ADVERTISEMENT

ಶಿರಸಿಗೆ ಬಂದಿದ್ದ ‘ನಡೆದಾಡುವ ದೇವರು’

ಬಣ್ಣದ ಮಠದಲ್ಲಿ ನಡೆದಿದ್ದ ಗುರುವಂದನೆ ಕಾರ್ಯಕ್ರಮ ಅಚ್ಚಳಿಯದ ನೆನಪು

ಸಂಧ್ಯಾ ಹೆಗಡೆ
Published 21 ಜನವರಿ 2019, 16:19 IST
Last Updated 21 ಜನವರಿ 2019, 16:19 IST
ಶಿರಸಿಯ ಬಣ್ಣದ ಮಠಕ್ಕೆ ಬಂದಿದ್ದ ಸಿದ್ಧಗಂಗಾ ಶ್ರೀಗಳು ಆಶೀರ್ವಚನ ನೀಡುತ್ತಿರುವುದನ್ನು ಕುತೂಹಲದಿಂದ ಸ್ವರ್ಣವಲ್ಲಿ ಸ್ವಾಮೀಜಿ ಗಮನಿಸುತ್ತಿದ್ದರು (2009 ನವೆಂಬರ್ 12ರ ಚಿತ್ರ)
ಶಿರಸಿಯ ಬಣ್ಣದ ಮಠಕ್ಕೆ ಬಂದಿದ್ದ ಸಿದ್ಧಗಂಗಾ ಶ್ರೀಗಳು ಆಶೀರ್ವಚನ ನೀಡುತ್ತಿರುವುದನ್ನು ಕುತೂಹಲದಿಂದ ಸ್ವರ್ಣವಲ್ಲಿ ಸ್ವಾಮೀಜಿ ಗಮನಿಸುತ್ತಿದ್ದರು (2009 ನವೆಂಬರ್ 12ರ ಚಿತ್ರ)   

ಶಿರಸಿ: ‘ಸಿದ್ಧಗಂಗಾ ಶ್ರೀಗಳ ಪ್ರಶಾಂತ ನೋಡುತ್ತಿದ್ದರೆ ಮನಸ್ಸಿಗೆ ಸಮಾಧಾನವಾಗುತ್ತದೆ, ಮಗುವಿನಂಥ ಮುಗ್ಧತೆ ಅವರನ್ನೇ ನೋಡುತ್ತಿರಬೇಕು ಎಂದು ಕಾಣುತ್ತದೆ’ ಎಂದು ಸ್ವರ್ಣವಲ್ಲಿ ಸ್ವಾಮೀಜಿ ಒಂಬತ್ತು ವರ್ಷಗಳ ಹಿಂದೆ ಉದ್ಘರಿಸಿದ್ಧ ನುಡಿ ಇನ್ನೂ ಹಸಿರಾಗಿದೆ.

2009ರ ನವೆಂಬರ್ 12ರಂದು ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ನಗರಕ್ಕೆ ಭೇಟಿ ನೀಡಿದ್ದರು. ಅವರು 102 ವರ್ಷದಲ್ಲಿದ್ದಾಗ ಇಲ್ಲಿನ ಬಣ್ಣದ ಮಠಕ್ಕೆ ಬಂದು ಗುರುವಂದನೆ ಸ್ವೀಕರಿಸಿದ್ದರು. ಇದೇ ವೇದಿಕೆಯಲ್ಲಿದ್ದ ಸ್ವರ್ಣವಲ್ಲಿ ಸ್ವಾಮೀಜಿ, ಸಿದ್ಧಗಂಗಾ ಶ್ರೀಗಳನ್ನು ಕಂಡು ಪ್ರಸನ್ನರಾಗಿ, ಆಶೀರ್ವಚನ ಆರಂಭಿಸುವ ಪೂರ್ವದಲ್ಲಿ ಐದು ನಿಮಷ ‘ನಡೆದಾಡುವ ದೇವರ’ ಬಗ್ಗೆ ಮಾತನಾಡಿದ್ದರು.

