ADVERTISEMENT

'ಅನ್ನದಂಗಳದ ಮಾತುಕತೆ' ಕಾರ್ಯಕ್ರಮದಲ್ಲಿ ಶೋಭಾ ಕರಂದ್ಲಾಜೆ- ಸಚಿವರಿಗೆ ಪ್ರಶ್ನೆಗಳು

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2021, 13:48 IST
Last Updated 18 ಸೆಪ್ಟೆಂಬರ್ 2021, 13:48 IST
ಪುಟ್ಟ ದೋಣಿಯನ್ನೇರಿ ಗಂಗಾವಳಿ ನದಿಯನ್ನು ದಾಟಿ ಕೈಗಡಿ ಗ್ರಾಮಕ್ಕೆ ಬಂದ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ
ಪುಟ್ಟ ದೋಣಿಯನ್ನೇರಿ ಗಂಗಾವಳಿ ನದಿಯನ್ನು ದಾಟಿ ಕೈಗಡಿ ಗ್ರಾಮಕ್ಕೆ ಬಂದ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ    

ಕೈಗಡಿ (ಅಂಕೋಲಾ, ಉತ್ತರ ಕನ್ನಡ): ಈ ವರ್ಷ ಉಕ್ಕೇರಿ ಸೇತುವೆ ಆಪೋಷನ ಪಡೆದಿದ್ದ ಗಂಗಾವಳಿಯ ತಟದಲ್ಲಿ ಶನಿವಾರ ವಿಶೇಷ ಸಂಭ್ರಮ. ಪ್ರವಾಹದ ಬಳಿಕ ಎಂದೂ ಬಾರದಷ್ಟು ಜನ, ಜನಪ್ರತಿನಿಧಿಗಳು ತಮ್ಮ ಊರಿಗೆ ಬರುವ ಸಡಗರ. ಜೊತೆಗೇ ತಮ್ಮ ಅಹವಾಲುಗಳನ್ನು ಸಲ್ಲಿಸಬೇಕು ಎಂಬ ಹಂಬಲ.

ಅಂಕೋಲಾ ತಾಲ್ಲೂಕಿನ ಡೊಂಗ್ರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅತ್ಯಂತ ಕುಗ್ರಾಮ ಕೈಗಡಿಯ ಕೃಷಿಕರಾದ ರಾಮಚಂದ್ರ ಹೆಗಡೆ, ಸುಬ್ರಾಯ ಹೆಗಡೆ ಅವರ ಮನೆಯಂಗಳದಲ್ಲಿ ಶನಿವಾರ ನಡೆದ 'ಅನ್ನದಂಗಳದ ಮಾತುಕತೆ' ಕಾರ್ಯಕ್ರಮದಲ್ಲಿ ಕಂಡುಬಂದ ದೃಶ್ಯಗಳಿವು. ಕೃಷಿ ಇಲಾಖೆ ಮತ್ತು ಸಾವಯವ ಕೃಷಿ ಅಭಿಯಾನ ಇದನ್ನು ಆಯೋಜಿಸಿದ್ದವು.

ಪುಟ್ಟ ದೋಣಿಯನ್ನೇರಿ ಗಂಗಾವಳಿ ನದಿಯನ್ನು ದಾಟಿ ಗ್ರಾಮಕ್ಕೆ ಬಂದ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಕಾರ್ಯಕ್ರಮವನ್ನು ಉದ್ಘ‌ಾಟಿಸಿದರು. ಉತ್ತರ ಕನ್ನಡ, ಹಾವೇರಿ, ಗದಗ, ಹಾಸನ, ಚಿಕ್ಕಮಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ನೂರಾರು ರೈತರು ಭಾಗವಹಿಸಿ ಪ್ರಶ್ನೆಗಳನ್ನು ಸಚಿವರ ಮುಂದಿಟ್ಟರು.

ADVERTISEMENT

ರೈತರ ಸಮಸ್ಯೆಗಳನ್ನು ಚರ್ಚಿಸಲು ವಿಧಾನಸಭೆ, ಲೋಕಸಭೆಗಳಲ್ಲಿ ವರ್ಷದಲ್ಲಿ ಕನಿಷ್ಠ ಎರಡು ದಿನವಾದರೂ ವಿಶೇಷ ಅಧಿವೇಶನ ಏರ್ಪಡಿಸಬೇಕು. ಉದ್ಯೋಗ ಖಾತ್ರಿಯಡಿ ದೊಡ್ಡ ಹಿಡುವಳಿದಾರರ ತೋಟದಲ್ಲಿ ಬಸಿಕಾಲುವೆ ಮತ್ತು ಮಣ್ಣಿನ ಏರಿ ನಿರ್ಮಾಣಕ್ಕೆ ಕನಿಷ್ಠ ಎರಡು ಹೆಕ್ಟೇರ್ ಪ್ರದೇಶಕ್ಕೆ ಅವಕಾಶ ಕಲ್ಪಿಸಿಕೊಡಬೇಕು. ಜಮೀನಿನ ಹಕ್ಕುಪತ್ರ ಮಾತ್ರ ಹೊಂದಿದ್ದು, ಪಹಣಿ ಹೊಂದಿಲ್ಲದ ರೈತರಿಗೂ ಸರ್ಕಾರದ ಎಲ್ಲ ಸವಲತ್ತು ಸಿಗುವಂತೆ ಮಾಡಿಕೊಡಬೇಕು, ಪಶು ವೈದ್ಯರ ಕೊರತೆಯನ್ನು ನೀಗಿಸಬೇಕು ಎಂದು ರೈತರು ಆಗ್ರಹಿಸಿದರು.

