
ಸಿದ್ದಾಪುರ: ‘ಹವಾಮಾನ ವೈಪರಿತ್ಯ ಹಾಗೂ ವಿವಿಧ ರೋಗದಿಂದಾಗಿ ರೈತರು ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ರೈತರು ಉಪಬೆಳೆಗಳತ್ತ ಗಮನಹರಿಸಬೇಕು’ ಎಂದು ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಹೇಳಿದರು.
ಪಟ್ಟಣದ ಹೊಸೂರಿನ ತೋಟಗಾರಿಕಾ ತರಬೇತಿ ಕೇಂದ್ರದಲ್ಲಿ ತಾಳೆ ಬೆಳೆ ಬೇಸಾಯ ಕ್ರಮ ಹಾಗೂ ಮಾರುಕಟ್ಟೆ ವ್ಯವಸ್ಥೆ ಕುರಿತು ಬುಧವಾರ ನಡೆದ ತರಬೇತಿ ಶಿಬಿರದಲ್ಲಿ ಅವರು ಮಾತನಾಡಿದರು.
‘ರೈತರು ಸರ್ಕಾರದ ಸೌಲಭ್ಯ ಪಡೆದು ಉಪಬೆಳೆ ಬೆಳೆಯಲು ಮುಂದಾಗಬೇಕು. ಸರ್ಕಾರ ತಾಳೆ ಬೆಳೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದು, ರೈತರು ಸರಿಯಾದ ಮಾಹಿತಿ ಪಡೆದು ತಾಳೆ ಕೃಷಿ ಮಾಡಬೇಕು’ ಎಂದರು.
ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಬಿ.ಪಿ. ಸತೀಶ ಮಾತನಾಡಿ, ‘ಜಿಲ್ಲೆ ತೋಟಗಾರಿಕಾ ಕ್ಷೇತ್ರವಾಗಿದ್ದು, ಅಡಿಕೆ ಬಿಟ್ಟು ಬೇರೆ ಬೆಳೆಯತ್ತ ಗಮನ ಹರಿಸಲಿಲ್ಲ. ದೇಶದಲ್ಲಿ ಅಡುಗೆ ಎಣ್ಣೆಗೆ ಭಾರಿ ಬೇಡಿಕೆಯಿದ್ದು, ಉತ್ಪಾದನೆ ತೀರಾ ಕಡಿಮೆಯಿದೆ. ಕಾರಣ ಸರ್ಕಾರ ತಾಳೆ ಬೆಳೆಗೆ ಪ್ರೋತ್ಸಾಹ ನೀಡುತ್ತಿದೆ’ ಎಂದರು.
ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ಜಿ. ನಾಗರಾಜ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ವೇಳೆ ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ವೀರಭದ್ರ ನಾಯ್ಕ, ಸಂಪನ್ಮೂಲ ವ್ಯಕ್ತಿಗಳಾದ ಶ್ರೀಶೈಲ ಕುಪ್ಪಗಡ್ಡಿ, ಶ್ರೀಕಾಂತ ಇದ್ದರು. ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಅರುಣ ಎಚ್.ಜಿ ಸ್ವಾಗತಿಸಿದರು.