
ಶಿರಸಿ: ಅಡಿಕೆ ಬೆಳೆಗಾರರು ಹಲವು ಸಮಸ್ಯೆ ಹಾಗೂ ಸಂಕಷ್ಟಗಳನ್ನು ಎದುರಿಸುತ್ತಿದ್ದರೂ ಪ್ರತಿ ವರ್ಷ ಗಣನೀಯ ಪ್ರಮಾಣದಲ್ಲಿ ಹೊಸ ಅಡಿಕೆ ತೋಟಗಳನ್ನು ಮಾಡುವ ಕಡೆ ರೈತರು ಒಲವು ತೋರಿಸುತ್ತಿದ್ದಾರೆ. ಪ್ರಸಕ್ತ ವರ್ಷವೂ ತೋಟ ಸಿದ್ಧತೆಯಲ್ಲಿರುವ ರೈತರ ಸಂಖ್ಯೆ ಹೆಚ್ಚಿದ್ದು, ಅಡಿಕೆ ಸಸಿಗಳಿಗೆ ವ್ಯಾಪಕ ಬೇಡಿಕೆ ಬಂದಿದೆ.
ಒಂದೂವರೆ ದಶಕದ ಹಿಂದೆ ಜಿಲ್ಲೆಯಲ್ಲಿ 25 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆಯನ್ನು ಬೆಳೆಯಲಾಗುತ್ತಿತ್ತು. ನಂತರ ಹದಿನೈದು ವರ್ಷಗಳಲ್ಲಿ ಈ ಪ್ರಮಾಣ 32 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ಬಂದು ಮುಟ್ಟಿದೆ. ಸಾಮಾನ್ಯವಾಗಿ ಪ್ರತಿ ವರ್ಷ ಗರಿಷ್ಠ 200ರಿಂದ 300 ಎಕರೆ ಪ್ರದೇಶದಲ್ಲಿ ಮಾತ್ರ ಹೊಸದಾಗಿ ಅಡಿಕೆ ತೋಟಗಳನ್ನು ಮಾಡಲು ರೈತರು ಮುಂದಾಗುತ್ತಿದ್ದರು. ಮೂರು ವರ್ಷಗಳಿಂದ ಅಡಿಕೆಗೆ ಉತ್ತಮ ದರ ಸಿಗುತ್ತಿರುವ ಪರಿಣಾಮವಾಗಿ ಪ್ರತಿ ವರ್ಷ ಸಾವಿರಾರು ಎಕರೆ ಪ್ರದೇಶದಲ್ಲಿ ಹೊಸ ಅಡಿಕೆ ತೋಟ ತಲೆ ಎತ್ತುತ್ತಿದೆ.
‘ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ರೈತರು ಹೊಸ ಅಡಿಕೆ ತೋಟಗಳನ್ನು ಮಾಡಲು ಮುಂದಾಗಿರುವುದರಿಂದ ಅಡಿಕೆ ಸಸಿಗಳಿಗೆ ಬೇಡಿಕೆ ಬಂದಿದೆ. ಸಾಮಾನ್ಯವಾಗಿ ಕಳೆದ ವರ್ಷ 1 ಅಡಿಕೆ ಸಸಿಯನ್ನು ₹20ರಂತೆ ಮಾರಾಟ ಮಾಡಿದ್ದೆವು. ನಾವು ನಮ್ಮ ಜಮೀನಿನಲ್ಲಿ 3 ಸಾವಿರ ಅಡಿಕೆ ಸಸಿಗಳನ್ನು ಬೆಳೆಸಿದ್ದೇವೆ. ಈ ವರ್ಷ ಅದೇ ಅಡಿಕೆ ಸಸಿಗಳನ್ನು ₹30ರಿಂದ ₹40ಕ್ಕೆ ಮಾರಾಟ ಮಾಡುತ್ತಿದ್ದೇವೆ. ಬೇಡಿಕೆ ಹೆಚ್ಚಾದ ಕಾರಣದಿಂದಾಗಿ ಅಡಿಕೆ ಸಸಿಯ ಬೆಲೆಯೂ ಏರಿಕೆಯಾಗಿದೆ’ ಎನ್ನುತ್ತಾರೆ’ ಅಡಿಕೆ ಸಸಿ ಬೆಳೆಸಿ ಮಾರಾಟ ಮಾಡುತ್ತಿರುವ ತಾಲ್ಲೂಕಿನ ಕೊಪ್ಪದ ಕೃಷಿಕ ಕೃಷ್ಣ ಭಟ್.
