ADVERTISEMENT

ಶಿರಸಿ| ಬೀಡಾಡಿ ದನಗಳ ಹಾವಳಿಗೆ ಮುಕ್ತಿ ಎಂದು?

ರಾಜೇಂದ್ರ ಹೆಗಡೆ
Published 26 ಜನವರಿ 2026, 7:13 IST
Last Updated 26 ಜನವರಿ 2026, 7:13 IST
ಶಿರಸಿ ನಗರದ ರಸ್ತೆ ಮಧ್ಯದಲ್ಲಿ ಸಂಚಾರಕ್ಕೆ ತೊಡಕಾಗಿ ನಿಂತಿರುವ ಬೀಡಾಡಿ ದನ
ಶಿರಸಿ ನಗರದ ರಸ್ತೆ ಮಧ್ಯದಲ್ಲಿ ಸಂಚಾರಕ್ಕೆ ತೊಡಕಾಗಿ ನಿಂತಿರುವ ಬೀಡಾಡಿ ದನ   

ಶಿರಸಿ: ನಗರದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಬೀಡಾಡಿ ಜಾನುವಾರುಗಳ ಹಾವಳಿಯನ್ನು ನಿಯಂತ್ರಿಸಲು ನಗರಸಭೆ ಮತ್ತು ಸಂಬಂಧಪಟ್ಟ ಇಲಾಖೆಗಳು ವಿಫಲವಾಗಿದೆ. ತಿಂಗಳ ಹಿಂದೆ ನಡೆದ ಸಭೆಯ ತೀರ್ಮಾನಗಳು ಕೇವಲ ದಾಖಲೆಗಳಿಗೆ ಸೀಮಿತವಾಗಿದ್ದು, ವಾಸ್ತವದಲ್ಲಿ ಯಾವುದೇ ಕ್ರಮ ಜಾರಿಯಾಗಿಲ್ಲದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. 

ನಗರ ವ್ಯಾಪ್ತಿಯಲ್ಲಿ 300ಕ್ಕೂ ಹೆಚ್ಚು ಬೀಡಾಡಿ ಜಾನುವಾರುಗಳಿದ್ದು, ಸಂಚಾರ ದಟ್ಟಣೆ ಮತ್ತು ಸರಣಿ ಅಪಘಾತಗಳಿಗೆ ಕಾರಣವಾಗುತ್ತಿವೆ. ಈ ಹಿನ್ನೆಲೆಯಲ್ಲಿ ನ.18ರಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಶಾಸಕ ಭೀಮಣ್ಣ ನಾಯ್ಕ ಅವರ ಜಂಟಿ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆ ನಡೆಸಲಾಗಿತ್ತು. ನಗರಸಭೆ, ಪೊಲೀಸ್ ಮತ್ತು ಪಶುಸಂಗೋಪನಾ ಇಲಾಖೆಗಳು ಜಂಟಿ ಕಾರ್ಯಾಚರಣೆ ನಡೆಸಿ, ರಸ್ತೆಯಲ್ಲಿರುವ ಜಾನುವಾರುಗಳನ್ನು ವಶಕ್ಕೆ ಪಡೆದು ಕೊಂಡವಾಡೆಗಳಿಗೆ ಸ್ಥಳಾಂತರಿಸಲು ಸೂಚಿಸಲಾಗಿತ್ತು.

ಮಾಲೀಕರು ಜಾನುವಾರುಗಳನ್ನು ಬಿಡಿಸಿಕೊಳ್ಳಲು ಬಂದರೆ ದಿನಕ್ಕೆ ₹250 ರಿಂದ ₹300 ನಿರ್ವಹಣಾ ವೆಚ್ಚ ವಸೂಲಿ ಮಾಡಲು ನಿರ್ಧರಿಸಲಾಗಿತ್ತು. ಆದರೆ, ಈ ಸಭೆ ನಡೆದು ತಿಂಗಳುಗಳು ಕಳೆದರೂ ಕಾರ್ಯಾಚರಣೆ ಮಾತ್ರ ಆರಂಭವಾಗಿಲ್ಲ.

ADVERTISEMENT

‘ಮಾರಿಕಾಂಬಾ ಜಾತ್ರೆ ಸಮೀಪಿಸುತ್ತಿದ್ದು, ಲಕ್ಷಾಂತರ ಭಕ್ತರು ನಗರಕ್ಕೆ ಆಗಮಿಸಲಿದ್ದಾರೆ. ಇಂತಹ ಸಂದರ್ಭದಲ್ಲಿ ರಸ್ತೆ ಮಧ್ಯೆ ಬೀಡು ಬಿಡುವ ಜಾನುವಾರುಗಳಿಂದ ಕಾಲ್ತುಳಿತ ಅಥವಾ ಅಪಘಾತಗಳು ಸಂಭವಿಸುವ ಭೀತಿ ಎದುರಾಗಿದೆ. ನಗರದ ಪ್ರಮುಖ ವೃತ್ತಗಳು ಮತ್ತು ರಸ್ತೆಗಳಲ್ಲಿ ಜಾನುವಾರುಗಳು ಮಲಗುತ್ತಿರುವುದರಿಂದ ವಾಹನ ಸವಾರರು ಪ್ರಾಣಭಯದಲ್ಲಿ ಓಡಾಡುವಂತಾಗಿದೆ. ಬೀಡಾಡಿ ಜಾನುವಾರುಗಳ ಸಗಣಿ ಮತ್ತು ಮೂತ್ರದಿಂದ ರಸ್ತೆಗಳು ಗಲೀಜಾಗುತ್ತವೆ. ಇದು ಜಾತ್ರೆಗೆ ಬರುವ ಭಕ್ತರಿಗೆ ಕಿರಿಕಿರಿ ಉಂಟುಮಾಡುತ್ತದೆ ಮತ್ತು ಸಾಂಕ್ರಾಮಿಕ ರೋಗಗಳಿಗೆ ದಾರಿ ಮಾಡಿಕೊಡುತ್ತದೆ’ ಎಂಬುದು ನಗರ ನಿವಾಸಿ ನಾರಾಯಣ ನಾಯ್ಕ ಮಾತು. 