ಸಚಿವ ಹೆಬ್ಬಾರ ಮಾತನಾಡಿ, 'ಜಿಲ್ಲೆಯಲ್ಲಿ ಅರಣ್ಯಭೂಮಿ ಹಕ್ಕುಪತ್ರಕ್ಕೆ 93,855 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಹಕ್ಕುಪತ್ರ ನೀಡಲು ಮೂರು ತಲೆಮಾರಿನ ದಾಖಲೆ ಸಲ್ಲಿಸಬೇಕು ಎಂದು ಅರಣ್ಯ ಹಕ್ಕು ಕಾಯ್ದೆ 2005ರಲ್ಲಿ ತಿಳಿಸಲಾಗಿದೆ. ಇದರ ಪ್ರಕಾರ 75 ವರ್ಷಗಳ ದಾಖಲೆ ನೀಡುವುದು ಸಾಧ್ಯವಾಗದೇ ಸಮಸ್ಯೆಯಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರದ ಗಮನಕ್ಕೆ ತರಲು ದೆಹಲಿಗೆ ನಿಯೋಗ ಬರುತ್ತೇವೆ. ಇದು ಬಗೆಹರಿದರೆ ರಾಜ್ಯದ ಆರು ಜಿಲ್ಲೆಗಳ 2.39 ಲಕ್ಷ ಕುಟುಂಬಗಳಿಗೆ ಬದುಕು ಕಟ್ಟಿಕೊಡಲು ಸಾಧ್ಯ' ಎಂದರು.

ವಿಧಾನಪರಿಷತ್ ಸದಸ್ಯ ಶಾಂತರಾಮ ಸಿದ್ದಿ ಮಾತನಾಡಿ, 'ಬುಡಕಟ್ಟು ಜನಾಂಗದವರು ಅರಣ್ಯಭೂಮಿ ಹಕ್ಕುಪತ್ರಕ್ಕಾಗಿ ಕಾಯುತ್ತಿದ್ದಾರೆ. 1970ರ ಸುಮಾರಿಗೆ ನಮ್ಮ ತಂದೆ ಏಳು ಎಕರೆ ಜಮೀನು ಹೊಂದಿದ್ದರು. ಈಗ ಅರಣ್ಯ ಕಾಯ್ದೆಯಿಂದಾಗಿ ಕೇವಲ ಐದು ಗುಂಟೆಯಲ್ಲಿ ಜೀವನ ನಡೆಸುತ್ತಿದ್ದೇವೆ' ಎಂದು ಹೇಳಿದರು.

ತಮ್ಮ ಭಾಷಣದಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ ಶೋಭಾ ಕರಂದ್ಲಾಜೆ, 'ನಿಮ್ಮ ಎಲ್ಲ ಆಗ್ರಹಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರದ ಗಮನಕ್ಕೆ ತರಲಾಗುವುದು. ಅರಣ್ಯದ ಬಗ್ಗೆ ನಮ್ಮ ರಾಜ್ಯದಲ್ಲಿ ಇರುವಷ್ಟು ಕಠಿಣವಾದ ನಿಯಮಗಳು ದೇಶದ ಮತ್ತೆಲ್ಲೂ ಇಲ್ಲ' ಎಂದು ಹೇಳಿದರು.

'ಸಾವಯವ ಕೃಷಿ ಪ್ರಮಾಣೀಕರಣವನ್ನು ವಾಣಿಜ್ಯ ಇಲಾಖೆಯಿಂದ ತೆಗೆದು ಕೃಷಿ ಇಲಾಖೆಗೆ ಸೇರಿಸುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಜೊತೆ ಮಾತನಾಡುತ್ತೇನೆ. ಅರಣ್ಯಭೂಮಿ ಹಕ್ಕುಪತ್ರಕ್ಕೆ 75 ವರ್ಷಗಳ ಬದಲು 15 ವರ್ಷಗಳ ದಾಖಲೆ ನೀಡುವಂತೆ ಮಾಡಲು ಸಾಧ್ಯವೇ ಎಂದು ಪರಿಶೀಲಿಸಲಾಗುವುದು' ಎಂದರು.

ಆಹಾರ ಉತ್ಪಾದನೆಯಲ್ಲಿ ದಾಖಲೆ:

'ಕೋವಿಡ್ ಸಂದರ್ಭದಲ್ಲಿಯೂ ದೇಶವು ಆಹಾರ ಉತ್ಪಾದನೆಯಲ್ಲಿ ಗಮನಾರ್ಹ ಸಾಧನೆ ಮಾಡಿದೆ. ಕಳೆದ ವರ್ಷ ದೇಶದಲ್ಲಿ 305 ಮಿಲಿಯನ್ ಟನ್ ಆಹಾರ ಉತ್ಪಾದನೆ ಮಾಡಿದೆ. 326 ಮಿಲಿಯನ್ ಟನ್ ತರಕಾರಿ ಉತ್ಪಾದನೆ ಮಾಡಿದ್ದು ದಾಖಲೆಯಾಗಿದೆ' ಎಂದು ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

'ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ದೇಶದ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಹೆಚ್ಚಿಸಲು ರೈತರಿಗೆ ತರಬೇತಿ ಮತ್ತು ಮಾಹಿತಿ ಅವಶ್ಯವಿದೆ. ರೈತರ ಆದಾಯ ದ್ವಿಗುಣಗೊಳಿಸಲು ಅಗತ್ಯ ಯೋಜನೆಗಳನ್ನು ಕೈಗೊಳ್ಳಲಾಗುತ್ತಿದೆ. ಆಹಾರ ಸಂಸ್ಕರಣೆ ಮತ್ತು ಸಂಗ್ರಹಣೆ ಸುಧಾರಿಸಲು ಪ್ರಯತ್ನಿಸಲಾಗುತ್ತಿದೆ' ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.