
ಶಿರಸಿ: ತಾಲ್ಲೂಕಿನ ಹುಲೇಕಲ್ ಹೋಬಳಿ ಮಟ್ಟದ ಜನಸ್ಪಂದನ ಸಭೆಯಲ್ಲಿ ಶಾಸಕ ಭೀಮಣ್ಣ ನಾಯ್ಕ ಅವರು ಸಾರ್ವಜನಿಕರಿಂದ ನೂರಾರು ಅಹವಾಲುಗಳನ್ನು ಸ್ವೀಕರಿಸಿದ್ದಲ್ಲದೆ, ಹಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸುವ ಮೂಲಕ ಜನರ ಸಂಕಷ್ಟಕ್ಕೆ ಸ್ಪಂದಿಸಿದರು.
ಆಡಳಿತವನ್ನು ಜನರ ಮನೆಬಾಗಿಲಿಗೆ ಕೊಂಡೊಯ್ಯುವ ಮತ್ತು ಸ್ಥಳೀಯ ಸಮಸ್ಯೆಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸುವ ನಿಟ್ಟಿನಲ್ಲಿ ಮಂಗಳವಾರ ಹುಲೇಕಲ್‍ನಲ್ಲಿ ನಡೆದ ಸಭೆಯಲ್ಲಿ ಹೋಬಳಿಯ ನೂರಾರು ಗ್ರಾಮಸ್ಥರು ಪಾಲ್ಗೊಂಡು ತಮ್ಮ ಅಹವಾಲು ಸಲ್ಲಿಸಿದರು. ಪ್ರಮುಖವಾಗಿ ರಸ್ತೆ ಸಂಪರ್ಕದ ಅವ್ಯವಸ್ಥೆ, ಕುಡಿಯುವ ನೀರಿನ ಅಭಾವ, ಪದೇ ಪದೇ ಉಂಟಾಗುತ್ತಿರುವ ವಿದ್ಯುತ್ ವ್ಯತ್ಯಯ, ಪಡಿತರ ಚೀಟಿ ತಿದ್ದುಪಡಿ ಹಾಗೂ ಕಂದಾಯ ಇಲಾಖೆಗೆ ಸಂಬಂಧಿಸಿದ ಹತ್ತಾರು ಸಮಸ್ಯೆಗಳ ಕುರಿತು ಅರ್ಜಿಗಳು ಸಲ್ಲಿಕೆಯಾದವು.
ಪ್ರತಿಯೊಂದು ಅರ್ಜಿಯನ್ನು ತಾಳ್ಮೆಯಿಂದ ಆಲಿಸಿದ ಶಾಸಕರು, ತಕ್ಷಣ ಬಗೆಹರಿಸಬಹುದಾದ ಸಮಸ್ಯೆಗಳಿಗೆ ಸಂಬಂಧಪಟ್ಟ ಅಧಿಕಾರಿಗಳ ಮೂಲಕ ಸ್ಥಳದಲ್ಲೇ ಪರಿಹಾರ ಒದಗಿಸಿದರು. ಬಹಳಷ್ಟು ದಿನಗಳಿಂದ ನನೆಗುದಿಗೆ ಬಿದ್ದಿದ್ದ ಸಣ್ಣಪುಟ್ಟ ಕೆಲಸಗಳನ್ನು ತಕ್ಷಣವೇ ಪೂರ್ಣಗೊಳಿಸಲು ಮತ್ತು ದಾಖಲೆಗಳ ಕೊರತೆಯಿಂದ ಬಾಕಿ ಉಳಿದಿರುವ ಅರ್ಜಿಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಮಾರ್ಗದರ್ಶನ ನೀಡಿದರು.
ಈ ಸಂದರ್ಭದಲ್ಲಿ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಭೀಮಣ್ಣ ನಾಯ್ಕ ಅವರು, ‘ಅಧಿಕಾರಿಗಳು ಕೇವಲ ಕಚೇರಿಗಳಿಗೆ ಸೀಮಿತವಾಗಬಾರದು. ಗ್ರಾಮೀಣ ಭಾಗದ ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ, ಅವರು ಕೆಲಸಗಳಿಗಾಗಿ ನಗರದ ಕಚೇರಿಗಳಿಗೆ ಪದೇ ಪದೇ ಅಲೆದಾಡುವುದನ್ನು ತಪ್ಪಿಸಬೇಕು’ ಎಂದು ಹೇಳಿದರು.
ಸಭೆಯಲ್ಲಿ ಕಂದಾಯ ಇಲಾಖೆ, ಪಂಚಾಯತ್ ರಾಜ್, ಪೊಲೀಸ್ ಇಲಾಖೆ, ಹೆಸ್ಕಾಂ, ಆರೋಗ್ಯ ಮತ್ತು ಶಿಕ್ಷಣ ಇಲಾಖೆಯ ತಾಲ್ಲೂಕು ಮಟ್ಟದ ಹಿರಿಯ ಅಧಿಕಾರಿಗಳು ಹಾಗೂ ಸ್ಥಳೀಯ ಪಂಚಾಯಿತಿ ಜನಪ್ರತಿನಿಧಿಗಳು ಇದ್ದರು. ಸಭೆಯ ಅಂತ್ಯದಲ್ಲಿ ವಿವಿಧ ಯೋಜನೆಗಳ ಅರ್ಹ ಫಲಾನುಭವಿಗಳಿಗೆ ಸೌಲಭ್ಯಗಳ ಆದೇಶ ಪತ್ರಗಳನ್ನು ವಿತರಿಸಲಾಯಿತು.
ಸರ್ಕಾರದ ಪ್ರತಿಯೊಂದು ಜನಪರ ಯೋಜನೆಗಳು ಮತ್ತು ಸೌಲಭ್ಯಗಳು ಪ್ರತಿಯೊಬ್ಬ ಅರ್ಹ ಫಲಾನುಭವಿಗೆ ತಲುಪುವಂತೆ ನೋಡಿಕೊಳ್ಳುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ.– ಭೀಮಣ್ಣ ನಾಯ್ಕ, ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.