‘ಸ್ವಾಮೀಜಿ ನಮ್ಮ ಮಠದಲ್ಲಿ ಬಹಳ ಹೊತ್ತು ಇದ್ದರು. ಮಠದಲ್ಲಿಯೇ ಇಷ್ಟಲಿಂಗ ಪೂಜೆ ನೆರವೇರಿಸಿದ್ದರು. ನಾನೇ ಸ್ವತಃ ಅವರ ಪಾದಪೂಜೆ ಮಾಡಿದ್ದೆ. ತುಂಬಾ ಚೆನ್ನಾಗಿ ಮಠವನ್ನು ನಡೆಸಿಕೊಂಡು ಹೋಗುತ್ತಿದ್ದೀರಿ. ಎಲ್ಲರಿಗೂ ಒಳಿತಾಗಲಿ ಎಂದು ಶ್ರೀಗಳು ಹಾರೈಸಿದ್ದರು’ ಎಂದು ಬಣ್ಣದ ಮಠದ ವ್ಯವಸ್ಥಾಪಕ ಎಸ್‌.ಬಿ.ಹಿರೇಮಠ ಆಗಿನ ಸಂದರ್ಭವನ್ನು ನೆನಪಿಸಿಕೊಂಡರು.

ADVERTISEMENT

‘ನೈತಿಕ ಮೌಲ್ಯಗಳು ಅಧಃಪತನದತ್ತ ಸಾಗಿವೆ. ಮನುಷ್ಯನು ಆಸ್ತಿ, ಸಂಪತ್ತು, ಅಧಿಕಾರದ ಗುಲಾಮನಾಗುತ್ತಿದ್ದಾನೆ. ಯುವಜನರು ಮುಂದೆ ಬಂದು ಸಮಾಜದದ ನೈಜ ಮೌಲ್ಯವನ್ನು ಎತ್ತಿಹಿಡಿಯಬೇಕು. ವಿಜ್ಞಾನ ಮತ್ತು ತಂತ್ರಜ್ಞಾನಗಳು ಓಡುತ್ತಿವೆ, ನೈತಿಕ ಮೌಲ್ಯಗಳು ಕುಂಟುತ್ತಿವೆ. ಪರಿಣಾಮವಾಗಿ ಮನುಷ್ಯನಲ್ಲಿ ಅಂತಃಸತ್ವ ಕುಸಿತಗೊಂಡು, ಭ್ರಷ್ಟಾಚಾರ, ಭಯೋತ್ಪಾದನೆಯಂತಹ ಕೃತ್ಯಗಳು ಹೆಚ್ಚುತ್ತಿವೆ. ಭಾರತವು ತನ್ನ ಗಟ್ಟಿ ಬೇರಾಗಿರುವ ಆಧ್ಮಾತ್ಮಿಕ ಶಕ್ತಿಯಿಂದ ದೇಶವನ್ನು ಬೆಳಗುವುದಲ್ಲದೇ, ಇಡೀ ಜಗತ್ತಿನ ಮೇಲೆ ಪ್ರಭಾವ ಬೀರುವಂತಾಗಬೇಕು’ ಎಂದು ಸಿದ್ಧಗಂಗಾ ಶ್ರೀಗಳು ಧರ್ಮಸಭೆಯಲ್ಲಿ ನುಡಿದಿದ್ದ ಮಾತು, ಸಭೆಯಲ್ಲಿ ಭಾಗವಹಿಸಿದ್ದವರಿಗೆ ಅಚ್ಚಳಿಯದ ನೆನಪು.

ಬಸವತತ್ವ ಚಿಂತನಗೋಷ್ಠಿಯಲ್ಲೂ ಶ್ರೀಗಳು ಮಾತನಾಡಿದ್ದರು, ಅವರ ಜೊತೆಗೆ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಬಣ್ಣದ ಮಠದ ಶಿವಲಿಂಗ ಸ್ವಾಮೀಜಿ ಸಹ ಇದ್ದರು. ಸಿದ್ಧಗಂಗಾ ಶ್ರೀಗಳು ಇಲ್ಲಿನ ಮಾಡರ್ನ್ ಎಜುಕೇಷನ್ ಸೊಸೈಟಿಯು ಪ್ರಾರಂಭಿಸಿಲು ಉದ್ದೇಶಿಸಿದ್ದ ಎಂಜಿನಿಯರಿಂಗ್ ಕಾಲೇಜಿಗೆ ಗುದ್ದಲಿಪೂಜೆ ನೆರವೇರಿಸಿದ್ದರು.

ಸರಸರನೆ ವಾಹನವಿಳಿದು, ಚುರುಕಿನಿಂದ ನಡೆದಾಡುತ್ತಿದ್ದ ಶತಾಯುಷಿ ಶ್ರೀಗಳನ್ನು ಜನರು ಅಚ್ಚರಿಯಿಂದ ನೋಡುತ್ತಿದ್ದರು. ಶ್ರೀಗಳ ದರ್ಶನ ಪಡೆಯಲೆಂದೇ ಅಂದು ವಿವಿಧೆಡೆಗಳಿಂದ ಭಕ್ತರು ಬಣ್ಣದ ಮಠಕ್ಕೆ ಬಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.