ADVERTISEMENT

ಶಿರಸಿ: ಮನೆಗೆಲಸ ಮುಗಿಸಿ ಮಹಿಳಾ ಕಾರ್ಯಕರ್ತೆಯರಿಂದ ಮತಯಾಚನೆ

ರಾಜೇಂದ್ರ ಹೆಗಡೆ
Published 17 ಏಪ್ರಿಲ್ 2024, 4:57 IST
Last Updated 17 ಏಪ್ರಿಲ್ 2024, 4:57 IST
ಶಿರಸಿಯ ಗ್ರಾಮೀಣ ಭಾಗದಲ್ಲಿ ರಾಷ್ಟ್ರೀಯ ಪಕ್ಷದ ಮಹಿಳಾ ಪದಾಧಿಕಾರಿಗಳು ಮಹಿಳಾ ಮತದಾರರ ಸಭೆ ನಡೆಸುತ್ತಿರುವುದು
ಶಿರಸಿಯ ಗ್ರಾಮೀಣ ಭಾಗದಲ್ಲಿ ರಾಷ್ಟ್ರೀಯ ಪಕ್ಷದ ಮಹಿಳಾ ಪದಾಧಿಕಾರಿಗಳು ಮಹಿಳಾ ಮತದಾರರ ಸಭೆ ನಡೆಸುತ್ತಿರುವುದು   

ಶಿರಸಿ: ಮಲೆನಾಡು ಶಿರಸಿಯಲ್ಲಿ ಬಿಸಿಲಿನ ಧಗೆ ನೆತ್ತಿ ಸುಡುತ್ತಿದ್ದು, ವಿವಿಧ ಪಕ್ಷಗಳ ಮಹಿಳಾ ಕಾರ್ಯಕರ್ತೆಯರು ಬಿಸಿಲೇರುವ ಮುನ್ನ ಹಾಗೂ ಬಿಸಿಲು ಆರಿದ ಮೇಲೆ ಪಕ್ಷದ ಅಭ್ಯರ್ಥಿ ಪರ ಮತಯಾಚಿಸುತ್ತಿದ್ದಾರೆ. 

ಪ್ರಸ್ತುತ ಬಿಸಿಲ ತಾಪ ಲೋಕಸಭಾ ಚುನಾವಣಾ ಪ್ರಚಾರದ ಮೇಲೆ ನೇರ ಪರಿಣಾಮ ಬೀರುತ್ತಿದೆ. ಅಭ್ಯರ್ಥಿಗಳು ಮತ್ತು ಕಾರ್ಯಕರ್ತರು ಗೆಲುವಿಗಾಗಿ ಈ ಬಾರಿ ಬೆವರು ಹರಿಸಲೇಬೇಕಿದೆ. ತಾಲ್ಲೂಕಿನಲ್ಲಿ ಸರಾಸರಿ 38 ಡಿಗ್ರಿ ಸೆಲ್ಸಿಯಸ್‌ಗೂ ಹೆಚ್ಚಿನ ಬಿಸಿಲು ಮತಬೇಟೆಗೆ ಇಳಿದವರನ್ನು ಹೈರಾಣಾಗಿಸಿದೆ.

ಹಿಂದಿನ ಚುನಾವಣೆಗಳ ಸಂದರ್ಭದಲ್ಲೂ ಈ ಮಾದರಿಯಲ್ಲಿ ಪ್ರಖರ ಬಿಸಿಲು ಇದ್ದರೂ ಆಗಾಗ್ಗೆ ಮಳೆರಾಯ ಕೃಪೆ ತೋರಿ ಭೂಮಿಯನ್ನು ತಂಪು ಮಾಡುತ್ತಿದ್ದ ಕಾರಣ ಹಗಲಿನ ಪ್ರಚಾರ ರಾಜಕೀಯ ಪಕ್ಷಗಳ ಪ್ರಮುಖರಿಗೆ, ಕಾರ್ಯಕರ್ತರಿಗೆ ತ್ರಾಸದಾಯಕ ಅನ್ನಿಸುತ್ತಿರಲಿಲ್ಲ. ಆದರೆ ಈಗಿನ ಪರಿಸ್ಥಿತಿ ಬೇರೆಯೇ ಇದೆ.