‘ನಗರದ ಝೂ ಸರ್ಕಲ್‌, ಬಿಡ್ಕಿಬೈಲ್‌, ಅಶ್ವಿನಿ ಸರ್ಕಲ್ ಹಾಗೂ ಟಿಎಸ್‌ಎಸ್ ರಸ್ತೆಗಳಲ್ಲಿ ದನಗಳ ಹಿಂಡು ರಸ್ತೆ ಮಧ್ಯೆಯೇ ಬೀಡುಬಿಡುತ್ತಿವೆ. ಜಾನುವಾರುಗಳ ಕಾದಾಟದಿಂದಾಗಿ ಪಾದಚಾರಿಗಳು ಹಾಗೂ ದ್ವಿಚಕ್ರ ವಾಹನ ಸವಾರರು ಪ್ರತಿನಿತ್ಯ ಅಪಾಯಕ್ಕೆ ಸಿಲುಕುತ್ತಿದ್ದಾರೆ. 2021-22ರಲ್ಲಿ ಅಂದಾಜು 21 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಕೊಂಡವಾಡಿಯು ಬಳಕೆಯಾಗದೆ ಪಾಳು ಬಿದ್ದಿರುವುದು ಸಾರ್ವಜನಿಕ ಹಣದ ದುರ್ಬಳಕೆಗೆ ಸಾಕ್ಷಿಯಾಗಿದೆ’ ಎನ್ನುತ್ತಾರೆ ಅವರು. 

‘ಶಾಸಕರು ಮತ್ತು ಸಂಸದರ ಉಪಸ್ಥಿತಿಯಲ್ಲಿ ನಡೆದ ಸಭೆಯ ನಿರ್ಣಯಗಳೇ ಜಾರಿಯಾಗದಿದ್ದರೆ, ಸಾರ್ವಜನಿಕರಲ್ಲಿ ಆಡಳಿತ ಯಂತ್ರದ ಮೇಲೆ ನಂಬಿಕೆ ಕಡಿಮೆಯಾಗುತ್ತದೆ. ಈ ಕುರಿತು ಇಲಾಖೆ ಮುಖ್ಯಸ್ಥರು ತಕ್ಷಣ ಕ್ರಮವಹಿಸುವ ಅಗತ್ಯವಿದೆ. ಈ ಹಿಂದೆ ಬೀದಿ ನಾಯಿಗಳ ಸಂತಾನಶಕ್ತಿ ಹರಣ ಚಿಕಿತ್ಸೆಯೂ ಕಾಟಾಚಾರಕ್ಕೆ ನಡೆದು ವೈಫಲ್ಯ ಕಂಡಿತ್ತು. ಅದೇ ಹಾದಿಯಲ್ಲಿ ಜಾನುವಾರು ನಿಯಂತ್ರಣವೂ ಸಾಗಬಾರದು’ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ. 

ಸಂಸದರು ಮತ್ತು ಶಾಸಕರು ಜಂಟಿ ಸಭೆ ನಡೆಸಿ ಕಟ್ಟುನಿಟ್ಟಿನ ಆದೇಶ ನೀಡಿ ತಿಂಗಳು ಕಳೆದರೂ ಯಾವುದೇ ಕ್ರಮ ಕೈಗೊಂಡಿಲ್ಲ
ಗಣೇಶ ಭಟ್ ಸಾಮಾಜಿಕ ಕಾರ್ಯಕರ್ತ

ಶೀಘ್ರವೇ ಕಾರ್ಯಾಚರಣೆ

‘ಪಶು ಸಂಗೋಪನೆ ಸ್ವಯಂ ಸೇವಾ ಸಂಸ್ಥೆ ಹಾಗೂ ಸರ್ಕಾರಿ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ದನದ ಮಾಲಿಕರಿಗೆ ವಿಧಿಸುವ ದಂಡ ನಿರ್ವಹಣಾ ವೆಚ್ಚ ಪಡೆಯುವ ಕುರಿತು ತೀರ್ಮಾನ ಕೈಗೊಂಡು ಕಾರ್ಯಾಚರಣೆ ಆರಂಭಿಸಲಾಗಿತ್ತು. ಆದರೆ ಕೆಲವು ತಾಂತ್ರಿಕ ಕಾರಣಕ್ಕೆ ಸ್ಥಗಿತವಾಗಿದ್ದು ಜಾತ್ರೆ ಪೂರ್ವ ಬಿಡಾಡಿ ದನಗಳ ಸ್ಥಳಾಂತರ ಮಾಡಲಾಗುವುದು’ ಎಂದು ಪೌರಾಯುಕ್ತ ಪ್ರಕಾಶ ಚನ್ನಪ್ಪನವರ  ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.