‘ಮೂರು ವರ್ಷಗಳಿಂದ ಅಡಿಕೆಗೆ ಉತ್ತಮ ದರ ಸಿಕ್ಕಿರುವುದರಿಂದ ಉತ್ತೇಜನಗೊಂಡ ರೈತರು ಹೊಸ ಅಡಿಕೆ ತೋಟಗಳನ್ನು ಮಾಡಲು ಮುಂದಾಗುತ್ತಿದ್ದಾರೆ. ಎಕರೆಗೆ 560 ಗಿಡದಂತೆ ಲೆಕ್ಕಹಾಕಿ ರೈತರು ಮುಂಗಡವಾಗಿ ಹಣ ಕೊಟ್ಟು ಅಡಿಕೆ ಸಸಿಗಳಿಗೆ ಬೇಡಿಕೆ ಸಲ್ಲಿಸಿದ್ದಾರೆ. ದೀರ್ಘ ಮಳೆಗಾಲವಾದ ಕಾರಣ ಕೆಲವೆಡೆ ನಾಟಿ ಮಾಡಿದ ಗಿಡಗಳು ಹಾಳಾಗಿವೆ. ಅಂಥ ಕಡೆಗಳಿಂದಲೂ ಬೇಡಿಕೆ ಬರುತ್ತಿದೆ’ ಎನ್ನುತ್ತಾರೆ ಅವರು.
‘ಮೂರು ವರ್ಷಗಳಿಂದ ಉತ್ತಮವಾಗಿ ಮಳೆಯಾಗುತ್ತಿರುವುದರಿಂದ ಅರೆ ಬಯಲುಸೀಮೆ ಪ್ರದೇಶವಾದ ಬನವಾಸಿ, ಮುಂಡಗೋಡ ಭಾಗಗಳ ಕೆರೆಗಳು ತುಂಬುತ್ತಿರುವುದರಿಂದ ರೈತರು ಹೊಸದಾಗಿ ಅಡಿಕೆ ತೋಟ ಮಾಡಲು ಮುಂದಾಗುತ್ತಿದ್ದಾರೆ’ ಎಂದು ಹೊಸದಾಗಿ ಅಡಿಕೆ ತೋಟ ಮಾಡಿರುವ ದಾಸನಕೊಪ್ಪದ ರೈತ ಪರಶುರಾಮ ತಿಳಿಸಿದರು.
Highlights - ಒಂದು ಅಡಿಕೆ ಸಸಿಗೆ ₹30–₹40 ಎಕರೆಗೆ ಬೇಕು 560 ಸಸಿ ಸಾವಿರಾರು ಎಕರೆ ತೋಟ ನಿರ್ಮಾಣಕ್ಕೆ ಒಲವು
Quote - ಮುಂಗಾರು ಬೇಗ ಆರಂಭವಾದ ಕಾರಣಕ್ಕೆ ಹಲವರಿಗೆ ಜೂನ್ ಆರಂಭಕ್ಕೆ ತೋಟ ನಿರ್ಮಿಸಲಾಗಿಲ್ಲ. ಬಹುತೇಕರು ರೈತರು ಈಗ ಹೊಸ ತೋಟ ನಿರ್ಮಾಣಕ್ಕೆ ಮುಂದಾಗಿದ್ದಾರೆ. ರಾಜಾರಾಮ ಹೆಗಡೆ ಪ್ರಗತಿಪರ ಕೃಷಿಕ
Cut-off box - ಸಾವಯವಕ್ಕೆ ಹೆಚ್ಚಿನ ಬೇಡಿಕೆ: ಹೊಸ ಅಡಿಕೆ ತೋಟ ಮಾಡಲು ಸಸಿಗಳು ಮುಖ್ಯವಾಗಿರುತ್ತವೆ. ಇಂತಹ ಸಸಿಗಳನ್ನು ರೈತರು ತಮ್ಮ ಹೊಲಗಳಲ್ಲಿ ಅಥವಾ ಹಿತ್ತಲಿನಲ್ಲಿ ಬೆಳೆದು ಮುಂಗಾರು ಇಲ್ಲವೇ ಹಿಂಗಾರು ಹಂಗಾಮಿನಲ್ಲಿ ಸಸಿಗಳನ್ನು ಮಾರಾಟ ಮಾಡುತ್ತಾರೆ. ಗುಣಮಟ್ಟದ ಅಡಿಕೆ ಗೋಟುಗಳನ್ನು ತಂದು ಭೂಮಿಯಲ್ಲಿ ಹಾಕಿ ಬೆಳೆಸುತ್ತಾರೆ. ನಂತರ ಏಳೆಂಟು ತಿಂಗಳಾದ ಮೇಲೆ ಈ ಸಣ್ಣ ಸಸಿಗಳನ್ನು ಪ್ಲಾಸ್ಟಿಕ್ ಪ್ಯಾಕೆಟ್‌ಗಳಿಗೆ ಹಾಕಿ ಬೆಳೆಸುತ್ತಾರೆ. ಸಾವಯವ ಮಾದರಿಯಲ್ಲಿ ಬೆಳೆಯುವ ಸಸಿಗಳಿಗೆ ಹೆಚ್ಚಿನ ಬೇಡಿಕೆ ಇದೆ. ಹೀಗೆ ಬೆಳೆಸಿದ ಗುಣ ಮಟ್ಟದ ಅಡಿಕೆ ಸಸಿಗಳನ್ನು ರೈತರು ಖರೀದಿಸಿಕೊಂಡು ಹೋಗಿ ಹೊಸ ತೋಟಗಳಲ್ಲಿ ಗುಂಡಿಗಳನ್ನು ತೋಡಿ ನೆಡುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.