ADVERTISEMENT

ಉತ್ತರ ಕನ್ನಡದ ಅಲ್ಲಲ್ಲಿ ಮಳೆ ಆಗುತ್ತಿದ್ದರೂ ಹಗಲಿನಲ್ಲಿ ತಂಪಿನ ವಾತಾವರಣ ಕಂಡುಬರುತ್ತಿಲ್ಲ. ಸುಡುವ ಬಿಸಿಲು, ಮೈ ತೋಯಿಸುವ ಬೆವರಿನ ಜತೆಯಲ್ಲೇ ಪ್ರಚಾರ ಕಾರ್ಯ ನಡೆಸುವ ಅನಿವಾರ್ಯತೆ ಬಂದೊದಗಿದೆ.  ಹೀಗಾಗಿ ಬಿಸಿಲ ತಾಪದಿಂದ ತಪ್ಪಿಸಿಕೊಳ್ಳುವ ಜತೆ ಪಕ್ಷದ ಅಭ್ಯರ್ಥಿ ಪರ ಪ್ರಚಾರವೂ ಮಾಡಬೇಕೆಂಬ ಉದ್ದೇಶದಿಂದ ಮನೆಗೆಲಸ ಮುಗಿಸಿ ಮಹಿಳಾ ಕಾರ್ಯಕರ್ತೆಯರು ಪಕ್ಷದ ಕೆಲಸದಲ್ಲಿ ತೊಡಗುತ್ತಿದ್ದಾರೆ.

‘ಮತದಾನಕ್ಕೆ ಇನ್ನು ಕೆಲವು ದಿನಗಳಷ್ಟೇ ಬಾಕಿ ಇದೆ. ಹಾಗಾಗಿ ಉಳಿದಿರುವ ಅಲ್ಪ ಅವಧಿಯಲ್ಲಿ ಕ್ಷೇತ್ರದ ಎಲ್ಲಾ ಮತದಾರರನ್ನು ತಲುಪಿ ಮತಯಾಚನೆ ನಡೆಸಲು ಎಲ್ಲಾ ರಾಜಕೀಯ ಪಕ್ಷಗಳು ಯೋಜನೆ ರೂಪಿಸಿದ್ದರೂ, ಬಿಸಿಲಿನ ತಾಪದಿಂದಾಗಿ ಇದು ಕಾರ್ಯರೂಪಕ್ಕೆ ಬರಲು ಅಡ್ಡಿಯಾಗುತ್ತಿದೆ.  ಹಾಗಾಗಿ ಹಗಲಿನಲ್ಲಿ ಹೆಚ್ಚಾಗಿ ಕೆಲವು ಪುರುಷ ಕಾರ್ಯಕರ್ತರು ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ. ಅವರು ಕೂಡ ನೆರಳಿಗಾಗಿ ಟೋಪಿ, ಕೊಡೆಗಳು, ತಮ್ಮ ಪಕ್ಷಗಳ ಶಲ್ಯಗಳನ್ನೇ ಆಶ್ರಯಿಸುವುದು ಸಾಮಾನ್ಯವಾಗಿದೆ. ಮಹಿಳಾ ಕಾರ್ಯಕರ್ತೆಯರು ಬೆಳಿಗ್ಗೆ ಮತ್ತು ಸಂಜೆ ತಮ್ಮ ಮನೆಗೆಲಸ ಮುಗಿಸಿ ಪಕ್ಷದ ಕೆಲಸವನ್ನು ಪ್ರಾಮಾಣಿಕವಾಗಿ ಮುಗಿಸುತ್ತಾರೆ’ ಎಂಬುದು ಪ್ರಚಾರದಲ್ಲಿ ತೊಡಗಿದವರ ಮಾತಾಗಿದೆ. 

