ADVERTISEMENT

ಹರಕೆ ರಥಕ್ಕೆ ಶೃಂಗೇರಿ ಶ್ರೀಗಳಿಂದ ಪೂಜೆ

ಬನವಾಸಿಗೆ ಭೇಟಿ ನೀಡಿದ ಶ್ರೀಗಳು

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2019, 13:12 IST
Last Updated 29 ಏಪ್ರಿಲ್ 2019, 13:12 IST
ಶಿರಸಿ ತಾಲ್ಲೂಕಿನ ಬನವಾಸಿಯ ಹರಕೆ ರಥಕ್ಕೆ ಶೃಂಗೇರಿ ಶ್ರೀಗಳು ಪೂಜೆ ಸಲ್ಲಿಸಿದರು
ಶಿರಸಿ ತಾಲ್ಲೂಕಿನ ಬನವಾಸಿಯ ಹರಕೆ ರಥಕ್ಕೆ ಶೃಂಗೇರಿ ಶ್ರೀಗಳು ಪೂಜೆ ಸಲ್ಲಿಸಿದರು   

ಶಿರಸಿ: ತಾಲ್ಲೂಕಿನ ಬನವಾಸಿ ಮಧುಕೇಶ್ವರ ದೇವಾಲಯದ ಹರಕೆ ರಥ ಸೇವೆಗೆ ಶೃಂಗೇರಿಯ ಜಗದ್ಗುರು ವಿಧುಶೇಖರ ಭಾರತಿ ಸ್ವಾಮೀಜಿ ಸೋಮವಾರ ಚಾಲನೆ ನೀಡಿದರು. ಶ್ರೀಗಳು ಹರಕೆ ರಥಕ್ಕೆ ಪೂಜೆ ಸಲ್ಲಿಸಿದರು.

ಭಕ್ತರು ಹರಕೆ ಹೊತ್ತುಕೊಂಡಾಗ ಈ ರಥವನ್ನು ದೇವಾಲಯದ ಪ್ರಾಂಗಣದಲ್ಲಿ ತಿರುಗಿಸಲಾಗುತ್ತದೆ. ಇದಕ್ಕೂ ಪೂರ್ವದಲ್ಲಿ ಶ್ರೀಗಳು ಮಧುಕೇಶ್ವರ ದೇವರು, ಪಾರ್ವತಿ ಅಮ್ಮನವರು, ನರಸಿಂಹ ದೇವರು, ಅರ್ಧ ಗಣಪತಿಗೆ ಪೂಜೆ ಸಲ್ಲಿಸಿದರು. ದರ್ಶನಕ್ಕೆ ಬಂದಿದ್ದ ಭಕ್ತರಿಗೆ ಮಂತ್ರಾಕ್ಷತೆ ನೀಡಿದರು.

ಭಾನುವಾರ ಸಂಜೆ ದೇವಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ‘ಆಸ್ತಿಕತೆಯಿಂದ ಕಾರ್ಯ ಮಾಡಿದಾಗ ಮಾತ್ರ ಭಗವಂತನ ದರ್ಶನ ಸಾಧ್ಯವಾಗುತ್ತದೆ ಮತ್ತು ಮೋಕ್ಷ ಪ್ರಾಪ್ತಿಯಾಗುತ್ತದೆ. ಕೆಲವರು ದೇವರೇ ಇಲ್ಲವೆಂಬ ನಾಸ್ತಿಕ ವಾದ ಸೃಷ್ಟಿಸಿ, ಗೊಂದಲ ಮಾಡುತ್ತಾರೆ. ಭಗವಂತ ಇದ್ದಾನೆಂಬ ನಂಬಿಕೆಯಿಂದ ಧಾರ್ಮಿಕ ಮಾನಸಿಕತೆಯಲ್ಲಿದ್ದವರು ಸಂತೃಪ್ತ ಜೀವನ ನಡೆಸುತ್ತಾರೆ’ ಎಂದರು.

ADVERTISEMENT

ಶಾಸ್ತ್ರ ಯಾವತ್ತೂ ವ್ಯರ್ಥವಾಗುವುದಿಲ್ಲ. ಸಂಪ್ರದಾಯಬದ್ಧವಾಗಿ ಇದ್ದಾಗ ಮಾತ್ರ ಗೆಲುವು ಕಾಣಬಹುದು. ಪಾಪ ಮಾಡಿ ಪುಣ್ಯಕ್ಷೇತ್ರಗಳಿಗೆ ಹೋಗುವ ಜನರು, ಅಲ್ಲಿ ಹೋಗಿ ಬಂದು ಮತ್ತೆ ಪಾಪ ಮಾಡಿದರೆ ಅದಕ್ಕೆ ಪರಿಹಾರ ಇರುವುದಿಲ್ಲ. ಕರ್ಮ ಭಾಗವನ್ನು ಅಭಿವೃದ್ಧಿ ದಿಸೆಯಲ್ಲಿ ಸಾಗುವಂತೆ ಮಾಡಿದರೆ, ಜ್ಞಾನ ಮೋಕ್ಷದ ಮಾರ್ಗ ತೋರಿಸುತ್ತದೆ ಎಂದು ಹೇಳಿದರು.

ಶ್ರೀಗಳನ್ನು ಪಂಪವೃತ್ತದಲ್ಲಿ ಸ್ವಾಗತಿಸಿ, ಅದ್ಧೂರಿ ಮೆರವಣಿಗೆಯಲ್ಲಿ ದೇವಸ್ಥಾನಕ್ಕೆ ಕರೆದೊಯ್ಯಲಾಯಿತು. ಶ್ರೀಧರ ಶಂಕರ ಶೆಟ್ಟಿ ಕುಟುಂಬದವರು ಪಾದಪೂಜೆ ನೆರವೇರಿಸಿದರು. ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ರಾಜಶೇಖರ ಒಡೆಯರ್, ಶಾಸಕ ಶಿವರಾಮ ಹೆಬ್ಬಾರ್, ಗ್ರಾಮ ಪಂಚಾಯ್ತಿ ಅಧ್ಯಕ್ಷ ಗಣೇಶ ಸಣ್ಣಲಿಂಗಣ್ಣನವರ್ ಇದ್ದರು. ಇತಿಹಾಸ ತಜ್ಞ ಡಾ.ಎ.ಕೆ.ಶಾಸ್ತ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೀತಾ ಶೆಟ್ಟಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.