ADVERTISEMENT

ಪೂರ್ಣ ಪರಿಹಾರಕ್ಕೆ ‘ಅತಿಕ್ರಮಣ’ ಅಡ್ಡಿ

ಧರೆ ಕುಸಿತದಿಂದ 30ಕ್ಕೂ ಹೆಚ್ಚು ಮನೆಗಳಿಗೆ ಎದುರಾಗಿರುವ ಆತಂಕ

ರಾಜೇಂದ್ರ ಹೆಗಡೆ
Published 8 ಜುಲೈ 2025, 4:09 IST
Last Updated 8 ಜುಲೈ 2025, 4:09 IST
ಶಿರಸಿ ನಗರಸಭೆ ವ್ಯಾಪ್ತಿಯ ಮರಾಠಿಕೊಪ್ಪ ವಾರ್ಡ್‍ನಲ್ಲಿ ಧರೆಯಂಚು ಕುಸಿದು ಮನೆಗೆ ಧಕ್ಕೆಯಾಗಿದೆ
ಶಿರಸಿ ನಗರಸಭೆ ವ್ಯಾಪ್ತಿಯ ಮರಾಠಿಕೊಪ್ಪ ವಾರ್ಡ್‍ನಲ್ಲಿ ಧರೆಯಂಚು ಕುಸಿದು ಮನೆಗೆ ಧಕ್ಕೆಯಾಗಿದೆ   

ಶಿರಸಿ: ಅತಿಕ್ರಮಣ ಜಾಗದಲ್ಲಿ ಮನೆ ನಿರ್ಮಿಸಿಕೊಂಡಿದ್ದು, ಮಳೆಯ ಕಾರಣಕ್ಕೆ ಧರೆ ಕುಸಿತವಾಗಿ ಮನೆ, ಜಾಗ ಎರಡೂ ನಾಶವಾಗುತ್ತಿವೆ. ಆದರೆ ಸಂತ್ರಸ್ತರಿಗೆ ಸರ್ಕಾರದಿಂದ ಮನೆಗಳಾಗಲೀ ಜಾಗಕ್ಕಾಗಲೀ ಪೂರ್ಣ ಪ್ರಮಾಣದ ಪರಿಹಾರ ಪಡೆಯಲು ‘ಅತಿಕ್ರಮಣ’ ನಿಯಮ ಅಡ್ಡಗೋಡೆಯಾಗಿದೆ.

ನಗರಸಭೆ ವ್ಯಾಪ್ತಿಯ ಗಣೇಶನಗರ ಹಾಗೂ ಮರಾಠಿಕೊಪ್ಪ ವಾರ್ಡ್‍ಗಳಲ್ಲಿ ಅರಣ್ಯಭೂಮಿ, ಕಂದಾಯ ಭೂಮಿ ಅತಿಕ್ರಮಣಕಾರರೇ ಹೆಚ್ಚಿದ್ದಾರೆ. ಈ ಭಾಗದ ಶೇ 50ಕ್ಕೂ ಹೆಚ್ಚು ಮನೆಗಳು ಅತಿಕ್ರಮಣ ಜಾಗದಲ್ಲಿವೆ. ಧರೆಯಂಚಿನ ಪ್ರದೇಶಗಳಲ್ಲೂ ನೂರಾರು ಮನೆಗಳಿವೆ. ಅವುಗಳಲ್ಲಿ ಕೆಲವು ಅಪಾಯಕಾರಿ ಸ್ಥಿತಿಯಲ್ಲಿದ್ದು, ಬೀಳುವ ಹಂತ ತಲುಪಿವೆ. ಈ ಮನೆಗಳಿಗೆ ತೆರಳಲು ಸರಿಯಾದ ರಸ್ತೆಗಳೂ ಇಲ್ಲ.

ಧರೆಯ ಮೇಲೆ, ಕೆಳಗೆ ಜಾಗ ಅತಿಕ್ರಮಿಸಿ ಮನೆ ನಿರ್ಮಿಸಿಕೊಂಡ ಬಡ ಜನರು, ಅತಿಯಾದ ಮಳೆಯಿಂದ ಧರೆ ಕುಸಿತದ ಕಾರಣಕ್ಕೆ ಮನೆಯ ಜತೆ ಜಾಗವನ್ನೂ ಕಳೆದುಕೊಳ್ಳುತ್ತಿದ್ದಾರೆ. ಗಣೇಶನಗರ, ಮರಾಠಿಕೊಪ್ಪದ 30ಕ್ಕೂ ಹೆಚ್ಚು ಜನರು ಸೂರಿನ ಜತೆ ಜಾಗ ಕಳೆದುಕೊಳ್ಳುವ ಆತಂಕದ ಸ್ಥಿತಿ ಎದುರಿಸುತ್ತಿದ್ದಾರೆ. ಧರೆ ಜರಿದು ಹೋದರೆ ಮತ್ತೆ ಅಲ್ಲಿ ಏನೂ ಮಾಡಲಾಗದ ಸ್ಥಿತಿ ನಿರ್ಮಾಣ ಆಗುತ್ತದೆ. ‘ಅತಿಕ್ರಮಣ’ ಎಂಬ ಕಾರಣಕ್ಕೆ ಅವರಿಗೆ ಪರಿಹಾರವೂ ಸಿಗುತ್ತಿಲ್ಲ.

