ADVERTISEMENT

ಪಶ್ಚಿಮಘಟ್ಟ ಅರಣ್ಯ ಸಂರಕ್ಷಣಾ ಯೋಜನೆ ಜಾರಿಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 7 ಜನವರಿ 2025, 13:31 IST
Last Updated 7 ಜನವರಿ 2025, 13:31 IST

ಶಿರಸಿ: ರಾಜ್ಯದ ಪಶ್ಚಿಮಘಟ್ಟದಲ್ಲಿ 153.8 ಚದರ ಕಿಮೀ ಅರಣ್ಯ ಕಳೆದ 10 ವರ್ಷಗಳಲ್ಲಿ ನಾಶ ಆಗಿದೆ ಎಂದು ಭಾರತ ಸರ್ಕಾರದ ಭಾರತೀಯ ಅರಣ್ಯ ಸಮೀಕ್ಷಾ ವರದಿ ಪ್ರಕಟಿಸಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ನಾಶ ತಡೆಗಟ್ಟಲು ಕೈಗೊಳ್ಳಬೇಕಾದ ತುರ್ತು ಕ್ರಮಗಳು, ಪ್ರಚಲಿತ ಸ್ಥಿತಿಗತಿ ಬಗ್ಗೆ ವೃಕ್ಷಲಕ್ಷ ಆಂದೋಲನದ ತಜ್ಞರ ತಂಡ ವಿಶೇಷ ವರದಿ, ಶಿಫಾರಸ್ಸನ್ನು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೆ ಸಲ್ಲಿಸಿದೆ.

ಈ ಕುರಿತು ಪ್ರಕಟಣೆ ನೀಡಿರುವ ವೃಕ್ಷಲಕ್ಷ ಆಂದೋಲನ ಅಧ್ಯಕ್ಷ ಅನಂತ ಅಶೀಸರ, ಸುಸ್ಥಿರ, ಜನ ಸಹಭಾಗಿತ್ವದ ಪಶ್ಚಿಮ ಘಟ್ಟದ ಅರಣ್ಯ ಸಂರಕ್ಷಣಾ ಯೋಜನೆ ರೂಪಿಸಿ ಜಾರಿ ಮಾಡಬೇಕು. 2025-26 ರಲ್ಲಿ ಹಸಿರು ಬಜೆಟ್, ಮಂಡಿಸಬೇಕು. ಕಾನು ಅರಣ್ಯ ಸಂರಕ್ಷಣೆ ಅಭಿವೃದ್ಧಿ ಯೋಜನೆ ಜಾರಿ ಮಾಡಬೇಕು. ಅರಣ್ಯ ಇಲಾಖೆಯನ್ನು ಚುರುಕುಗೊಳಿಸಲು ಮುಂದಾಗಬೇಕು ಎಂದು ಶಿಫಾರಸು ಮಾಡಲಾಗಿದೆ. 

ಕಂದಾಯ ಕಾನು ಅರಣ್ಯ ರಕ್ಷಣೆಗೆ ರಾಜ್ಯ ಕಂದಾಯ ಹಾಗೂ ಅರಣ್ಯ ಇಲಾಖೆ ಕಾರ್ಯದರ್ಶಿಗಳು ಜಂಟಿ ಸಭೆ, ಸ್ಥಳ ಭೇಟಿ ಮಾಡಬೇಕು. ನಿಗದಿತ ಪರಿಶಿಲನಾ ಸಭೆ ನಡೆಸಬೇಕು. ಹಳ್ಳಿಗಳಲ್ಲಿ ಗ್ರಾಮ ಅರಣ್ಯ ಸಮೀತಿ ರಚಿಸಬೇಕು. ಜಿಲ್ಲಾ ಸಾಮಾಜಿಕ ಅರಣ್ಯ ವಿಭಾಗ, ಪಂಚಾಯಿತಿ ಜೀವ ವೈವಿಧ್ಯ ಸಮಿತಿಗಳಿಗೆ ಜೀವ ತುಂಬಬೇಕು. ಪಶ್ಚಿಮ ಘಟ್ಟದ ಅರಣ್ಯಗಳ ರಕ್ಷಣೆ ಬಗ್ಗೆ ಚಳಿಗಾಲದ ವಿಧಾನ ಸಭಾ ಅಧಿವೇಶನದಲ್ಲಿ ಒಂದು ದಿನ ಸಮಯ ಮೀಸಲು ಇಡಬೇಕು. ಬಜೆಟ್​ನಲ್ಲಿ ವಿಶೇಷ ಅನುದಾನ ನೀಡಲು ಸರ್ಕಾರ ಅರಣ್ಯ ಸಚಿವರು ಮುಂದಾಗಬೇಕು ಎಂದು ಒತ್ತಾಯ ಮಾಡಲಾಗಿದೆ.

ADVERTISEMENT

ಅರಣ್ಯ ಭವನದ ಉನ್ನತ ಅಧಿಕಾರಿಗಳಿಗೆ ಶಿವಮೊಗ್ಗ ಸೇರಿದಂತೆ ಪಶ್ಚಿಮಘಟ್ಟದ ಸೂಕ್ಷ್ಮ ಅರಣ್ಯ ವಿಭಾಗಗಳ ರಕ್ಷಣಾ ಜವಾಬ್ದಾರಿ ನೀಡಬೇಕು. ಉನ್ನತ ಅಧಿಕಾರಿಗಳು ಘಟ್ಟ ಪ್ರದೇಶಕ್ಕೆ ಭೇಟಿ ನೀಡಬೇಕು. ಕರಾವಳಿ ಹಸಿರು ಕವಚ ಯೋಜನೆ ಕಾರವಾರ ಗ್ರೀನ್ ಬೆಲ್ಟ ಯೋಜನೆ, ಶಿವಮೊಗ್ಗ ಕಾನು ಅಭಿವೃದ್ಧಿ ಯೋಜನೆ, ಉ.ಕ ಜಿಲ್ಲೆಯ ಬೆಟ್ಟ ಅಭಿವೃದ್ಧಿ ಯೋಜನೆ, ಹಾಸನ-ತುಮಕೂರಿನ ಅಮೃತ ಮಹಲ್ ಕಾವಲ್ ರಕ್ಷಣಾ ಯೋಜನೆ, ಔಷಧಿ ಮೂಲಿಕೆಗಳ ಸಂರಕ್ಷಿತ ಪ್ರದೇಶ ರಕ್ಷಣಾ ಯೋಜನೆಗಳನ್ನು ಪುನಃ ಜಾರಿಗೊಳಿಸಲು ಹಕ್ಕೊತ್ತಾಯದ ಮನವಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.