‘ಮಧ್ಯಾಹ್ನದ ಹೊತ್ತು ಮನೆ ಮನೆ ಭೇಟಿಗಿಂತ ಬೆಳಿಗ್ಗೆ ಅಥವಾ ಸಂಜೆ ಹಮ್ಮಿಕೊಂಡರೆ ಸೂಕ್ತ ಎನ್ನುವ ನಿರ್ಧಾರಕ್ಕೆ ಕೆಲವು ಪ್ರಮುಖರು ಬಂದಿದ್ದಾರೆ. ಇದರಿಂದಾಗಿ ಸೂರ್ಯ ತಾಪದಿಂದ ತಪ್ಪಿಸಿಕೊಳ್ಳುವುದರ ಜತೆಗೆ ಮತದಾರರ ಭೇಟಿಯೂ ಸುಲಭವಾಗುತ್ತದೆ. ಈ ಸಮಯದಲ್ಲಿ ಬಹುತೇಕರು ಮನೆಯಲ್ಲಿ ಇರುತ್ತಾರೆ. ಹಾಗಾಗಿ ಕುಟುಂಬದ ಎಲ್ಲಾ ಸದಸ್ಯರನ್ನು ಒಟ್ಟಿಗೆ ಮಾತನಾಡಿಸಬಹುದು. ಪಕ್ಷ ಮತ್ತು ಅಭ್ಯರ್ಥಿಗಳ ಬಗ್ಗೆ ವಿವರವಾಗಿ ಹೇಳಿಕೊಳ್ಳಲು ಅವಕಾಶ ಸಿಗುತ್ತದೆ’ ಎನ್ನುವುದು ಕಾರ್ಯಕರ್ತರ ಅಭಿಪ್ರಾಯ.

'ಮನೆ ಮನೆಗೆ ಮತಯಾಚನೆಗೆ ತೆರಳುವ ಸಂದರ್ಭದಲ್ಲಿ ಮಹಿಳಾ ಮತದಾರರ ಜತೆ ವ್ಯವಹರಿಸಲು ಮಹಿಳಾ ಕಾರ್ಯಕರ್ತೆಯರಿಗೆ ಸುಲಭವಾಗುತ್ತದೆ. ಕೆಲವು ಮನೆಗಳಲ್ಲಿ ಮಹಿಳೆಯರು ಮಾತ್ರ ಇರುತ್ತಾರೆ. ಇಂತಹ ಸಂದರ್ಭದಲ್ಲಿ ಕಾರ್ಯಕರ್ತೆಯರು ಹೆಚ್ಚು ಇದ್ದರೆ ಅನುಕೂಲ. ಹೀಗಾಗಿ ಪ್ರಚಾರಕ್ಕೆ ಮಹಿಳಾ ಕಾರ್ಯಕರ್ತರನ್ನು ಬಳಸಿಕೊಳ್ಳಲಾಗುತ್ತಿದೆ. ಬಿಜೆಪಿ, ಕಾಂಗ್ರೆಸ್‍ನಿಂದ ಸುಮಾರು 8 ಸಾವಿರ ಕಾರ್ಯಕರ್ತೆಯರು ಪ್ರಚಾರದಲ್ಲಿ ತೊಡಗಿದ್ದಾರೆ’ ಎಂಬುದು ಅಖಾಡದಲ್ಲಿರುವ ರಾಷ್ಟ್ರೀಯ ಪಕ್ಷದ ಅಭ್ಯರ್ಥಿಗಳ ಮಾತಾಗಿದೆ.

ಸಂಜೆ ಅಥವಾ ಬೆಳಿಗ್ಗೆ ಪ್ರಚಾರಕ್ಕೆ ತೆರಳಲು ಸೂಕ್ತ ಸಮಯ. ಕೆಲಸಕ್ಕೆ ತೆರಳುವವರು ಈ ವೇಳೆಯಲ್ಲಿ ಮನೆಯಲ್ಲಿ ಇರುವುದರಿಂದಲೂ ಎಲ್ಲರ ಭೇಟಿ ಸಾಧ್ಯವಾಗುತ್ತದೆ

-ಉಷಾ ಹೆಗಡೆ,  ಬಿಜೆಪಿ ತಾಲ್ಲೂಕು ಗ್ರಾಮೀಣ ಘಟಕದ ಅಧ್ಯಕ್ಷೆ ಶಿರಸಿ

ಶಿರಸಿ ತಾಲ್ಲೂಕಿನಲ್ಲಿ 3500ಕ್ಕೂ ಹೆಚ್ಚು ಮಹಿಳಾ ಕಾರ್ಯಕರ್ತೆಯರು ಪ್ರಚಾರದಲ್ಲಿ ತೊಡಗಿದ್ದಾರೆ. ಬೆಳ್ಳಂಬೆಳಿಗ್ಗೆ ಮನೆ ಕೆಲಸ ಮುಗಿಸಿ ಪ್ರಚಾರ ಕಾರ್ಯಕ್ಕೆ ಬರುತ್ತಿದ್ದಾರೆ

-ಜ್ಯೋತಿಗೌಡ ಪಾಟೀಲ ಕಾಂಗ್ರೆಸ್ ಮುಖಂಡೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.