ADVERTISEMENT

‘ಗಣೇಶನಗರದ ಮಾರುತಿ ಗಲ್ಲಿಯಲ್ಲಿ 9, ಗೋಸಾವಿ ಗಲ್ಲಿಯಲ್ಲಿ 6 ಹಾಗೂ ಮರಾಠಿಕೊಪ್ಪ ಜೋಡು ಅಶ್ವತ್ಥ ಕಟ್ಟೆ ಹಿಂಭಾಗದಲ್ಲಿ 6 ಮನೆಗಳ ಜನರು ಧರೆ ಕುಸಿತದ ಕಾರಣಕ್ಕೆ ಆತಂಕದಲ್ಲಿದ್ದಾರೆ. ಇವರಿಗೆ ಮನೆ ನಾಶವಾದರೆ ಮಾತ್ರ ಪರಿಹಾರ ನೀಡಲು ಅವಕಾಶವಿದೆ. ಅದಕ್ಕಿಂತ ಹೆಚ್ಚಿನ ಪರಿಹಾರಕ್ಕೆ ನಿಯಮಾವಳಿ ಅಡ್ಡಿಯಾಗಿದೆ. ಹೀಗಾಗಿ ಇವರಿಗೆ ಈಗಾಗಲೇ ಸ್ಥಳಾಂತರಗೊಳ್ಳುವಂತೆ ನೋಟಿಸ್ ಕೂಡ ನೀಡಲಾಗಿದೆ. ಆದರೆ ಬಹುತೇಕ ಸಂತ್ರಸ್ತರು ಮನೆ ಬಿಟ್ಟು ಬರಲು ಒಪ್ಪುತ್ತಿಲ್ಲ. ಇದು ನಗರಾಡಳಿತಕ್ಕೆ ತಲೆನೋವಾಗಿದೆ. ಸಂತ್ರಸ್ತರ ಮನವೊಲಿಕೆಗೆ ಪ್ರತ್ನಿಸಲಾಗುತ್ತಿದೆ’ ಎಂಬುದು ನಗರಸಭೆ ಅಧಿಕಾರಿಯೊಬ್ಬರ ಮಾತು.

‘ಧರೆ ಕುಸಿತದ ಕಾರಣಕ್ಕೆ ಮನೆ ಸಂಪೂರ್ಣ ನಾಶವಾದರೆ ₹1 ಲಕ್ಷದವರೆಗೆ ಪರಿಹಾರ ನೀಡಲಾಗುತ್ತದೆ. ಮನೆಯ ಜಾಗ ಅತಿಕ್ರಮಣ ವ್ಯಾಪ್ತಿಯಲ್ಲಿದ್ದರೆ ಅದಕ್ಕೆ ಪರಿಹಾರ ನೀಡಲು ಅವಕಾಶವಿಲ್ಲ. ಒಂದೊಮ್ಮೆ ಮಾಲ್ಕಿ ಜಾಗವಾಗಿದ್ದರೆ ಮಾತ್ರ ಅಂಥ ಸಂತ್ರಸ್ತರಿಗೆ ₹1.5 ಲಕ್ಷದವರೆಗೆ ಪರಿಹಾರ ನೀಡಲು ನಿಯಮಾವಳಿಯಲ್ಲಿ ಅವಕಾಶವಿದೆ. ನಗರದ ಧರೆಯಂಚಿನಲ್ಲಿ ಅತಂತ್ರ ಸ್ಥಿತಿಯಲ್ಲಿರುವ ಸಂತ್ರಸ್ತರು ಬಹುತೇಕ ಅತಿಕ್ರಮಣಕಾರರೇ ಆಗಿದ್ದಾರೆ’ ಎನ್ನುತ್ತಾರೆ ಅವರು.

‘ಮನೆ ನಷ್ಟದ ಪರಿಹಾರ ಲಭಿಸಿದರೂ ಮನೆಯನ್ನು ಮರು ನಿರ್ಮಿಸಿಕೊಳ್ಳಲು ಜಾಗವೇ ಇಲ್ಲದಂತಾಗಿದೆ. ಬೇರೆ ಜಾಗ ಖರೀದಿಸಲು ನಮಗೆ ಶಕ್ತಿಯಿಲ್ಲ. ಸರ್ಕಾರದಿಂದಲೇ ಪ್ರತ್ಯೇಕ ವ್ಯವಸ್ಥೆ ಮಾಡಬೇಕು’ ಎನ್ನುತ್ತಾರೆ ಸಂತ್ರಸ್ತ ತಿರುಕಪ್ಪ ವಡ್ಡರ.

‘ನಿಯಮಾವಳಿ ಸರಳೀಕರಿಸಿ’

‘ಮೂಲಭೂತ ಹಕ್ಕಿನಲ್ಲಿ ಮನೆಯೂ ಒಂದು. ಆದರೆ ಕಾನೂನು ಅತಿಕ್ರಮಣಕಾರರನ್ನು ಈ ಹಕ್ಕಿನಿಂದ ಹೊರಗಿಡುವ ಕಾರ್ಯ ಮಾಡುತ್ತಿದೆ. ಮಳೆಯಿಂದಾದ ಹಾನಿ ಪರಿಗಣನೆಯಲ್ಲಿ ಅತಿಕ್ರಮಣ ಜಾಗದಲ್ಲಿರುವ ಸಂತ್ರಸ್ತರನ್ನು ಸಮಾನವಾಗಿ ಪರಿಗಣಿಸುವಂತಾಗಬೇಕು. ಪರಿಹಾರ ವಿತರಣೆಯ ನಿಯಮಾವಳಿ ಸರಳೀಕರಿಸುವ ಮೂಲಕ ಅತಿಕ್ರಮಣ ಜಾಗದಲ್ಲಿರುವವರಿಗೆ ಸಾಮಾಜಿಕ ನ್ಯಾಯದಡಿ ಸೂಕ್ತ ಪರಿಹಾರ ಸಿಗುವಂತೆ ಕ್ರಮ ಕೈಗೊಳ್ಳಬೇಕು’ ಎಂಬುದು ಬಹುತೇಕ ಸಂತ್ರಸ್ತರ ಒತ್ತಾಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.