
ಶಿರಸಿ: ತಾಲ್ಲೂಕಿನ ನಗರ ಹಾಗೂ ಗ್ರಾಮೀಣ ಭಾಗಗಳ ಸಮಗ್ರ ಪ್ರಗತಿಗೆ ಒತ್ತು ನೀಡುವ ನಿಟ್ಟಿನಲ್ಲಿ ಶಾಸಕ ಭೀಮಣ್ಣ ನಾಯ್ಕ ಅವರು ಗುರುವಾರ ಅಂದಾಜು ₹3 ಕೋಟಿಗೂ ಅಧಿಕ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅಧಿಕೃತವಾಗಿ ಚಾಲನೆ ನೀಡಿದರು.
ಪಟ್ಟಣದ ಪ್ರಮುಖ ರಸ್ತೆಗಳು ಹಾಗೂ ಗ್ರಾಮೀಣ ರಸ್ತೆಗಳ ಸುಧಾರಣೆಗಾಗಿ ಹಮ್ಮಿಕೊಂಡಿರುವ ಈ ಕಾಮಗಾರಿಗಳ ಭೂಮಿಪೂಜೆಯನ್ನು ಶಾಸಕರು ನೆರವೇರಿಸಿ, ನಿಗದಿತ ಅವಧಿಯೊಳಗೆ ಗುಣಮಟ್ಟದ ಕೆಲಸ ಪೂರೈಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ವಿದ್ಯಾನಗರ ಮತ್ತು ಸಹ್ಯಾದ್ರಿ ಕಾಲೊನಿ ರಸ್ತೆಗಳಿಗಾಗಿ ₹50 ಲಕ್ಷ, ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದ ಮುಂಭಾಗದ ರಸ್ತೆಗಾಗಿ ₹30 ಲಕ್ಷ ಹಾಗೂ ಮರಾರಿಕೊಪ್ಪದ ರಸ್ತೆ ಸುಧಾರಣೆಗೆ ₹20 ಲಕ್ಷಗಳನ್ನು ವ್ಯಯಿಸಲಾಗುತ್ತಿದೆ. ವಿಶೇಷವಾಗಿ ಮುಂಬರುವ ಮಾರಿಕಾಂಬಾ ದೇವಿ ಜಾತ್ರೆಯ ಹಿನ್ನೆಲೆಯಲ್ಲಿ, ಬಿಡ್ಕಿಬಯಲಿನ ಜಾತ್ರಾ ಗದ್ದುಗೆ ಸುತ್ತಲಿನ ರಸ್ತೆಗಳ ಅಭಿವೃದ್ಧಿಗಾಗಿ ₹65 ಲಕ್ಷ ಮೀಸಲಿಡಲಾಗಿದ್ದು, ಭಕ್ತಾದಿಗಳ ಸುಗಮ ಸಂಚಾರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಇದಲ್ಲದೆ ದೊಡ್ಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನರೇಬೈಲ್ ಗ್ರಾಮದ ಒಳಗಿನ ರಸ್ತೆ ಕಾಮಗಾರಿಗೂ ಚಾಲನೆ ನೀಡುವ ಮೂಲಕ ಗ್ರಾಮೀಣ ಮೂಲಸೌಕರ್ಯಕ್ಕೆ ಒತ್ತು ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಭೀಮಣ್ಣ ನಾಯ್ಕ, ‘ಕ್ಷೇತ್ರದ ಮೂಲಸೌಕರ್ಯಗಳ ಅಭಿವೃದ್ಧಿ ತಮ್ಮ ಮೊದಲ ಆದ್ಯತೆಯಾಗಿದೆ’ ಎಂದರು.
‘ರಾಜ್ಯ ಸರ್ಕಾರವು ಐದು ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವುದರ ಜತೆಗೆ, ಅಭಿವೃದ್ಧಿ ಕಾಮಗಾರಿಗಳಿಗೂ ಸಾಕಷ್ಟು ಅನುದಾನ ಬಿಡುಗಡೆ ಮಾಡುತ್ತಿದೆ. ಮಾರಿಕಾಂಬಾ ಜಾತ್ರೆಗೆ ಲಕ್ಷಾಂತರ ಭಕ್ತರು ಆಗಮಿಸುವುದರಿಂದ ನಗರದ ಸೌಂದರ್ಯೀಕರಣ ಮತ್ತು ಸಂಚಾರ ವ್ಯವಸ್ಥೆ ಸುಧಾರಿಸಲು ವಿಶೇಷ ನಿಗಾ ವಹಿಸಲಾಗಿದೆ’ ಎಂದರು.
ಜಿಲ್ಲಾ ಗ್ಯಾರಂಟಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸತೀಶ ನಾಯ್ಕ, ಪೌರಾಯುಕ್ತ ಪ್ರಕಾಶ ಚನ್ನಪ್ಪನವರ ಹಾಗೂ ವಿವಿಧ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಇದ್ದರು.
Quote - ಅಭಿವೃದ್ಧಿ ಎನ್ನುವುದು ನಿಂತ ನೀರಲ್ಲ. ಸರ್ಕಾರದ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಅನುದಾನ ಬಿಡುಗಡೆಗೊಳಿಸಿ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಭೀಮಣ್ಣ ನಾಯ್ಕ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.