ಗಡಿಕೈ ಸಂವಾದದಲ್ಲಿ ಪಾಲ್ಗೊಂಡರು. ಪಂಚಾಯಿತಿ ಸದಸ್ಯ ನಾಗಪ್ಪ ಪಟಗಾರ ಗುಂಡಿಗದ್ದೆ ಉಪಸ್ಥಿತರಿದ್ದರು. ಅನಂತ ಭಟ್ ಹುಳಗೋಳ ಸ್ವಾಗತಿಸಿದರು. ಭೈರುಂಬೆ  ಜೀವವೈವಿಧ್ಯ ಸಮಿತಿಯ ಕಿರಣ ಭಟ್ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.