ADVERTISEMENT

ಶಿರಸಿ | ಕಡಬಾಳ ಕದಂಬೇಶ್ವರ ದೇವಸ್ಥಾನದಲ್ಲಿ ಜಾಗರಣೆ: ಅಹೋರಾತ್ರಿ ಯಕ್ಷಗಾನ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2020, 12:03 IST
Last Updated 20 ಫೆಬ್ರುವರಿ 2020, 12:03 IST
ಕದಂಬೇಶ್ವರ ದೇವರು
ಕದಂಬೇಶ್ವರ ದೇವರು   

ಶಿರಸಿ: ತಾಲ್ಲೂಕಿನ ಕಡಬಾಳದ ಕದಂಬೇಶ್ವರ ದೇವಸ್ಥಾನದಲ್ಲಿ ಫೆ.21ರ ಶಿವರಾತ್ರಿಯ ಜಾಗರಣೆ ನಿಮಿತ್ತ ಸೂರ್ಯಾಸ್ತದಿಂದ ಸೂರ್ಯೋದಯದವರೆಗೆ ಸಂಗೀತ ಸಂಜೆ ಹಾಗೂ ಅಹೋರಾತ್ರಿ ಯಕ್ಷಗಾನ ನಡೆಯಲಿದೆ.

ಕದಂಬರ ವೈಭವನ್ನು ಸಾರುವ ಕದಂಬೇಶ್ವರ ದೇವಸ್ಥಾನವು ಪ್ರಾಚೀನ ಕಾಲದ ಸೂಕ್ಷ್ಮ ಹಾಗೂ ಐತಿಹಾಸಿಕ ತಾಣಗಳಲ್ಲೊಂದು. ದೊಡ್ಡದಾದ ಪಾಣಿಪೀಠ ಹಾಗೂ ಈಶ್ವರ ಲಿಂಗವನ್ನು ಹೊಂದಿರುವ ದೇವಸ್ಥಾನದ ಸನಿಹದಲ್ಲಿ ಹಾನಗಲ್ ಕದಂಬ ರಾಜರ ಕೋಟೆಯ ಕುರುಹುಗಳನ್ನು ಕಾಣಬಹುದು. ಶಿರಸಿಯಿಂದ ಕೇವಲ 12 ಕಿ.ಮೀ ದೂರದಲ್ಲಿರುವ ಪ್ರಾಚೀನ ಹಳಗನ್ನಡದ ಶಾಸನಗಳ ಹಾಗೂ ನೂರಾರು ನಾಗರಕಲ್ಲುಗಳ ಮಧ್ಯೆಯ ಇರುವ ದೇಗುಲದಲ್ಲಿ ಶಿವರಾತ್ರಿಯ ಆಚರಣೆಗೆ ವಿಶೇಷ ಅವಕಾಶ ಕಲ್ಪಿಸಲಾಗಿದೆ.

ಶಿವರಾತ್ರಿಯ ಪೂಜೆ ನಂತರ ರಾತ್ರಿ 8.30ಕ್ಕೆ ಗ್ರಾಮಸ್ಥರು ಹಾಗೂ ಕಪ್ಪರಮನೆಯ ಭಜನಾ ತಂಡದಿಂದ ಭಜನೆ, ರಾಜೇಶ ಹೆಗಡೆ ಸಂಗಡಿಗರ ಸಂಗೀತ ನಡೆಯಲಿದೆ. ತಡರಾತ್ರಿ ಕದಂಬೇಶ್ವರನ ವಿಶೇಷ ಪೂಜೆಯ ನಂತರ ಯಕ್ಷ ಕಲಾವಿದರ ಕೂಡುವಿಕೆಯಲ್ಲಿ ‘ಭಸ್ಮಾಸುರ ಮೋಹಿನಿ’ ಆಖ್ಯಾನ ಪ್ರದರ್ಶನಗೊಳ್ಳಲಿದೆ.

ADVERTISEMENT

ಹಿಮ್ಮೇಳದಲ್ಲಿ ಗಣಪತಿ ಹೆಗಡೆ ತಟ್ಟೀಸರ, ಗಜಾನನ ಭಟ್ಟ ತುಳಗೇರಿ ಭಾಗವತರಾಗಿ, ಶ್ರೀಪಾದ ಭಟ್ಟ ಮೂಡಗಾರು ಮದ್ದಲೆಯಲ್ಲಿ, ಗಣೇಶ ಗಾಂವ್ಕರ್ ಚಂಡೆಯಲ್ಲಿ, ಮುಮ್ಮೇಳದಲ್ಲಿ ರಾಮಚಂದ್ರ ಹೆಗಡೆ ಜೋಗಿನಮನೆ, ಗಣಪತಿ ಭಟ್ಟ ಮುದ್ದಿನಪಾಲ್, ಈಶ್ವರ ಭಟ್ಟ ತೆಪ್ಪಗಿ, ಸಂತೋಷ ಹೆಗಡೆ ಹುಳಸೆಮಕ್ಕಿ, ವೆಂಕಟರಮಣ ಹೆಗಡೆ ಕಡಬಾಳ, ಬಾಲಚಂದ್ರ ಹೆಗಡೆ, ಸುದರ್ಶನ ಹೆಗಡೆ, ಜಟ್ಟಿ ಕಡಬಾಳ, ಸ್ತ್ರೀ ಪಾತ್ರದಲ್ಲಿ ಸದಾಶಿವ ಮಲವಳ್ಳಿ ಮತ್ತು ಸಹನಾ ಹೆಗಡೆ, ಗೋಪಾಲ ವೇಷಧಾರಿಗಳಾಗಿ ಪವನ್ ಹೆಗಡೆ, ಕಶ್ಯಪ ಹೆಗಡೆ, ಭರತ ನಾಯ್ಕ, ಅರ್ಪಿತಾ ಹೆಗಡೆ, ಮಾನ್ಯ ಹೆಗಡೆ ಪ್ರಥಮವಾಗಿ ಕಾಣಿಸಿಕೊಳ್ಳುವರು. ಡಿ.ಜಿ ಭಟ್ಟ ಕೋಳಿಗಾರ ವೇಷಭೂಷಣದಲ್ಲಿ ಸಹಕರಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.